ಶಿವಮೊಗ್ಗ,ಜು.೩೦: ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಬಿಆರ್ ಪಿ ಯಲ್ಲಿನ ಭದ್ರ ಜಲಾಶಯ ಭರ್ತಿಯಾಗುವ ಹಂತ ತಲುಪಿದ್ದು, ಇಂದು ಜಲಾಶಯದ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ತೆರೆಯುವ ಮೂಲಕ ನೀರನ್ನು ಹೊರ ಬಿಡಲಾಯಿತು.+
ನಿನ್ನೆ ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅಧ್ಯಕ್ಷತೆ ಹಾಗು ಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭದ್ರಾ ನಾಲೆಗಳಿಗೆ ನೀರು ಹರಿಸುವಂತೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿತ್ತು.
ಸಭೆಯಲ್ಲಿ ಕೈಕೊಂಡ ನಿರ್ಣಯದಂತೆ ಇಂದು ಬೆಳಗ್ಗೆ ೯.೩೦ರ ಸಮಯದಲ್ಲಿ ನಾಲ್ಕು ಕ್ರಸ್ಟ್ ಗೇಟ್ ಗಳನ್ನು ಮೇಲೆತ್ತಿ ನೀರನ್ನು ಹೊರ ಬಿಡಲಾಯಿತು.
ಜಲಾಶಯದ ನಾಲ್ಕು ಗೇಟ್ಗಳನ್ನು ತೆರೆಯುತ್ತಿದ್ದಂತೆ ಹಾಲಿನ ನೊರೆಯಂತೆ ಭದ್ರಯು ಬೋರ್ಗರೆಯುತ್ತಾ ಧುಮುಕ್ಕಿದ ರೀತಿ ಕಂಡು, ಹಲವರು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು.
ಕಳೆದ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಭದ್ರ ಜಲಾಶಯ ಸಂಪೂರ್ಣ ಬರಿದಾಗಿತ್ತು. ರೈತರಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈ ಬಾರಿ ಜನನದ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭದ್ರಾ ಜಲಾಶಯ ಸಂಪೂರ್ಣ ತುಂಬುವ ಹಂತಕ್ಕೆ ಬಂದು
ತಲುಪಿದೆ. ಇದೀಗ ಶಿವಮೊಗ್ಗ ಹಾಗೂ ದಾವಣಗೆರೆ ಭಾಗದಲ್ಲಿನ ಅಚ್ಚುಕಟ್ಟು ಪ್ರದೇಶದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಇದೀಗ ಭದ್ರಾ ಜಲಾಶಯಕ್ಕೆ ೨೦.೭೭೪ ಕ್ಯೂಸೆಕ್ ಒಳ ಹರಿವು ಇದ್ದರೆ, ಆರು ಸಾವಿರ ಕ್ಯೂಸೆಕ್ ನಷ್ಟು ಜಲಾಶಯದಿಂದ ಹೊರಗೆ ಬಿಡಲಾಗಿದೆ. ಗರಿಷ್ಠ ೧೮೬ ಅಡಿ ಎತ್ತರದ ಜಲಾಶಯದ ನೀರಿನ ಮಟ್ಟ ಇದೀಗ ೧೮೩.೨ ಅಡಿಗೆ ತಲುಪಿದೆ.