ಶಿವಮೊಗ್ಗ,ಆ.16: ಮುಂಬರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ರಾಷ್ಟ್ರಭಕ್ತ ಬಳಗದಿಂದ ಎಲ್ಲಾ 35 ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಾಗುವುದು. ಸುಪ್ರೀಂ ಆದೇಶದಂತೆ ಶಿವಮೊಗ್ಗ ಪಾಲಿಕೆ ಚುನಾವಣೆ ನಡೆಸಿ ಎಂದು ಮಾಜಿ ಉಪಮುಖ್ಯಮಂತ್ರಿ, ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು..

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್ ಆದೇಶದಂತೆ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಿಸಬೇಕು. ಈಗಾಗಲೇ ಸುಪ್ರೀಂ ಕೋರ್ಟ್ ಶಿವಮೊಗ್ಗ ಸೇರಿದಂತೆ ಮೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಬೇಕೆಂದು ಆದೇಶ ನೀಡಿದೆ. ಆದರೆ, ರಾಜ್ಯ ಸರ್ಕಾರ ಈ ಬಗ್ಗೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ.

ಚುನಾವಣಾ ಆಯೋಗವೂ ಕೂಡ ಇನ್ನು 8 ದಿನದಲ್ಲಿ ನೋಟಿಫಿಕೇಷನ್ ಹೊರಡಿಸುವುದಾಗಿ ತಿಳಿಸಿದೆ. ಆದರೆ, ಮೀಸಲಾತಿ ಮತ್ತು ವಾರ್ಡ್ ಗಳ ಹೆಚ್ಚಳ ಸೇರಿದಂತೆ ಇತರ ವಿಷಯಗಳಿಗಾಗಿ ಚುನಾವಣೆಯನ್ನು ಮುಂದೂಡಬಾರದು. ತಕ್ಷಣವೇ ಶಿವಮೊಗ್ಗ ಮಹಾನಗರ ಪಾಲಿಕೆಗೆ ಚುನಾವಣೆ ಘೋಷಬೇಕು ಎಂದು ಒತ್ತಾಯಿಸಿದರು.

ಮೀಸಲಾತಿ ಯಾವುದೇ ಇರಲಿ, ಅದು ಹಳೆಯದೇ ಆಗಿರಲಿ, ಹೊಸದೇ ಆಗಿರಲಿ. ಮೀಸಲಾತಿಗೆ ತಕ್ಕಂತೆ ರಾಷ್ಟ್ರ ಭಕ್ತರ ಬಳಗದಿಂದ ಎಲ್ಲಾ ವಾರ್ಡ್ ಗಳಲ್ಲಿಯೂ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಹಿಂದುತ್ವಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಮತ್ತು ಆ ವಾರ್ಡ್ ನಲ್ಲಿ ಉತ್ತಮ ಸೇವೆ ಮಾಡುವ ಅಭ್ಯರ್ಥಿಗಳನ್ನು ಹುಡುಕಿ ಟಿಕೆಟ್ ನೀಡಲಾಗುವುದು. ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ. ಆದರೆ ನಿಜವಾಗಿಯೂ ರಾಷ್ಟ್ರ ಭಕ್ತರೆಂದು ಕಂಡು ಬಂದರೆ ಹಿಂದು ಆಗಲಿ, ಮುಸ್ಲಿಂ, ಕ್ರೈಸ್ತರಾಗಲಿ ಅವರಿಗೆ ಟಿಕೆಟ್ ನೀಡಲಾಗುವುದು ಎಂದರು.

ಪಾಲಿಕೆ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳಿಗೆ ಚಿಹ್ನೆಯ ಗೊಂದಲ ಉಂಟಾಗಬಹುದು. ಚುನಾವಣಾ ಆಯೋಗಕ್ಕೆ ಒಂದೇ ಚಿಹ್ನೆ ಕೊಡುವಂತೆ ಮನವಿ ಮಾಡುತ್ತೇವೆ. ಕೊಡಲು ಆಗದಿದ್ದರೆ ಆಯಾ ಅಭ್ಯರ್ಥಿಗಳು ತಮಗೆ ಸಿಕ್ಕ ಚಿಹ್ನೆ ಅಡಿಯಲ್ಲಿಯೇ ಚುನಾವಣೆ ಎದುರಿಸುತ್ತಾರೆ. ಲೋಕಸಭೆ ಚುನಾವಣೆ ಬೇರೆ, ಸ್ಥಳೀಯ ಚುನಾವಣೆಗಳು ಬೇರೆ. ಇಲ್ಲಿ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಾರೆ. ಹಾಗಾಗಿ ನಮ್ಮ ಸಂಘಟನೆಯ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲುತ್ತಾರೆ ಎಂದರು.

ಈಗಾಗಲೇ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳಲ್ಲೂ ಸಮಸ್ಯೆಗಳ ಆಗರವೇ ಇದೆ. ಅಧಿಕಾರಿಗಳು ಯಾರ ಮಾತನ್ನೂ ಕೇಳುತ್ತಿಲ್ಲ. ಚುನಾಯಿತ ಪ್ರತಿನಿಧಿಗಳು ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಚುನಾವಣೆ ಇಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇರುವುದಿಲ್ಲ. ಮಹಾನಗರ ಪಾಲಿಕೆ ಸೇರಿದಂತೆ ಜಿಪಂ, ತಾಪಂಗೂ ಚುನಾವಣೆ ನಡೆಸಬೇಕು ಎಂದರು.

ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ತಮ್ಮ ಪುತ್ರ ಕೆ.ಇ. ಕಾಂತೇಶ್ ಅಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ಕೊಡುತ್ತೇವೆ ಎಂದು ಈಗಾಗಲೇ ನಂಬಿಸಿ ಮೋಸ ಮಾಡಿದ್ದಾರೆ. ಮೋದಿ ಹೆಸರು ಹೇಳಿ ಗೆದ್ದ ಬಿ.ವೈ. ರಾಘವೇಂದ್ರ ಅವರು ಶಿವಮೊಗ್ಗದ ಡಿಸಿಸಿ ಬ್ಯಾಂಕ್, ಶಿಮುಲ್ ಚುನಾವಣೆಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಲು ಆಗಲಿಲ್ಲ. ಮೋಸ ಮಾಡಿದವರಿಗೆ ಒಂದಲ್ಲ ಒಂದು ದಿನ ದೇವರೇ ತಕ್ಕ ಶಿಕ್ಷೆ ಕೊಡುತ್ತಾನೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಗನ್ನಿ ಶಂಕರ್, ಕಾಚಿನಕಟ್ಟೆ ಸತ್ಯನಾರಾಯಣ್, ಮೋಹನ್ ಜಾಧವ್, ಶ್ರೀಕಾಂತ್, ಶಿವಾಜಿ, ಇ. ವಿಶ್ವಾಸ್, ಚಿದಾನಂದ್ ಮೊದಲಾವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!