ಶಿವಮೊಗ್ಗ: n.23 :ಮಲೆನಾಡಿನ ಜನರ ಬಹುಕಾಲದ ಬೇಡಿಕೆಯಾಗಿರುವ ಅರಣ್ಯ ಭೂಮಿ ಹಕ್ಕು ಮತ್ತು ಮುಳುಗಡೆ ಸಂತ್ರಸ್ಥರಿಗೆ ಶಾಶ್ವತ ಪರಿಹಾರ ಕೊಡಿಸುವುದು ನಮ್ಮ ಸರ್ಕಾರ ಸಂಕಲ್ಪವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ತೆಗದುಕೊಳ್ಳಬೇಕಾದ ತನ್ನ ಕ್ರಮಗಳನ್ನು ಮಂಬರುವ ಅಧಿವೇಶನದೊಳಗೆಯೇ ಪ್ರಕಟಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಈಗ ನ್ಯಾಯಾಲಯದ ಮುಂದಿದೆ. ಅದು ಬಗೆಹರಿಯದೆ ಉಳಿದಿರುವುದಕ್ಕೆ ಹಿಂದಿನ ಸರ್ಕಾರ ಮಾಡಿದ ತಪ್ಪುಗಳೂ ಇವೆ. ಅವುಗಳನ್ನು ನಾವೀಗ ಸರಿಪಡಿಸಿಕೊಂಡೇ ಮುಂದಿನ ಹೆಜ್ಜೆಗಳನ್ನು ಇಡಬೇಕಿದೆ. ನ್ಯಾಯಾಲಯದಲ್ಲಿ ಈ ಬಗ್ಗೆ ಹೋರಾಟ ನಡೆಸಲು ಈಗಾಗಲೇ ರಾಜ್ಯ ಸರ್ಕಾರವು ಹಿರಿಯ ವಕೀಲರನ್ನು ನೇಮಿಸಿದೆ. ಅದರ ಜತೆಗೆ ಹಿಂದಿನ ಸರ್ಕಾರ ಮಾಡಿದ ತಪ್ಪುಗಳನ್ನು ನಾವು ಸರಿಪಡಿಸಿಕೊಂಡೆ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಿರುವ ಕಾರಣಕ್ಕೆ ನಮ್ಮ ಸರ್ಕಾರ ಬಂದ ಕ್ಷಣದಿಂದಲೂ ಆ ನಿಟ್ಟಿನ ಪ್ರಯತ್ನ ನಿರಂತರವಾಗಿ ನಡೆದಿದೆ ಎಂದು ತಿಳಿಸಿದರು.
ಟೀಕೆ ಟಿಪ್ಪಣಿಗಳು ಏನೇ ಇದ್ದರೂ ನಾವು ಯಾವುದನ್ನು ಮರೆತಿಲ್ಲ. ನಾನು ಕೂಡ ಬಗರ್ ಹುಕುಂ ರೈತರ ಪರವಾಗಿ ಹೋರಾಟ ಮಾಡಿದವನು. ಅಷ್ಟು ಮಾತ್ರವಲ್ಲ ಬಗರ್ ಹುಕುಂ ರೈತರ ಸಮಾವೇಶಕ್ಕೆ ಪಕ್ಷದ ನಾಯಕರನ್ನು ಆಹ್ವಾನಿಸಿದ್ದೆ. ಕಾರಣ, ಈ ಸಮಸ್ಯೆ ಅವರಿಗೆ ತಿಳಿಯಲಿ ಎನ್ನುವುದಕ್ಕಾಗಿ. ಆ ನಿಟ್ಟಿನಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಸರ್ಕಾರ ಬಂದ ಕ್ಷಣದಿಂದ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ವಿಚಾರವಾಗಿ ಅನೇಕ ಸಭೆಗಳನ್ನು ಮಾಡಿದ್ದೇವೆ.
ಕಳೆದ ನಾಲ್ಕೆöÊದು ದಿನಗಳ ಹಿಂದೆಯೂ ಕೂಡ ಜಿಲ್ಲೆಯ ರೈತ ಮುಖಂಡರ ಸಮ್ಮುಖದಲ್ಲಿಯೇ ನಾನು ರಾಜ್ಯ ಮುಖ್ಯಕಾರ್ಯದರ್ಶಿ ಅವರೊಂದಿಗೆ ಸಭೆ ನಡೆಸಿದ್ದೆ. ಈ ರೀತಿಯ ಪ್ರಯತ್ನ ನಿರಂತರವಾಗಿ ನಡೆದುಕೊಂಡು ಬಂದಿದೆ ಎಂದರು.
ಅರಣ್ಯ ಭೂಮಿ ಹಕ್ಕು ಹಾಗೂ ಮುಳುಗಡೆ ಸಂತ್ರಸ್ತರ ಸಮಸ್ಯೆ ಈಗ ನ್ಯಾಯಾಲಯದ ಮೂಲಕವೇ ಬಗೆಹರಿಯಬೇಕಿದೆ. ಹಿಂದೆ ಆದ ತಪ್ಪುಗಳನ್ನು ಸರಿಪಡಿಸಿಕೊಂಡೇ ನಾವೀಗ ನ್ಯಾಯಾಲದಲ್ಲಿ ಕಾನೂನು ಹೋರಾಟ ನಡೆಸಬೇಕಿದೆ. ಅದಕ್ಕೆ ಕೇಂದ್ರ ಸರ್ಕಾರದ ನೆರವು ಕೂಡ ಬೇಕಿದೆ. ಅದಕ್ಕೂ ಮುಂಚೆ ನಮ್ಮ ಸರ್ಕಾರದ ನಿಲುವು, ನಿರ್ಧಾರಗಳನ್ನು ಮುಂಬರುವ ಚಳಿಗಾಲದ ಅಧಿವೇಶನದೊಳಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕಟಿಲಿದ್ದಾರೆ. ಯಾಕೆಂದರೆ ಮಲೆನಾಡು ಭಾಗದಲ್ಲಿ ಅನೇಕ ಸಚಿವರು, ಶಾಸಕರು ಇದ್ದಾರೆ. ಅವರು ಅಭಿಪ್ರಾಯವೂ ಮುಖ್ಯವಾಗುತ್ತದೆ. ಅವರೊಂದಿಗೆ ಇನ್ನೊಮ್ಮೆ ಸಭೆ ನಡೆಸಿ, ಅಧಿವೇಶನದಲ್ಲಿಯೇ ನಮ್ಮ ಸರ್ಕಾರದ ನಿರ್ಧಾರ ಪ್ರಕಟವಾಗಲಿದೆ ಎಂದರು.
ಶಿವಮೊಗ್ಗದಲ್ಲಿ ಸಮಸ್ಯೆ ಬಗೆಹರಿದರೆ ಬಹುತೇಕ ಸಮಸ್ಯೆ ಬಗೆಹರಿಯಲಿದೆ. ಅಧಿವೇಶನ ಆರಂಭವಾಗುವ ಮುನ್ನ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಕೆಲ ಪ್ರಕರಣಗಳು ನ್ಯಾಯಾಲಯದಲ್ಲಿರುವುದರಿಂದ ಅವರಿಗೆ ವಕೀಲರನ್ನೂ ನೇಮಿಸಲಾಗುತ್ತಿದೆ. ಪಕ್ಷಾತೀತವಾಗಿ ಕೆಲಸವಾಗುತ್ತಿದೆ. ಮೂರು ತಿಂಗಳು ನಾನು ಶೇಕ್ ಆಗ್ತಾ ಇದೆ ಅಂತ ಹೆದರಿದ್ದೆ. ಈಗ ಸರಿಯಾಗಿದೆ ಎಂದರು.
ರಾಜ್ಯ ಸರ್ಕಾರದ ಸಮಸ್ಯೆಯನ್ನ ನಾವು ಬಗೆಹರಿಸುತ್ತೇವೆ. ಕೇಂದ್ರ ಸರ್ಕಾರದ ಸಮಸ್ಯೆಯನ್ನ ಬಿಜೆಪಿಯವರು ಬಗೆಹರಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷಾತೀತವಾದ ನಿಯೋಗದ ಮೂಲಕ ಕೇಂದ್ರ ಸರ್ಕಾರದ ಮನವೊಲಿಸಬೇಕೋ ಅಥವಾ ನೇರವಾಗಿ ಸರ್ಕಾರವೇ ಮನವಿ ಮಾಡಬೇಕಾ ಎನ್ನುವುದು ಕೂಡ ಅಧಿವೇಶನದಲ್ಲಿಯೇ ನಿರ್ಧಾರವಾಗಲಿದೆ ಎಂದರಲ್ಲದೆ, ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಿಬ್ಬಂದಿ ರೈತರಿಗೆ ನೋಟಿಸ್ ನೀಡುತ್ತಿದ್ದಾರೆಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಯಾವ ರೈತರಿಗೆ ನೋಟೀಸ್ ಕೊಟ್ಟರು ನಾವು ಜವಬ್ದಾರಿ ಆಗುತ್ತೇವೆ. ನೋಟೀಸ್ ಕೊಡುವುದು ಕಡಿಮೆಯಾಗಿದೆ. ಭೂಮಿ ಕಳೆದುಕೊಳ್ಳುವವರಿಗೆ ನ್ಯಾಯ ಕೊಡಿಸುತ್ತೇವೆ ಎಂದರು.
ವಾರದಲ್ಲಿ ಆರು ದಿನ ಶಾಲೆಗಳಲ್ಲಿ ಮೊಟ್ಟೆಗಳ ವಿತರಣೆಯಲ್ಲಿ ಶಿಕ್ಷಕರಿಗೆ ಒತ್ತಡ ಹೆಚ್ಚುತ್ತಿದ್ದು, ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಎಂಬ ಆರೋಪಗಳು ಬರುತ್ತಿದ್ದು, ಇದನ್ನು ಬಗೆಹರಿಸಲು ಸ್ಥಳೀಯ ಗ್ರಾಪಂ ವ್ಯಾಪ್ತಿಯಲ್ಲಿ ಗೌರವಧನದ ಆಧಾರದ ಮೇಲೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಚಿಂತನೆ ನಡೆದಿದೆ ಎಂದರು.
ಮೂರು ಕ್ಷೇತ್ರದ ಉಪ ಚುನಾವಣೆಯ ಗೆಲುವು ನೂರಕ್ಕೆ ನೂರು ರ್ಕಾರದ ಜೊತೆ ಜನ ಇದ್ದಾರೆ ಎಂಬುದು ಸಾಬೀತಾಗಿದೆ. ಮತದಾರ ಪ್ರಭುಗಳಿಗೆ ಧನ್ಯವಾದ ಹೇಳುತ್ತೇನೆ. ಹಾಗೂ ನಿರಂತರವಾಗಿ ಸುಳ್ಳು ಟೀಕೆಗಳನ್ನು ಮಾಡಿ ರಾಜ್ಯದ ಮುಖ್ಯಮಂತ್ರಿಗಳಿಗೆ ಅವಹೇಳನ ಮಾಡುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅವರ ದುರಂಹಕಾರಕ್ಕೆ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಯತ್ನಾಳ್ ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಯಾಕೆಂದರೆ ವಿಜಯೇಂದ್ರ ಅವರು ಹೊಸ ವರ್ಷಕ್ಕೆ ಹೊಸ ಮುಖ್ಯಮಂತ್ರಿ ಎಂದು ಹೇಳುತ್ತಿದ್ದರು. ಆದರೆ ಹೊಸ ವರ್ಷಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಹೊಸಬದು ಆಯ್ಕೆಯಾಗುತ್ತಾರೆ ಎಂದರು.
ಈ ಬಾರಿ ಜನಸ್ಪಂದನ ಕಾರ್ಯಕ್ರಮ ಹೊಸನಗರ ತಾಲೂಕಿನಲ್ಲಿ ನಡೆಯಲಿದೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್, ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಮುಖಂಡರಾದ ಚಂದ್ರಭೂಪಾಲ್, ಕಲಗೋಡು ರತ್ನಾಕರ್, ಜಿ.ಡಿ. ಮಂಜುನಾಥ್, ಆರ್.ಸಿ.ನಾಯಕ್, ಶರತ್ ಮರಿಯಪ್ಪ, ವಿನಯ್ ತಾಂದ್ಲೆ ಸೇರಿದಂತೆ ಮತ್ತಿತರರು ಇದ್ದರು.