ಸಮಾಜಿಕ ಜಾಲತಾಣದ ಸಂಗ್ರಹ ಚಿತ್ರ
ವಾರದ ಅಂಕಣ- 04


ಗಜೇಂದ್ರ ಸ್ವಾಮಿ ಎಸ್.ಕೆ., ಶಿವಮೊಗ್ಗ

ಕೊಟ್ಟೋನ್ ಕೋಡಂಗಿ, ಇಸ್ಕಂಡನ್ ಈರಭದ್ರ ಎನ್ನುವ ಗಾದೆ ಈಗ ಬದಲಾಗಿದೆ. ಅವತ್ತು ಕಾಡಿ ಬೇಡಿ ಇಸ್ಕೊಂಡೋನ್ ಈಗ ಗುಮ್ಮಣ್ಗುಸ್ಕ  ಆಗಿಬಿಡುತ್ತಾನೆ.
ತನಗೇನೂ ಗೊತ್ತಿಲ್ಲ ಎನ್ನುವಂತೆ ನಾಟಕ ಮಾಡುತ್ತಾನೆ. ಇದು ಈ ಸಮಾಜದ ವಿಕೃತ ಮನಸ್ಸಿನ ಕೆಲವರ ವರ್ತನೆ ಎಂದರೆ ತಪ್ಪಾಗಲಿಕ್ಕಿಲ್ಲ.
ಪಕ್ಕದಲ್ಲೇ ಇರ್ತಾನೆ, ಮಾತಾಡ್ತಾನೆ, ಇಸ್ಕೊಂಡಿದ್ದು ಕೇಳಿದ್ರೆ ಮಾತ್ರ, ನಾಳೆ, ನಾಡಿದ್ದು, ಇನ್ನೊಂದು ವಾರ…, ಅದ್ಯಾವುದೋ ಬರುತ್ತೆ, ಬಂದಾಕ್ಷಣ ಕೊಡುವೆ ಅಂತ ದಿನ, ಗಂಟೆ, ನಿಮಿಷ ಹೇಳಿ  ಜಾರಿಕೊಳ್ತಾನೆ.


ಕೊಟ್ಟ ತಪ್ಪಿಗೆ ಯಾರೋ ಸಾಕಿದ ನಾಯಿಯಂತೆ ಬಾಲ ಮುದುರಿ ಕೊಳ್ಳಬೇಕಾಗಿದೆ. ಆ ಕೊಟ್ಟದ್ದರ ಬಗ್ಗೆ ಒಂಚೂರು ಯೋಚ್ನೆ ಇಲ್ಲದೇ ಗುಮ್ಮಣ್ಗುಸ್ಕನ ತರ ನಾಟಕ ಮಾಡ್ತಾನೆ. ಇದು ಅನುಭವಜನ್ಯ, ಕೇಳಿದ್ದ ಮಾತು.


ಇಂತಹದೊಂದು ಪೀಠಿಕೆ ಈ ವಾರದ ಅಂಕಣದಲ್ಲಿ ಮೂಡಿಬರಲು ಕಾರಣ ಈ ಗುಮ್ಮಣ್ಗುಸ್ಕ ಪದ ಹಾಗೂ ಅಂತಹ ಆಡು ಭಾಷೆಯ ನಡುವೆ ಸಿಗುವ ವ್ಯಕ್ತಿಗಳ ಕುರಿತಾದ ಚಿತ್ರಣ ಇದಾಗಿದೆ. ಇಲ್ಲಿ ಕೊಟ್ಟದ್ದು ಮತ್ತು ಪಡೆದದ್ದು ಏನಾದರೂ ಆಗಿರಬಹುದು, ಆದರೆ ಹಣ ಒಂದು ಮುಖ್ಯವಾಗಿರಬಹುದು.


ಈ ಗುಮ್ಮಣ್ಗುಸ್ಕ  ಎಂಬ ಪದದ ಅರ್ಥ ಹುಡುಕಿ ಹೊರಟಾಗ ಯಾವುದೇ ಸರಿಯಾದ ಮಾಹಿತಿ ಸಿಗಲಿಲ್ಲ. ನಾವು ನಮ್ಮ ಆಡುಭಾಷೆಯಲ್ಲಿ ಈ ಪದವನ್ನು ಬಹಳಷ್ಟು ಬಾರಿ ಬಳಸುತ್ತೇವೆ. ಈ ಪದ ನಮ್ಮ ನಡುವೆ ಆಡುಭಾಷೆಯಾಗಿ ಬಹಳಷ್ಟು ಸಲ ಬಳಕೆಯಾದರೂ ಸಹ ಬರಹದಲ್ಲಿ ಕಾಣಿಸಿಕೊಂಡದ್ದು ಬಲು ಅಪರೂಪ. ಇದು ಒಂದು ಗೊತ್ತಿದ್ದು ಗೊತ್ತಿಲ್ಲದಂತೆ ಇರುವ ಪ್ರಾಣಿ ಎಂದುಕೊಂಡು ಎಲ್ಲ ಕಡೆ ಹುಡುಕಾಡಿದಾಗ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ.


ಆಡು ಭಾಷೆಯ ಈ ಪದ ಹುಡುಕಿದಾಗ ನಮ್ಮ ನಡುವಿನ ಕೆಲವರನ್ನು ಹೀಗೆ ಕರೆಯುತ್ತಾರೆ. ಇವರು ಮೌನ ಜೀವಿಗಳಲ್ಲ, ಕೆಲವರನ್ನು ಈ ಬಗೆಯಲ್ಲಿ ಸಂಬೋಧಿಸಲು ಕಾರಣ ಘಟನೆ ಎಲ್ಲಾ ಗೊತ್ತಿದ್ದರೂ ಗೊತ್ತಿಲ್ಲದಂತೆ ಓಳಗೊಳಗೆ ಮಂಡಿ ಸವಿಯುವ ಮನಸುಗಳಿಗೆ ಈ ಪದವನ್ನು ಸೇರಿಸಿ ಹೇಳುವುದು ವಾಡಿಕೆ. ಅಂದರೆ ಹಿಂದೆ ಇದ್ದ ಮನೋಸ್ಥಿತಿ ಆ ಕ್ಷಣದಲ್ಲೇ ಬದಲಾಗಿರುತ್ತದೆ. ಪಡೆದಾತ ಆ ನಂತರ ಅನಾಥ ಏನೂ ಆಗಿರುವುದಿಲ್ಲ. ನಾನು ಎಂಬುದೇ ಮುಖ್ಯವಾಗಿರುತ್ತೆ. ಬರ್ಜರಿ ಹಣದ ಹೊಳೆಯಲ್ಲೇ ಈಜಾಡುತ್ತಿರುತ್ತಾರೆ. ( ಬೇರೆಯವರಿಗೂ ಮನೆ, ಸಂಸಾರ ಇರುತ್ತೆ ಅಂತ ಗೊತ್ತಿಲ್ಲದವರು )
ಪಡೆದದ್ದನ್ನು ವಾಪಾಸ್ ಕೊಡುವ ಬಗ್ಗೆ ಇಲ್ಲೇನೂ ಯೋಚಿಸುವುದಿಲ್ಲ. ಹೊಸದಾರಿ ಹುಡುಕುತ್ತಿರುತ್ತಾರೆ. ( ಇದರ ವಿವರಣೆ ಬೇಡ ಎನಿಸುತ್ತದೆ )


ನಾನೇನಾದರಾಗಿರಲಿ, ನನ್ನಷ್ಟಕ್ಕೆ ನಾನು ಎಂದೂ ಇರುವುದಿಲ್ಲ. ಎಲ್ಲರ ಜೊತೆ ಬೆರೆದಾಡುತ್ತಲೇ ತಮ್ಮ ನಯವಂಚಕ ಬುದ್ಧಿಯನ್ನು ಇಟ್ಟುಕೊಂಡು ಏನು ನಡೆದಿಲ್ಲ. ಏನು ಆಗಿಲ್ಲ ಎಂದು ಮನದ ಮಗ್ಗುಲಲ್ಲಿ ಮರೆತವರಂತೆ ನಾಟಕ ಮಾಡುತ್ತಾರೆ.
ಮೊನ್ನೆ ನಡೆದ ಘಟನೆ  ಇಲ್ಲಿ ಅತ್ಯಂತ ವಿಶೇಷವಾಗಿ ನೆನಪಿಗೆ ಬರುತ್ತದೆ. ಗೆಳೆಯನೊಬ್ಬನಿಗೆ ಒಂದಿಷ್ಟು ಕಾಸು ಕೊಡುವ ವಿಷಯದಲ್ಲಿ ಇನ್ನೊರ್ವ  ಆ ಕಾಸನ್ನು ತಂದು ಕೊಡಲು ಬರುತ್ತಾನೆ. ಆದರೆ ಅಷ್ಟರಲ್ಲಿ ಅಲ್ಲಿ ಮಧ್ಯ ಪ್ರವೇಶಿಸಿದ ವ್ಯಕ್ತಿಯೊಬ್ಬ ಅವರಿಲ್ಲ ಎನ್ನುತ್ತಾನೆ. ನನಗೆ ಕೊಡಿ. ಅವರ ಹಣವನ್ನು ನಾನು ಕೊಡುತ್ತೇನೆ ಎಂದು ಈ ಮಧ್ಯವರ್ತಿಯಿಂದ ಹಣವನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತಾನೆ. ನಂತರ ಏನೂ ಗೊತ್ತಿಲ್ಲದಂತೆ ಸುಮ್ಮನಿರುತ್ತಾನೆ. ಕಾಸು ಪಡೆಯಬೇಕಿದ್ದ ವ್ಯಕ್ತಿ ಮತ್ತೆ ಕಾಸು ಕೊಟ್ಟವನಿಗೆ ಹೇಳಿದಾಗ ನಾನು ಅವತ್ತೇ ಕೊಟ್ಟು ಬಂದಿದ್ದೇನೆ. ನನ್ನ ಕಡೆ ಯಾಕೆ ಕೊಡಲಿಲ್ಲ ಎಂದು ಹಣಪಡೆದ ಮದ್ಯದವನಿಗೆ ಕೇಳುತ್ತಾನೆ. ತುಂಬಾ ಅನಿವಾರ್ತೆ ಇತ್ತು ಎನ್ನುತ್ತಾನೆ. ಆದರೆ ಆ ಹಣ ಪಡೆದಾಗ ಕನಿಷ್ಠ ಪ್ರಜ್ಞೆಯಿಂದ ಹಣ ಪಡೆದದ್ದನ್ನು ಹೇಳುವ ಸೌಜನ್ಯವನ್ನು ಬೆಳೆಸಿಕೊಳ್ಳದಿರುವುದು ಎಷ್ಟು ನಾಚಿಕೆಗೇಡಿನ ಸಂಗತಿ ಎಂಬುದು ಆ ಮಧ್ಯಮ ವ್ಯಕ್ತಿಗೆ ಅರ್ಥವಾಗಿಯೇ ಇಲ್ಲ.


ಹೀಗೆ ಒಳಗೊಳಗೆ ತನ್ನದು, ತನ್ನ ಮನೆ, ತನ್ನದೇ ಬಳಗ ಎಂದು ಯೋಚಿಸುತ್ತಾ ಇನ್ನೊಬ್ಬರ ಬದುಕಲ್ಲಿ ಕೈಯಾಡಿಸುವುದು, ಅದರಲ್ಲಿ ಕಿತ್ತು ಜೊತೆಗಿರುವ ನಾಟಕವಾಡುತ್ತಾ ಕೇಳಿದಾಗ ಸಮಯ ನೀಡುವ ವ್ಯಕ್ತಿಗಳನ್ನು ನಾವಿಲ್ಲಿ ಗುಮ್ಮಣ್ಗುಸ್ಕ ಎಂದು ಸಂಭೋಧಿಸಲೇ ಬೇಕಾಗಿರುವುದು ಅನಿವಾರ್ಯವಲ್ಲವೇ?
ಜಗದ ಶೇಕಡ 90ಕ್ಕಿಂತಲೂ ಹೆಚ್ಚು ಜನ ಇಂತಹ ವಿಷಯಗಳಿಂದ ನಿಜಕ್ಕೂ ಭಿನ್ನವಾಗಿದ್ದಾರೆ, ಸಮಾಜದ ಸರ್ವ ಮುಖಗಳಿಗೆ ಸ್ಪಂದಿಸುತ್ತಾರೆ. ಮಾನ ಮರ್ವಾದೆಗೆ ಅಂಜುತ್ತಾರೆ. ಇಲ್ಲಿ ಅಂಜಿಕೆ ಅಳುಕು ಇಲ್ಲದವರು ನಮ್ಮ ನಡುವಿನ ಈ ಪದಕ್ಕೆ ಸೂಕ್ತವಾದವರಲ್ಲವೇ?


ಈ ಮನುಷ್ಯ ಸಂಘ ಜೀವಿ ಎಂದುಕೊಳ್ಳುತ್ತೇವೆ. ನಾವು ಹಲವಾರು ಬಗೆಯ ಚಿಂತನೆಗಳನ್ನು ಮನುಷ್ಯತ್ವವನ್ನು ಹೊಂದಿರುತ್ತೇವೆ. ಆದರೆ ಕೆಲವೇ ಕೆಲವು ಅಸಭ್ಯ ಮನಸ್ಸುಗಳು ಇಡೀ ಸಭ್ಯ ಮನಸ್ಸುಗಳ ಮೇಲೆ ದಾಳಿ ಮಾಡುವುದು ಎಷ್ಟರಮಟ್ಟಿಗೆ ಸರಿ? ಸಭ್ಯ ಮನಸ್ಸುಗಳು ಸಹ ನೆಗೆಟಿವ್ ಥಿಂಕಿಂಗ್ ಬಗ್ಗೆ ಯೋಚಿಸುವುದು ಅನಿವಾರ್ಯವಾಗಿದೆಯೇ?


ಜೀವನದ ಒಂದೊಂದು ಘಟನೆಗಳು ಒಂದೊಂದು ಉದಾಹರಣೆಗಳನ್ನು ಬದುಕಲ್ಲಿ ಒದಗಿಸುತ್ತವೆ. ಇಂತಹ ಅಸಭ್ಯ ಕೆಲವು ನೆಗೆಟಿವ್ ಮನಸುಗಳು, ಸಕಾರಾತ್ಮಕ ಚಿಂತನೆಗಳಿಗೆ ಕೊಡಲಿ ಏಟು ನೀಡುತ್ತಿರುವುದು ಇಂದಿನ ವಾಸ್ತವ ಸ್ಥಿತಿಗಳ ನಡುವಿನ ದುರಂತವಲ್ಲವೇ?

ಚೈತನ್ಯ ನೀಡಿದ ಓದುಗ ದೇವೋ ಭವಃ

ಕೆಲವೇ ಕೆಲವು ಬೆರಳೆಣಿಕೆಯ ಜನ ಹೊಂದಿರುವ ವಿಚಿತ್ರ ವಿಕೃತ ಮನಸುಗಳನ್ನು ಕುರಿತ ಬರಹ ಇದು. ನಮ್ಮ ನಡುವಿನ ಸಕಾರಾತ್ಮಕ ಚಿಂತನೆಯ ಮನಸುಗಳು ಇಲ್ಲಿ ಅನುಭವಿಸುವ ನರಕ ಯಾತನೆಯನ್ನು ನಿಮ್ಮ ಮುಂದೆ ಕಟ್ಟಿಡುವಂತಹ ಪ್ರಯತ್ನವಾದ ಈ ನೆಗೆಟಿವ್ ಥಿಂಕಿಂಗ್ ಭಾರತ ನಾಲ್ಕನೇ ಅಂಕಣ ಮತ್ತೊಂದು ವಿಶೇಷ.
ಇಲ್ಲೊಂದು ಗುಮ್ಮಣ್ಗುಸ್ಕ ಪದಬಳಕೆ ಮೂಲಕ ನಮ್ಮ ನಡುವಿನ ಕೆಲ ವ್ಯಕ್ತಿಗಳ ಸಣ್ಣದೊಂದು ಚಿತ್ರಣ.
ಈಗಾಗಲೇ ಮೂರು ಅಂಕಗಳನ್ನು ಪೂರೈಸಿರುವ ನೆಗೆಟಿವ್ ಥಿಂಕಿಂಗ್ ಕಾಲಂ ಗೆ ಓದುಗರಿಂದ ಸಾಕಷ್ಟು ಪೂರಕವಾದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ತಾವು ಅನುಭವಿಸಿದ ಅನುಭವಗಳ ಎಳೆಗಳನ್ನು ಸಹ ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.
ತುಂಗಾತರಂಗ ದಿನಪತ್ರಿಕೆ ಹೊಸಬಗೆಯ ಸಾಹಿತ್ಯದ ಬರಹಗಳಿಗೆ ಸದಾ ಪೂರಕ ವಾತಾವರಣವನ್ನು ಅವಕಾಶವನ್ನು ಕಲ್ಪಿಸುತ್ತಲೇ ಬಂದಿದೆ. ಕಥೆ ಕವನ ಲೇಖನ ಅಂಕಣಗಳ ಜೊತೆ ಇಂತಹ ಅಂಕಣಗಳನ್ನು ಸಹ ಓದುಗರು ನಿರೀಕ್ಷಿಸುತ್ತಿದ್ದರು.
ಕೇವಲ ಸಕಾರಾತ್ಮಕ ಚಿಂತನೆಗಳನ್ನು ಜನರ ಮುಂದಿಟ್ಟರೆ ಅದರಿಂದ ಸಕಾರಾತ್ಮಕ ಮನಸ್ಸು ಬೆಳೆಯುವುದು ಎಂಬ ನಂಬಿಕೆ ನಮ್ಮದಲ್ಲ. ಎಲ್ಲಿ ವಿಕಾರಾತ್ಮಕ ಚಿಂತನೆಗಳು, ವಿಜೃಂಭಿಸುವುದಿಲ್ಲವೋ ಅಲ್ಲಿಯವರೆಗೆ ಸಕಾರಾತ್ಮಕ ಚಿಂತನೆಗಳಿಗೆ ಬೆಲೆ ಸಿಗುವುದಿಲ್ಲ. ಅಂತಹ ಬೆಲೆ ಸಿಗುವ ಹಿನ್ನೆಲೆಯಲ್ಲಿ ವಿಕಾರಾತ್ಮಕ ಮನಸುಗಳಲ್ಲಿ ಹುದುಗಿರುವ ಮನದ ಜ್ವಾಲೆಯನ್ನು ಚಿಕ್ಕ ಪ್ರಯತ್ನಗಳ ಮೂಲಕ ತಮ್ಮ ಮುಂಡಿಡುವ ಇಂತಹ ಅಂಕಣಗಳಿಗೆ ಓದುಗರಿಂದ ಬಾರಿ ಹೆಚ್ಚಿನ ಪ್ರೋತ್ಸಾಹ ದೊರಕಿದೆ. ಎಲ್ಲಾ ಓದುಗ ದೊರೆಗಳಿಗೆ ಅಭಿನಂದನೆಗಳು.
ಈಗಾಗಲೇ ಯಾರ್ಗೂ ಸಾಲ ಕೊಡೇಡ್ರಿ, ಯಾರ್ಗೂ ಪುಗ್ಸಟ್ಟೆ ಅಯ್ಯೋ ಪಾಪ ಅನ್ಬೇಡ್ರಿ, ಯಾರೇ ಆಗ್ಲಿ ತುಂಬಾ ಹಚ್ಕೋಬ್ಯಾಡ್ರಿ ಅಂಕಣ ಬಂದಿದ್ದು ಇಂದಿನ ಗುಮ್ಮಣ್ಗುಸ್ಕ ಸಾವಾಸ ಬ್ಯಾಡ್ರಿ ಅಂಕಣ ಓದಿ.
ಒಟ್ಟಾರೆ ಇಲ್ಲಿ ನೆಗೆಟಿವ್ ಥಿಂಕಿಂಗ್ ಎಂದರೆ ಸಮಾಜದ ಇಡೀ ಮುಖವಾಣಿ ಅಲ್ಲ. ಸಮಾಜದಲ್ಲಿರುವ ಕೆಲವೇ ಕೆಲವು ಮುಖಗಳ ದರ್ಶನ ಅಷ್ಟೇ. ಈ ಮುಖಗಳಿಂದ ಜನರು ಅನುಭವಿಸುವ ಗೋಳಿನ ಕಥೆಗಳನ್ನು ಅಂಕಣದ ಮೂಲಕ ಸೂಕ್ಷ್ಮವಾಗಿ ತಮ್ಮ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಪ್ರಯತ್ನವಾಗಿದೆ. ನಿಮ್ಮ ಅಭಿಪ್ರಾಯ ನಮಗೆ ಸದಾ ಇರಲಿ

  • ‌‌ ‌ -ಸಂ
  • ಸೂಚನೆ: ಈ ಅಂಕಣದಲ್ಲಿ ಬರುವ ಯಾವುದೇ ಪಾತ್ರಗಳು, ಸನ್ನಿವೇಶಗಳು ಯಾರನ್ನೂ ಉದ್ದೇಶಿಸಿ ಬರೆದಿದ್ದಲ್ಲ, ಸಮಾಜದ ಮೂಲೆಮೂಲೆಗಳಿಂದ ಕೇಳಿಬಂದ ಮಾತುಗಳಷ್ಟೆ. ಯಾರೂ ಅನ್ಯಥಾ ಭಾವಿಸದಿರಲು, ಹೋಲಿಸಿಕೊಳ್ಳದಿರಲೆಂಬ ವಿನಂತಿ.

By admin

ನಿಮ್ಮದೊಂದು ಉತ್ತರ

error: Content is protected !!