ಶಿವಮೊಗ್ಗ: ಪ್ರಸ್ತುತ ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿದ್ದು, ಮಾನವೀಯ ಮೌಲ್ಯಗಳು ಮರೆಯಾಗಿದೆ. ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲೂ ಆಧ್ಯಾತ್ಮಿಕ ಮೌಲ್ಯಗಳನ್ನು ಪಸರಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ ಎಂದು ಬೆಂಗಳೂರಿನ ರಮಣ ಮಹರ್ಷಿ ಕೇಂದ್ರದ ಸಂಸ್ಥಾಪಕ ಶ್ರೀನಿವಾಸ ರೆಡ್ಡಿ ಹೇಳಿದರು.
ಶ್ರೀ ದೊಡ್ಡಮ್ಮ ಚಾರಿಟಬಲ್ ನಿಂದ ಕೆ.ಹೆಚ್.ಬಿ. ಪ್ರೆಸ್ ಕಾಲೋನಿ ಶ್ರೀ ದೊಡ್ಡಮ್ಮದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ದುರ್ಗಾ ಕವಚ ದೀಕ್ಷೆ ಹಾಗೂ ಪಠಣ ತರಬೇತಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಆಧ್ಯಾತ್ಮ ಜೀವನಕ್ಕೆ ಭದ್ರಬುನಾದಿ. ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಉದಾತ್ತ ಚಿಂತನೆಗಳು ಮೌಲ್ಯಯುತ ವಿಚಾರಗಳು ಅಡಗಿರುವುದರಿಂದ ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ಪ್ರಸ್ತುತ ಮೊಬೈಲ್ ಮತ್ತು ದೃಶ್ಯ ಮಾಧ್ಯಮ ಹಾವಳಿಯಿಂದ ನಮ್ಮ ಭವ್ಯ ಸಂಸ್ಕೃತಿ ಮರೆಯಾಗುತ್ತಿರುವುದು ದುರಂತ ಎಂದು ಹೇಳಿದರು.
ನಮ್ಮ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಸತ್ಸಂಗ ಸೇರಿದಂತೆ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅತ್ಯವಶ್ಯಕ. ವಿದ್ಯಾರ್ಥಿಗಳಲ್ಲಿ ಶಿಸ್ತು, ಏಕಾಗ್ರತೆ, ನೈತಿಕತೆ ಬೆಳೆಸುವಲ್ಲಿ ಇದು ಸಹಕಾರಿ. ಜನರಿಗೆ ಉತ್ತಮ ಸಂಸ್ಕಾರ ನೀಡಿ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಆಧ್ಯಾತ್ಮಿಕ ಚಟುವಟಿಕೆಗಳು ಪೂರಕ ಎಂದು ತಿಳಿಸಿದರು.
ದೇವಿ ಉಪಾಸಕರಾದ ಶ್ರೀ ಸಿದ್ದಪ್ಪಾಜಿ ಆಶೀರ್ವಚನ ನೀಡಿ, ಆರೋಗ್ಯ ಮನುಷ್ಯನಿಗೆ ಅಮೂಲ್ಯ ಸಂಪತ್ತು. ಬದಲಾದ ಜೀವನ ಶೈಲಿ ಹಾಗೂ ಕ್ರಮಬದ್ಧವಲ್ಲದ ಆಹಾರ ಸೇವನೆಯಿಂದ ಪ್ರಸ್ತುತ ಅನೇಕರು ಹಲವು ಕಾಯಿಲೆಗಳಿಂದ ನರಳುವುದನ್ನು ನೋಡುತ್ತಿದ್ದೇವೆ. ಆರೋಗ್ಯವಂತರಾಗಿ ಜೀವಿಸುವುದು ದೊಡ್ಡ ಸವಾಲಾಗಿದೆ. ಶ್ರದ್ಧೆ ಮತ್ತು ಭಕ್ತಿಯಿಂದ ದುರ್ಗಾ ಕವಚ ಪಠಣ ಮಾಡುವುದರಿಂದ ಉತ್ತಮ ಆರೋಗ್ಯ ಪ್ರಾಪ್ತಿಯಾಗುವುದಲ್ಲದೆ ಇಡೀ ಕುಟುಂಬಕ್ಕೆ ರಕ್ಷಾ ಕವಚವಾಗಿ ದೇವಿ ಕಾಪಾಡುತ್ತಾಳೆ ಎಂದರು.
ಮೊಬೈಲ್ ಹಾಗೂ ವಿದೇಶಿ ಸಂಸ್ಕೃತಿ ಸಂಸ್ಕೃತಿಯ ಪ್ರಭಾವದಿಂದ ಅನೇಕ ಮಕ್ಕಳು ದಾರಿ ತಪ್ಪುತ್ತಿರುವುದನ್ನು ಕಾಣುತ್ತಿದ್ದೇವೆ. ಮಕ್ಕಳು ಹಾಗೂ ಯುವ ಜನಾಂಗ ದುರ್ಗಾಕವಚವನ್ನು ಪ್ರತಿದಿನ ಪಠಣ ಮಾಡುವುದರಿಂದ ಉತ್ತಮ ವಿದ್ಯೆ ಹಾಗೂ ಅವರಲ್ಲಿ ಸಂಸ್ಕಾರ ಮಾಡುತ್ತದೆ. ಪ್ರತಿಯೊಬ್ಬರೂ ಇದನ್ನು ಪ್ರತಿದಿನ ಪಠಣ ಮಾಡುವುದರಿಂದ ದಾರಿದ್ರ್ಯ ದೂರಾಗುತ್ತದೆ. ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಜಾಗೃತವಾಗಿ ಉತ್ತಮ ಅಭಿವೃದ್ಧಿ ಹಾಗೂ ಕುಟುಂಬದಲ್ಲಿ ನೆಮ್ಮದಿ ಮತ್ತು ಶಾಂತಿ ನೆಲೆಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್. ಸುಂದರರಾಜ್ ಅವರ ದುರ್ಗಾ ಕವಚ (ವಿವರಣೆ ಸಹಿತ) ಪುಸ್ತಕ ಬಿಡುಗಡೆ ಮಾಡಲಾಯಿತು. ದುರ್ಗಾ ಕವಚ ದೀಕ್ಷೆ ಹಾಗೂ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.