ತುಂಗಾ ಭದ್ರಾ ಶುದ್ಧೀಕರಣಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಒಟ್ಟಾಗಿ ಕೈ ಜೋಡಿಸಬೇಕು ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಹೇಳಿದರು.
ಮುಂದಿನ ದಿನದಲ್ಲಿ ತಮಿಳುನಾಡು ಸೇರಿ ಶ್ರೀಶೈಲದವರೆಗೂ ಈ ಜಾಗೃತಿ ಕಾರ್ಯ ಆಗಬೇಕು. ಆ ನಿಟ್ಟಿನಲ್ಲಿ ಕಾರ್ಯಕ್ರಮಗಳು ರೂಪುಗೊಳ್ಳಬೇಕು. ಇಲ್ಲಿ ನದಿ ಮೂಲ ಉಳಿಸುವ ವಿಚಾರದಲ್ಲಿ ರಾಜಕೀಯ ಸಲ್ಲದು. ಇಲ್ಲಿ ಪಕ್ಷಾತೀತವಾಗಿ ಎಲ್ಲರೂ ಕೈಜೋಡಿಸಬೇಕು.
ಈಗಾಗಲೇ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧುಬಂಗಾರಪ್ಪ ಅವರು ನದಿ ಮೂಲ ಉಳಿಸುವ ಬಗ್ಗೆ ಅನೇಕ ಸಭೆಗಳನ್ನು ನಡೆಸಿದ್ದಾರೆ. ತುಂಗಾ- ಭದ್ರಾ ಶುದ್ಧೀಕರಣಕ್ಕೆ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ ಎಂದರು.
ನ.೧೦ರ ಪ್ರಬುದ್ಧರ ಸಭೆ: ಸಂಪನ್ಮೂಲ ವ್ಯಕ್ತಿಗಳಾಗಿ ದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಸಂಚಾಲಕ ಬಸವರಾಜ್ ಪಾಟೀಲ್ ವೀರಾಪುರ, ಜಿಲ್ಲಾ ಪರ್ಯಾವರಣ ಟ್ರಸ್ಟ್ ಅಧ್ಯಕ್ಷ ಪ್ರೊ. ಬಿ.ಎಂ. ಕುಮಾರಸ್ವಾಮಿ ಮತ್ತು ಮುಖ್ಯ ಅತಿಥಿಯಾಗಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಭಾಗಿಯಾಗಲಿದ್ದಾರೆ ಎಂದು ಶಾಸಕರು ತಿಳಿಸಿದರು.
ತುಂಗಾ ಆರತಿ: ಸಂಜೆ ೬.೩೦ಕ್ಕೆ ನಡೆಯುವ ತುಂಗಾ ಆರತಿಯಲ್ಲಿ ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ ಸೇರಿ ಗಣ್ಯರು ಪಾಲ್ಗೊಳ್ಳುವರು ಎಂದರು.