ಶಿವಮೊಗ್ಗ: ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದ ವತಿಯಿಂದ ಶುಕ್ರವಾರ ವಿಭಾಗದ ಸಭಾಂಗಣದಲ್ಲಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪರ್ಸನಲ್ ಮ್ಯಾನೇಜ್ಮೆಂಟ್ (ಎನ್ಐಪಿಎಂ) ವಿದ್ಯಾರ್ಥಿ ಸಮಿತಿಯ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಎನ್ಐಪಿಎಂ ಮಂಗಳೂರು ವಿಭಾಗದ ಅಧ್ಯಕ್ಷ ಸ್ಟೀವನ್ ಪಿಂಟೊ ಮಾತನಾಡಿ,
ದೇಶದಲ್ಲಿ ಮಾನವ ಸಂಪನ್ಮೂಲ ನಿರ್ವಹಣೆ, ಕೈಗಾರಿಕಾ ಸಂಬಂಧಗಳು ಸೇರಿದಂತೆ ಅನೇಕ ಅಭಿವೃದ್ದಿ ಕಾರ್ಯಗಳಲ್ಲಿ ವೃತ್ತಿಪರ ವ್ಯವಸ್ಥೆಯ
ನಿರ್ವಹಣೆಯಲ್ಲಿ ಎನ್ಐಪಿಎಂ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಕಾಲೇಜಿನಲ್ಲಿ ಪ್ರಾರಂಭಗೊಂಡ ನೂತನ ವಿದ್ಯಾರ್ಥಿ ಸಮಿತಿಯ ಮೂಲಕ ಅಗತ್ಯ ಪ್ರಯೋಜನ ಪಡೆಯಿರಿ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿ, ಪದವೀಧರರಾಗುವ ಜೊತೆಗೆ ವೃತ್ತಿ ನೀಡುವ ಉದ್ಯಮಗಳಲ್ಲಿ ಅಭಿವೃದ್ದಿ ಹೊಂದುವಂತಹ ಅಗತ್ಯ ಕೌಶಲ್ಯತೆಗಳು ನಿಮ್ಮದಾಗಲಿ ಎಂದು ತಿಳಿಸಿದರು.
ಎಂಬಿಎ ವಿಭಾಗದ ನಿರ್ದೇಶಕ ಡಾ.ಸಿ.ಶ್ರೀಕಾಂತ್ ಮಾತನಾಡಿದರು. ಎನ್ಐಪಿಎಂ ಮಂಗಳೂರು ವಿಭಾಗದ ಪದಾಧಿಕಾರಿ ಮಂಜುನಾಥ್, ಕಾಲೇಜಿನ ವಿದ್ಯಾರ್ಥಿ ಸಮಿತಿ ಸಂಯೋಜಕಿ ಡಾ.ಸುಭದ್ರ.ಪಿ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಡೆದ ಸಂವಾದದಲ್ಲಿ ಮಾನವ ಸಂಪನ್ಮೂಲ ತಜ್ಞೆ ಜೋವಿನಾ ಪ್ರಿಯಾಂಕ, ಮಂಗಳೂರಿನ ಕೆಮಿಕಲ್ ಅಂಡ್ ಫರ್ಟಿಲೈಜರ್ಸ್ ಕಂಪನಿ ಹೆಚ್ಆರ್ ವ್ಯವಸ್ಥಾಪಕ ಅವಿಂದ್,
ವಿಆರ್ಎ ಸೊಲ್ಯುಶನ್ಸ್ ನಿರ್ದೇಶಕ ಡಾ.ರೋನಾಲ್ಡ್ ಸೆಕ್ವೆರ, ಚಾರ್ಟೆಡ್ ಅಕೌಂಟೆಂಟ್ ಶರತ್, ನಾಗೇಂದ್ರ.ಕೆ.ವಿ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.