ಶಿವಮೊಗ್ಗ: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಐಪಿಎಸ್ ಅಧಿಕಾರಿ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಅ. ೩ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಏನು ಬೇಕಾದರೂ ಮಾತನಾಡಬಹುದು ಎಂದು ಭಾವಿಸಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕುರಿತು ಹಂದಿ ಎನ್ನುವ ಅರ್ಥ ಬರುವ ಹಾಗೆ ಮಾತನಾಡಿದ್ದಾರೆ. ಒಬ್ಬ ಅಧಿಕಾರಿಯಾಗಿ ಇಂತಹ ಪದ ಬಳಸಿರುವುದು ಖಂಡನೀಯ ಎಂದರು.
ಮಾಜಿ ಶಾಸಕ, ಜೆ.ಡಿ.ಎಸ್. ರಾಜ್ಯ ಉಪಾಧ್ಯಕ್ಷ ಕೆ.ಬಿ. ಪ್ರಸನ್ನಕುಮಾರ್ ಮಾತನಾಡಿ, ಈ ಅಧಿಕಾರಿಯ ಹಿನ್ನಲೆ ನೋಡಿದರೆ ಭ್ರಷ್ಟ ಎಂದು ತಿಳಿಯುತ್ತದೆ. ಇವರ ಪತ್ನಿಯ ಹೆಸರಿನಲ್ಲಿ ೨೦ ಅಂತಸ್ತಿನ ಕಟ್ಟಡವಿದೆ. ರಾಜಕಾಲುವೆಯನ್ನೇ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಕೆರೆಗಳನ್ನೂ ಒತ್ತುವರಿ ಮಾಡಿಕೊಂಡಿದ್ದಾರೆ. ಭ್ರಷ್ಟಾಚಾರದ ಆರೋಪಗಳೂ ಇವೆ. ತಕ್ಷಣವೇ ಈತನನ್ನು ಸೇವೆ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಸಾರ್ವಜನಿಕ ಸೇವೆ ಮಾಡಲು ಇದ್ದಾರೆಯೇ ಹೊರತೂ ಯಾರನ್ನೋ ತೃಪ್ತಿಪಡಿಸಲು ಅಲ್ಲ. ಹೀಗೆ ಮಾತನಾಡಿದರೆ ಮುಖ್ಯಮಂತ್ರಿಗಳ ವಿಶ್ವಾಸ ಗಳಿಸಬಹುದು ಎಂದುಕೊಂಡಿದ್ದಾರೆ. ಯಾರನ್ನೋ ಮೆಚ್ಚಿಸಲು ಸರ್ಕಾರಿ ಉದ್ಯೋಗಗಳು ಇರುವುದಿಲ್ಲ. ಮುಖ್ಯಮಂತ್ರಿಗಳು ಕೂಡ ಅವರನ್ನು ಸಮರ್ಥಿಸುವುದು ಸರಿಯಲ್ಲ. ಕೂಡಲೇ ಆತನ ಹೇಳಿಕೆಯ ಬಗ್ಗೆ ಎಚ್ಚರ ನೀಡುವುದರ ಜೊತೆಗೆ ಅವರ ಆಸ್ತಿಯನ್ನು ತನಿಖೆ ಮಾಡಲಿ. ಶಿಸ್ತು ಕ್ರಮ ಕೈಗೊಳ್ಳಲಿ ಎಂದರು.
ಈತನ ವಿರುದ್ಧ ಜಿಲ್ಲಾ ಜೆಡಿಎಸ್ ಅ. ೩ ರಂದು ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ದೀಪಕ್ ಸಿಂಗ್, ಗೀತಾ ಸತೀಶ್, ಬೊಮ್ಮನಕಟ್ಟೆ ಮಂಜುನಾಥ್, ಅಬ್ದುಲ್ ವಾಜಿದ್, ಜಯಣ್ಣ, ತ್ಯಾಗರಾಜ್, ಮಾಧವಮೂರ್ತಿ, ಸಂಜಯ್ ಕಶ್ಯಪ್, ಸಿದ್ದಪ್ಪ, ಸಿದ್ಧೇಶ್, ಗೋಪಿ, ಶಂಕರ್, ಚಂದ್ರಶೇಖರ್, ನರಸಿಂಹ ಗಂಧದಮನೆ ಮೊದಲಾದವರಿದ್ದರು.