ಶಿವಮೊಗ್ಗ : ಶರೀರ ಮಾಧ್ಯಂ ಖಲು ಧರ್ಮ ಸಾಧನಂ ಎಂಬಂತೆ ಶರೀರವನ್ನು ಮಾಧ್ಯಮವನ್ನಾಗಿಟ್ಟುಕೊಂಡು ಧರ್ಮ ಸಾಧನೆ ಮಾಡಬೇಕಾಗಿರುವುದರಿಂದ ಶರೀರದ ಸಧೃಡತೆ ಬಹು ಅಗತ್ಯವಾಗಿರುತ್ತದೆ ಎಂದು ಹುಬ್ಬಳ್ಳಿ ಜಗದ್ಗುರು ಮೂರುಸಾವಿರ ಮಠ ಮಹಾಸಂಸ್ಥಾನದ ಶ್ರೀ ಡಾ. ಗುರುಸಿದ್ಧರಾಜಯೋಗೀಂದ್ರ ಸ್ವಾಮಿಗಳು ಹೇಳಿದರು.

ಭಾನುವಾರ ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯರವರಿಗೆ ಅಭಿಮಾನಿಗಳು ಮತ್ತು ಶಿಷ್ಯವೃಂದ , ಅಧ್ಯಕ್ಷರು, ಸದಸ್ಯರು, ವಿಶ್ವಸ್ಥ ಮಂಡಳಿ, ಶ್ರೀ ಶಿವಗಂಗಾ ಯೋಗಾ ಕೇಂದ್ರ (ರಿ) ಶಿವಮೊಗ್ಗ ಇವರ ವತಿಯಿಂದ ಆಯೋಜಿಸಿದ್ದ  ಗುರುಪೂರ್ಣಿಮೆ ಹಾಗೂ ಶಿವಯೋಗ ಅಭಿನಂದನಾ ಗ್ರಂಥ ಸಮರ್ಪಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಲಿಂಗ ಪೂಜೆ ಸಲ್ಲಿಸುವಾಗ ಒಮ್ಮೊಮ್ಮೆ ಪಂಚಾಮೃತ ಅಭಿಷೇಕವಾಗಿರುತ್ತದೆ ಅಲಂಕಾರ ಮಾಡಲು ಆಗುವುದಿಲ್ಲ, ಕೆಲವೊಮ್ಮೆ ಅಲಂಕಾರ ಪೂಜೆ ಆಗಿರುತ್ತದೆ

ಮಂಗಳಾರತಿ ಮಾಡಲಿಕ್ಕೆ ಆಗುವುದಿಲ್ಲ, ಒಂದು ಬಾರಿ ಅಂತೂ ಇಷ್ಟೆಲ್ಲಾ ಹಂತಗಳು ಮುಗಿದರೂ ಪ್ರಣಾಮಗಳನ್ನು ಸಲ್ಲಿಸಲು ಆಗುವುದಿಲ್ಲ. ಪೂಜಾಫಲ ಪ್ರಾಪ್ತಿಯಾಗಬೇಕಾದರೆ ಮೊದಲು ದೇಹ ಪೂಜೆ ಪೂರ್ತಿಯಾಗಬೇಕು. ನಿಜವಾದ ಧರ್ಮ ಸಾಧನೆಗೆ ನಮ್ಮ ಶರೀರ ಸಿದ್ದವಾಗಿರಬೇಕು. ಇದನ್ನು ಮನಗಂಡ ನಮ್ಮ ಋಷಿ ಮುನಿಗಳು ಶರೀರವನ್ನು ಪರಿಪೂರ್ಣವಾಗಿಡುವಂತಹ ಯೋಗವನ್ನು ಪರಿಚಯಿಸಿದರು ಎಂದರು.

ಹೊರಾಂಗಣ ಕ್ರೀಡೆಗಳು ದೇಹ ದಣಿಸುತ್ತವೆ ಆದರೆ ಮನಸ್ಸಿನ ಏಕಾಗ್ರತೆ ಅದರಿಂದ ಸಾಧ್ಯವಾಗುವುದಿಲ್ಲ. ಯೋಗ ಶರೀರಕ್ಕೆ ದಣಿವನ್ನು ನೀಡದೆ ಮನಸ್ಸನ್ನು ಚೈತನ್ಯಗೊಳಿಸಿ ಆಧ್ಯಾತ್ಮದ ಲೋಕಕ್ಕೆ ನಮ್ಮನ್ನು ತಲುಪಿಸುತ್ತದೆ. ಯೋಗ ಚಿತ್ತದ ಹಲವಾರು ವೃತ್ತಿಗಳನ್ನು ನಿಲ್ಲಿಸಿ ಮನಸ್ಸನ್ನು ಸಮಾಧಿ ಸ್ಥಿತಿಗೆ ತರುತ್ತದೆ. ಯೋಗ ಅನುಷ್ಠಾನವಾಗಬೇಕಾದರೆ ಹಲವಾರು ನಿಯಮಗಳಿವೆ ವ್ರತಗಳಿವೆ. ಅದರಲ್ಲಿ ಬಹಳ ಪ್ರಮುಖವಾದುದು ಅಹಿಂಸೆ. ಎಲ್ಲಿ ಅಹಿಂಸಾ ಪ್ರತಿಷ್ಟಾಪನೆಯಾಗಿರುತ್ತದೆಯೋ ಅಲ್ಲಿ ಹಿಂಸೆ ತನ್ನ ಕ್ರೌರ್ಯವನ್ನು ವಿಜೃಂಭಿಸುವುದಿಲ್ಲ. ನಿಜವಾದ ಯೋಗಿಯನ್ನು ನೋಡಿದ ಭೋರ್ಗರೆಯುವ ಹಾವುಗಳು ಶಾಂತವಾಗುತ್ತವೆ. ಹುಲಿ ಸಿಂಹಗಳು ತಮ್ಮ ಕ್ರೂರತನ ಮರೆಯುತ್ತವೆ. ಈ ಯೋಗ ವೈಜ್ಞಾನಿಕವಾಗಿ ರೂಪಿಸಲ್ಪಟ್ಟ ಸತ್ಯವಾದ ದರ್ಶನ. ಇದನ್ನು ಜನ ಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡಿದ ರುದ್ರಾರಧ್ಯರಿಗೆ ಶಿವಗಂಗಾ ಯೋಗಕೇಂದ್ರದ ಎಲ್ಲಾ ಪದಾಧಿಕಾರಿಗಳು ಅಭಿನಂದನಾರ್ಹರು ಎಂದು ನುಡಿದರು.

ಮೂರು ಗಂಟೆಗಳ ಕಾಲ ನೆಲದ ಮೇಲೆ ಕುಳಿತು ಶಾಂತಚಿತ್ತದಿಂದ ಕಾರ್ಯಕ್ರಮ ಆಲಿಸಿದ ಯೋಗಾರ್ಥಿಗಳಿಗೆ ಯೋಗ ಸಹಾಯ ಮಾಡಿದೆ. ಅಭಿನಂದನಾ ಗ್ರಂಥದಲ್ಲಿ ಯೋಗದ ಬಗ್ಗೆ ಲೇಖನಗಳನ್ನು ಸಂಗ್ರಹಿಸಿ ಬಹಳ ಗುರುತರ ಕೆಲಸ ಕೇಂದ್ರದಿಂದ ಆಗಿದೆ ಎಂದ ಅವರು, ಯೋಗಗುರುಗಳಿಗೆ, ಯೋಗಶಿಕ್ಷಕರಿಗೆ ಹಾಗೂ ಯೋಗ ಶಿಬಿರಾರ್ಥಿಗಳಿಗೆ ಶುಭವಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ, ಬೆಕ್ಕಿನ ಕಲ್ಮಠ ಮಹಾ ಪೋಷಕ ಪರಮಪೂಜ್ಯ  ಶ್ರೀ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ದಿವ್ಯಾಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗ ಆಚಾರ್ಯ ಶ್ರೀ ರುದ್ರಾರಾಧ್ಯ, ಅನ್ನಪೂರ್ಣ, ಟ್ರಸ್ಟಿ ಎಸ್.ರುದ್ರೇಗೌಡರು, ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ,  ಕಲಗೋಡು ರತ್ನಾಕರ್, ಹೊಸತೋಟ ಸೂರ್ಯನಾರಾಯಣ, ಬಿ.ವೈ.ಅರುಣದೇವಿ, ಪಿ.ಎಂ.ಸ್ವಾಮಿ, ಹಾಲಪ್ಪ, ಜಿ.ವಿಜಯ್ ಕುಮಾರ್, ಜಿ.ಎಸ್.ಓಂಕಾರ್, ಕಾಟನ್ ಜಗದೀಶ್, ಚಂದ್ರಶೇಖರಯ್ಯ ಸೇರಿದಂತೆ ಇನ್ನಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!