ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ
(ಮೂಲ- ಅರಹತೊಳಲು, ಭದ್ರಾವತಿ
)

ವಾರದ ಅಂಕಣ- 21

ಬಸ್ಸಾರು ಮುದ್ದೆ, ರೊಟ್ಟಿ, ಉಂಡ್ಲಿಗೆ, ತೊಂಬ್ಳೆ, ಗೊಜ್ಜು, ಮಜ್ಜಿಗೆ ಹುಳಿ, ಅಕ್ಕಿ ಗಂಜಿ – ಉಪ್ಪಿನಕಾಯಿ, ಉಂಡೆ ಹುಳಿ, ಎಲೆಕಡುಬು ಒಂದೆಡೆ ಮರೆಯಾಗುತ್ತಿವೆ. ಬದಲಿಗೆ ನೂಡಲ್ಸ್, ಪಾಸ್ತಾ, ಫ್ರಿಜ್ಜಾ, ಗೀ ರೈಸ್, ಫೈಡ್ ರೈಸ್, ಗೋಭಿ, ಪಾನಿಪೂರಿ, ಮಾಮೋಸ್, ಸ್ಯಾಂಡ್ವಿಚ್, ಬರ್ಗರ್ ಪನ್ನೀರ್ ರೋಲ್, ನೆಗೇಟ್ಸ್, ಮಿರಿಮಿರಿ ಮಿಂಚುತ್ತಿವೆ. ಹೊಟ್ಟೆ ಕನ್ನಂಬಾಡಿ ಕಟ್ಟೆ ಅಷ್ಟೇ ಅಲ್ಲ ಎಕ್ಕುಟ್ಟಿ ಹೋಗುತ್ತಿದೆ ಎಂಬುದೇ ಇಂದಿನ ನೆಗೆಟಿವ್ ಥಿಂಕಿಂಗ್..,


ದಿನದಿಂದ ದಿನಕ್ಕೆ ತಿನ್ನುವ ಆಹಾರ ಪದಾರ್ಥಗಳು ಅದೆಷ್ಟು ಬದಲಾವಣೆ ಆಗುತ್ತಿವೆ. ತುಪ್ಪ ತಿನ್ನೋಕೆ ಯೋಚಿಸೋ ಕಾಲ ಬಂದಿದೆ. ಆಹಾರ ಪದಾರ್ಥ ದಿನದಿಂದ ದಿನಕ್ಕೆ ತನ್ನ ಸ್ವಂತ ಶಕ್ತಿಯನ್ನ ಕಳೆದುಕೊಳ್ಳುತ್ತಿವೆ. ಇದರ ನಡುವೆ ಶೋಕಿಲಾಲಗಳ ಬದುಕು ನಮ್ಮದಾಗಿದೆ .
ಹಿಂದಿದ್ದ ಮುದ್ದೆ ರೊಟ್ಟಿಗಳೇ ಈಗ ವಾರಕ್ಕೋ, ತಿಂಗಳಿಗೋ, ಅಮಾವಾಸ್ಯೆಗೆ ಇಲ್ಲವೇ ಹುಣ್ಣಿಮೆಗೂ ಸಿದ್ಧವಾಗುತ್ತಿದೆ.


ಸಸ್ಯಹಾರಿ ಅಡುಗೆ ಅತ್ಯಂತ ವಿಶೇಷವಾಗಿವೆ. ಸಂಖ್ಯೆಯೂ ಸಹ ಲೆಕ್ಕಕ್ಕೆ ಸಿಗದಷ್ಟಿವೆ. ಆದರೆ ಅವುಗಳು ಈಗ ಬಣ್ಣ ಬದಲಿಸಿವೆ. ಅವುಗಳು ಹೊಸ ರೂಪದಲ್ಲಿ ನಮ್ಮ ನಡುವೆ ಈಗ ಚಿತ್ರ ವಿಚಿತ್ರ ಆಕಾರಗಳಲ್ಲಿ ಹೊಟ್ಟೆ ಕೆಡಿಸುವ ರೂಪದಲ್ಲಿ ನಮ್ಮ ನಡುವೆ ಕಾಣಿಸಿಕೊಳ್ಳುತ್ತಿವೆ, ಸಿಗುತ್ತಿವೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರಲ್ಲವೇ?.
ಮಲೆನಾಡಿನ ಅಡುಗೆ ಎಂದರೆ ಅದಕ್ಕೆ ಒಂದು ವಿಶೇಷ ಸ್ಥಾನಮಾನ ಇದೆ. ಹಾಗೆಯೇ ಮಂಡ್ಯ ಕಡೆಯ ಅಡಿಗೆಗೂ ಸಹ ಅದರದೇ ಆದ ವರ್ಚಸ್ಸು ಮತ್ತು ರೂಪುರೇಷೆಗಳಿವೆ. ಉತ್ತರ ಕರ್ನಾಟಕದ ಭಾಗದಲ್ಲಿನ ಅಡುಗೆ ಈಗ ಕೇವಲ ಯಾವುದೋ ಸಭೆ ಸಮಾರಂಭಗಳಿಗೆ ಸೀಮಿತವಾಗುತ್ತಿವೆ. ಮನೆಯ ಊಟ ಚಿತ್ರ ವಿಚಿತ್ರವಾಗಿ ಬದಲಾಗಿದೆ ಎಂಬುದನ್ನು ಎಲ್ಲರೂ ತಮ್ಮ ಮನೋಭಾವರಲ್ಲಿ ಅರಿತಿದ್ದಾರೆ.


ಅಂತೆಯೇ, ಅದನ್ನು ಒಪ್ಪಿಕೊಳ್ಳುತ್ತಾರೆ. ಅಕ್ಕಿ ಗಂಜಿ ಉಪ್ಪಿನಕಾಯಿ, ಅಂಬಲಿ ಉಂಡ್ಲಿಗೆ, ಬೆಣ್ಣೆ ಕಾಯಿ ಮಜ್ಜಿಗೆ ಹುಳಿ, ಹಲಸಿನ ಎಲೆ, ಮಾವಿನ ಎಲೆ ಮತ್ತು ಅರಿಶಿಣದ ಎಲೆ ಕಡುಬು ಎಲ್ಲಿ ಹೋದವು? ಎಲ್ಲಿ ಸಿಗುತ್ತವೆ?.
ತಂಬಳೆ, ಬಸ್ಸಾರು, ಗೊಜ್ಜು, ಉದುಕ, ಮಜ್ಜಿಗೆ ಸಾರು ಈಗ ವರ್ಷಕ್ಕೆ ಒಂದೆರಡು ಬಾರಿ ಎಂಬಂತೆ ಕಾಣಿಸಿಕೊಳ್ಳುತ್ತಿವೆ ಅಲ್ಲವೇ?
ಇತ್ತೀಚಿನ ದಿನಮಾನಗಳಲ್ಲಿ ಊಟವೆಂಬುದು ತಿಂಡಿ ಎಂಬಂತಾಗಿದೆ. ಹೆಚ್ಚು ತಿನ್ನೋದು ಬೇಡ ನನಗೊಂದು ಪಿಜ್ಜಾ ಸಾಕು ಎಂದು ಅದಕ್ಕೆ ಊಟದ ಹೆಸರು ನೀಡಿ ಹೊತ್ತಿನ ತುತ್ತನ್ನು ಮುಗಿಸುವ ಅದೆಷ್ಟೋ ಜನರು, ಅದೆಷ್ಟು ಯುವ ಪೀಳಿಗೆ ನಮ್ಮ ನಡುವೆ ಈಗಲೂ ಕಾಣಿಸಿಕೊಳ್ಳುತ್ತದೆ.
ಹಿಂದಿದ್ದ ಬೀಸುವ ಕಲ್ಲು, ಶಾವಿಗೆ ಮಣೆ ಒಳಕಲ್ಲು ಕಲ್ಲಿನ ಮೇಲೊಂದು ದುಂಡನೆಯ ಕಲ್ಲು ಹಾಕಿ ರುಬ್ಬುವ ಕಾಯಕ ಎಲ್ಲಿದೆ? ಒಳಕಲ್ಲು ಮನೆಯ ವಾಸ್ತು ವಸ್ತುವಾಗಿದೆ.
ಇದು ಜಗತ್ತಿನ ಆಧುನಿಕತೆ ಎನ್ನಲು ಇದನ್ನು ಒಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿರುವುದು ನಿಜಕ್ಕೂ ದುರಂತ ಹಾಗೂ ವಿಸ್ಮಯವೇ ಹೌದು. ಏಕೆಂದರೆ ಸೌದೆ ಒಲೆ ಹಚ್ಚುವ ನಡುವೆ ಬೆಳೆದ ಬಹಳಷ್ಟು ಜನ ಈಗ ಗ್ಯಾಸ್ ಒಲೆಯ ಊಟಕ್ಕೆ ಶರಣಾಗಿದ್ದಾರೆ. ಮಿಕ್ಸಿ, ಕುಕ್ಕರ್, ಪ್ರಿಡ್ಜ್ ರಾರಾಹಿಸುತ್ತಿವೆ. ಸೌದೆ ಒಲೆಯ ಅಡುಗೆ ಅತ್ಯಂತ ರುಚಿದಾಯವಾಗಿರುತ್ತದೆ. ಮಿಕ್ಸಿ ಬದಲು ಒಳಕಲ್ಲಲ್ಲಿ ಮಾಡಿದ  ಚಟ್ನಿ ನಿಜಕ್ಕೂ ಅತ್ಯಂತ ರುಚಿಯಲ್ಲವೇ?
ನಮ್ಮ ನಡುವಿನ ಆಹಾರ ಶೈಲಿ ಬದಲಾವಣೆಯಾಗಿದೆ. ಆದರೂ ಅಲ್ಲಲ್ಲಿ ಹಿಂದಿನ ಶೈಲಿಯ ಅಡುಗೆಗಳು ಕೆಲವೇ ಕೆಲವು ಸಲ ಸಿಗುತ್ತಿವೆ. ಅದೇ ಶೇಂಗಾ ಚಟ್ನಿ ಗೆ ಈಗ ಹೊಸ ಹೊಸ ಹೆಸರುಗಳು ಹೊಸ ಹೊಸ ರೂಪಗಳು ಬಂದಿವೆ ಎಂದರೆ ಎಲ್ಲಾ ಬಗೆಯ ಅಡುಗೆಗಳು ಹೊಸ ಹೊಸ ಅಲಂಕಾರದಲ್ಲಿ ಈಗ ಕಂಗೊಳಿಸುತ್ತಿವೆ ಅಷ್ಟೆ.


ಇತ್ತೀಚಿನ ಮಕ್ಕಳು ಹಾಗೂ ಯುವಕರು ಹಿಂದಿನ ಅಡುಗೆ ಸಂಪ್ರದಾಯವನ್ನು ಹಾಗೂ ತಿನ್ನುವುದನ್ನೇ ಮರೆತುಬಿಟ್ಟಿದ್ದಾರೆ. ಇದು ನಮ್ಮ ನಡುವಿನ ಹಳೆಯ ಅಡುಗೆಗಳು ಮರೆಯಾಗುತ್ತಿರುವ ಸೂಚನೆಯಲ್ಲವೇ?. ಒಟ್ಟಾರೆ ಹಿಂದಿನ ಕಾಲದ ಕೈರೊಟ್ಟಿ ಮತ್ತೆ ಅಡುಗೆ ಕೋಣೆಯಲ್ಲಿ ಬೇಯಬೇಕಿದೆ. ಮುದ್ದೆ ಬಸ್ಸಾರು ತಿನ್ನುವ ಪರಿಪಾಠ ಬೆಳೆಯಬೇಕಿದೆ, ಬುತ್ತಿ , ಉಂಡ್ಲಿಗೆ ,, ಜುಮುಖಿ,. ಅಕ್ಕಿ ಗಂಜಿ ಮಿಡಿ ಉಪ್ಪಿನಕಾಯಿ ಜೊತೆ ತಿಂದರೆ ಅದರ ಮಜವೇ ಬೇರೆ ಎಂಬುದನ್ನು ತೋರಿಸಬೇಕಿದೆ ಅಲ್ಲವೇ? ಮುಂದುವರೆಯುತ್ತದೆ

By admin

ನಿಮ್ಮದೊಂದು ಉತ್ತರ

error: Content is protected !!