ಶಿವಮೊಗ್ಗ: ರೈತರಿಗೆ ಉಪಟಳ ನೀಡುತ್ತಿರುವ ಕಾಡಾನೆಗಳ ಓಡಿಸಲು ಅರಣ್ಯ ಇಲಾಖೆ ಇದೀಗ ಸಾಕಾನೆಗಳನ್ನು ಬಳಕೆ ಮಾಡುತ್ತಿದ್ದು, ಕಾರ್ಯಾಚರಣೆ ತೀವ್ರಗೊಂಡಿದೆ.
ಶೆಟ್ಟಿಹಳ್ಳಿ ಅಭಯಾರಣ್ಯದ ಪುರದಾಳು, ಮಲೆಶಂಕರ, ಬೇಳೂರು, ಸಿರಿಗೆರೆ, ಆಲದೇವರ ಹೊಸೂರು, ಮುಂತಾದ ಭಾಗಗಳಲ್ಲಿ ಪದೇ ಪದೇ ಕಾಡಾನೆಗಳ ದಾಳಿ ನಡೆಯುತ್ತಿತ್ತು. ಫಸಲಿಗೆ ಬಂದ ಬೆಳೆಗಳನ್ನು ಆನೆಗಳ ಹಿಂಡು ಧ್ವಂಸ ಮಾಡುತ್ತಿದ್ದು, ಸಾಕಷ್ಟು ನಷ್ಟವಾಗುತ್ತಿದೆ. ಅಲ್ಲದೇ ಕಾಡಾನೆಗಳು ನಾಡಿಗೆ ಬಂದಿದ್ದರಿಂದ ರೈತರು ಕೂಡ ಭಯದ ವಾತಾವರಣದಲ್ಲಿ ಇದ್ದಾರೆ.
ಹಲವು ಬಾರಿ ಅರಣ್ಯ ಇಲಾಖೆಗೆ ಈ ಬಗ್ಗೆ ಮನವಿ ಮಾಡಿದ್ದರೂ ಕೂಡ ಅರಣ್ಯ ಇಲಾಖೆಯವರು ನಿರ‍್ಲಕ್ಷ್ಯ ತೋರಿದ್ದರು. ಇದರ ವಿರುದ್ಧ ರೈತರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಕೂಡ ಮಾಡಿದ್ದರು. ಅಲ್ಲದೇ, ಅರಣ್ಯ ಸಚಿವರು ಶಿವಮೊಗ್ಗಕ್ಕೆ ಬಂದಿದ್ದಾಗ ಅರಣ್ಯ ಇಲಾಖೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಕಾಡಾನೆ ಸೆರೆ ಹಿಡಿಯುವಂತೆ ಮನವಿ ಕೂಡ ಮಾಡಿದ್ದರು.
ಸಚಿವರು ಕೂಡ ಅರಣ್ಯ ಇಲಾಖೆಗೆ ಈ ಬಗ್ಗೆ ಸೂಚನೆ ಕೂಡ ನೀಡಿದ್ದರು. ಇದೀಗ ಅರಣ್ಯ ಇಲಾಖೆ ಕಾಡಾನೆಗಳನ್ನು ಮತ್ತೆ ಕಾಡಿಗೆ ಕಳಿಸುವ ಕಾರ್ಯಾಚರಣೆ ನಡೆಸಿದೆ. ಇದಕ್ಕಾಗಿ ಸಕ್ರೆಬೈಲಿನ ಬಹದ್ದೂರು, ಆಲೆ, ಸೋಮಣ್ಣ ಆನೆಗಳನ್ನು ಕಾರ್ಯಾಚರಣೆಗೆ ಬಳಸಿಕೊಳ್ಳುತ್ತಿದ್ದು, ಓಡಿಸುವ ಕಾರ್ಯದಲ್ಲಿ ಇದೀಗ ಮುಂದಾಗಿವೆ.
ಇದಕ್ಕಾಗಿ ಈಗಾಗಲೇ ಆನೆಗಳ ಚಲನವಲನಗಳ ಬಗ್ಗೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಿಗಾವಹಿಸಿದ್ದು, ಅರಣ್ಯ ಇಲಾಖೆ ಕೊನೆಗೂ ಈ ಕಾರ್ಯಾಚರಣೆಗೆ ಮುಂದಾಗಿರುವುದನ್ನು ಮಲೆನಾಡಿನ ಆ ಭಾಗದ ರೈತರು ಸ್ವಾಗತಿಸಿದ್ದಾರೆ. ಆದರೆ, ಕಾರ್ಯಾಚರಣೆಯನ್ನು ಅರ್ಧಕ್ಕೆ ನಿಲ್ಲಿಸದೇ ಪೂರ್ಣಗೊಳಿಸಬೇಕು. ತೋರಿಕೆಗೆ ಮಾತ್ರ ರಾತ್ರಿ ವೇಳೆ ಪಟಾಕಿ ಸಿಡಿಸಬಾರದು. ಶಾಶ್ವತವಾಗಿ ಆನೆಗಳನ್ನು ದಟ್ಟ ಅರಣ್ಯಕ್ಕೆ ಕಳಿಸಬೇಕು ಎಂದು ರೈತರು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.