ಸಾಹಿತಿ ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ.
ಆಷಾಢ ಮಾಸವು ಜೇಷ್ಠ ಮಾಸ ನಂತರ ಪ್ರಾರಂಭವಾಗುತ್ತದೆ.ನಮ್ಮ ಪುರಾಣಗಳ ಪ್ರಕಾರ ಭಗವಾನ್ ವಿಷ್ಣು ಮತ್ತು ಶಿವನ ಆರಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಶಾಡ ಶುದ್ಧ ಏಕಾದಶಿಯಿಂದ 4 ತಿಂಗಳುಗಳ ಕಾಲ ಅಖಂಡ ನಿದ್ರೆಯಲ್ಲಿ ಇರುತ್ತಾನೆ. ಆಷಾಢ ಮಾಸಕ್ಕೆ ಪೂರ್ವಾಷಾಡ ಮತ್ತು ಉತ್ತರಾಷಾಡ ರಾಶಿಯ ಹೆಸರನ್ನು ಇಡಲಾಗಿದೆ.ಆಷಾಢ ಮಾಸದ ಹುಣ್ಣಿಮೆಯಂದು ಈ ಎರಡು ರಾಶಿಗಳ ನಡುವೆ ಚಂದ್ರನು ನೆಲೆಸುತ್ತಾನೆ.ಆದುದರಿಂದ ಈ ಮಾಸವನ್ನು ಆಷಾಢ ಎಂದು ಕರೆಯುತ್ತಾರೆ.
ಈ ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯವರೆಗೆ ಸಾಧು, ಸಂತರು ಚಾತುರ್ಮಾಸ ಅನುಷ್ಠಾನವನ್ನು ಆಚರಿಸುತ್ತಾರೆ.ಈ ನಾಲ್ಕು ತಿಂಗಳು ಅವರು ಪ್ರಯಾಣವನ್ನು ನಿಲ್ಲಿಸುವ ಮೂಲಕ ಸಾಧು -- ಸಂತರು ಒಂದೇ ಸ್ಥಳದಲ್ಲಿ ನೆಲೆಸಿ ಧ್ಯಾನ, ಚಿಂತನೆ, ಉಪವಾಸ,ಅನುಷ್ಠಾನಗಳಲ್ಲಿ ಮಗ್ನರಾಗಿರುತ್ತಾರೆ.
ಆಷಾಢ ಮಾಸ ಪ್ರಾರಂಭದ ನಂತರ ಶುಭ ಕಾರ್ಯಗಳಾದ ಮದುವೆಯ ಮಾತುಕತೆ,ಮದುವೆ,ಗೃಹಪ್ರವೇಶ, ಉಪನಯನ,ವಾಹನ ಮತ್ತು ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಪ್ರಾರಂಭ ಮುಂತಾದ ಶುಭ ಕಾರ್ಯಗಳಿಗೆ ನಿಷೇಧವಾಗುವುದು. ಇದಕ್ಕೆ ಮುಖ್ಯವಾಗಿ ಕಾರಣ ನೂರಾರು ವರ್ಷಗಳ ಹಿಂದೆ ಆಷಾಢ ಮಾಸದಲ್ಲಿ ಮಳೆ ಆರ್ಭಟ ಹೆಚ್ಚಾಗಿರುತ್ತಿತ್ತು. ಮನೆಯಿಂದ ಹೊರಗೆ ಹೋಗುವುದೇ ಬಹಳ ಕಷ್ಟಕರವಾಗಿರುತ್ತಿತ್ತು, ಈ ರೀತಿ ನಿರಂತರವಾದ ಮಳೆ ಗಾಳಿಯಿಂದ ಸಂಚಾರಕ್ಕೆ ಅಡೆತಡೆ ಉಂಟಾಗುತ್ತಿತ್ತು,ಈ ಎಲ್ಲಾ ಕಾರಣಗಳಿಂದ ಹೊರಗಿನ ಕೆಲಸಗಳು ಕುಂಠಿತವಾಗುತ್ತಿದ್ದವು.
ರೈತರ ತಿಂಗಳು :- ಈ ಮಾಸವು ರೈತರಿಗೆ ಕೃಷಿಗೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಹಾಗೂ ರೈತರಿಗೆ ಹೊಲ ಗದ್ದೆಗಳಲ್ಲಿ ವಿಪರೀತ ಕೆಲಸ ಕಾರ್ಯಗಳು ಇರುತ್ತಿದ್ದವು.ಈ ಕಾರಣಗಳಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ, ಈ ಎಲ್ಲಾ ಕಾರಣದಿಂದ ಬೇರೆ ವ್ಯವಹಾರಕ್ಕೆ ಸಮಯವೇ ಸಿಗುತ್ತಿರಲಿಲ್ಲ,ಆಷಾಢ ಮಾಸದಲ್ಲಿ ಶುಭ ಕಾರ್ಯ ಮಾಡಲು ಅನಾನುಕೂಲವಾಗಿದ್ದರಿಂದ ಶುಭ ಕಾರ್ಯ ಮಾಡುವುದನ್ನು ನಿಷೇಧಿಸಿದ್ದರು.
ಮದುವೆಯಾದ ಹೊಸ ವರ್ಷದಲ್ಲಿ ಅತ್ತೆ ಸೊಸೆ ಆಷಾಡ ಮಾಸದಲ್ಲಿ ಕೂಡಿ ಒಂದೇ ಮನೆಯಲ್ಲಿ ವಾಸಿಸುವುದು ನಿಷೇಧ ಎಂದು ಕೆಲವು ಕಡೆ ಪದ್ಧತಿ ಇದೆ. ಆಷಾಢದಲ್ಲಿ ಮಳೆ ಹೆಚ್ಚು ಇರುವುದರಿಂದ ಹೊಲ ಗದ್ದೆಗಳಲ್ಲಿ ಮತ್ತು ಮನೆಯಲ್ಲಿ ಹೆಣ್ಣು ಮಕ್ಕಳಿಗೆ ಕೆಲಸ ಕಾರ್ಯಗಳು ಹೆಚ್ಚಿರುತ್ತವೆ, ಅತ್ತೆಯಾದವರು ಸೊಸೆಗೆ ಹೆಚ್ಚು ಕೆಲಸ ಒತ್ತಡ ತರಬಹುದು, ಇದರಿಂದ ಅವರಿಬ್ಬರಲ್ಲಿ ವೈಮನಸ್ಸು ಉಂಟಾಗಿ ಜಗಳಕ್ಕೆ ಕಾರಣ ಆಗಬಹುದು ಎಂದು ಒಂದು ತಿಂಗಳ ಕಾಲ ತವರು ಮನೆಗೆ ಕಳಿಸುವ ಸಂಪ್ರದಾಯ ಬಂದಿರಬೇಕು.
ಆಷಾಢ ಮಾಸದ ಮಹತ್ವ :- ಆಷಾಢ ಮಾಸದಲ್ಲಿ ಭಗವಾನ್ ವಿಷ್ಣುವನ್ನು ಪೂಜಿಸುವುದರಿಂದ ಪುಣ್ಯ ಸಿಗುತ್ತದೆ.ಆಷಾಢ ಮಾಸದ ಮೊದಲ ದಿನದಂದು ಬ್ರಾಹ್ಮಣರಿಗೆ ಆಹಾರ,ಛತ್ರಿ,ಉಪ್ಪು ಮತ್ತು ನೆಲ್ಲಿಕಾಯಿಯನ್ನು ದಾನ ಮಾಡುವ ಸಂಪ್ರದಾಯವಿದೆ.ಅಮರನಾಥದ ಹಿಮಲಿಂಗ ದರ್ಶನ ಪ್ರತಿ ವರ್ಷ ಆರಂಭವಾಗುವುದು ಈ ಸಮಯದಲ್ಲೇ, ಪ್ರಥಮ ಏಕಾದಶಿ ವ್ರತ ಆರಾಧನೆ ಬರುವುದು, ಆಷಾಢದಲ್ಲಿ ಶಿವಮೂರ್ತಿಗೆ ಅಮರತ್ವದ ರಹಸ್ಯ ಹೇಳಿರುವುದು, ಗಂಗೆ ಭೂಮಿಗೆ ಉತ್ತರಾಭಿಮುಖವಾಗಿ ಹರಿದು ಬಂದಿದ್ದು ಇದೇ ಮಾಸದಲ್ಲಿ, ಮಹಾ ಪತಿ ವ್ರತೆ ಅನುಸೂಯಾದೇವಿ 4 ಸೋಮವಾರ ಶಿವ ವ್ರತ ಮಾಡಿದ್ದು, ಆಷಾಢ ಶುಕ್ರವಾರಗಳಲ್ಲಿ ಲಕ್ಷ್ಮಿ ಪೂಜೆ ಮತ್ತು ಶಕ್ತಿ ದೇವತೆಗಳನ್ನು ವಿಶೇಷವಾಗಿ ಆಚರಿಸುವರು.
ಸುಮಂಗಲಿಯರು ದೀರ್ಘಕಾಲದ ಮಾಂಗಲ್ಯ ಪ್ರಾಪ್ತಿಗಾಗಿ ಆಷಾಢ ಮಾಸದ ಅಮಾವಾಸ್ಯೆಯ ಸಂಜೆ ಜ್ಯೋತಿ ಭೀಮೇಶ್ವರ ವ್ರತವನ್ನು ಭಕ್ತಿಯಿಂದ ಆಚರಿಸುತ್ತಾರೆ. ಆಷಾಢ ಹುಣ್ಣಿಮೆ ದಿನ ಗುರು ಪೂರ್ಣಿಮೆಯನ್ನು ಎಲ್ಲಾ ಮಠ ಮಂದಿರಗಳಲ್ಲಿ ಆಚರಿಸಿ ಚತುರ್ಮಾಸ ವ್ರತವನ್ನು ಪ್ರಾರಂಭ ಮಾಡುತ್ತಾರೆ.
ಈ ಎಲ್ಲಾ ಮಹತ್ವಗಳು ಆಷಾಢ ಮಾಸದಲ್ಲಿ ಇರುವುದರಿಂದ ಈ ಮಾಸವು ಸಹ ವಿಶಿಷ್ಟ ಮಹತ್ವವನ್ನು ಪಡೆದುಕೊ
ಆಷಾಢ ಮಾಸದಲ್ಲಿ ಶುಭ ಕಾರ್ಯಗಳಾದ ಮದುವೆ, ಗೃಹಪ್ರವೇಶ, ಉಪನಯನ , ಜಮೀನುಕೊಳ್ಳುವುದು,ಹೊಸ ವ್ಯಾಪಾರ ಮುಂತಾದ ಶುಭಕಾರ್ಯಗಳಿಗೆ ಸೂಕ್ತ ವಲ್ಲದಿದ್ದರೂ, ಪ್ರಥಮ ಏಕಾದಶಿ ವ್ರತ ಆರಾಧನೆ, ಲಕ್ಷ್ಮಿ ಪೂಜೆ ಮತ್ತು ಶಕ್ತಿ ದೇವತೆಗಳ ಆರಾಧನೆಯನ್ನೂ ವಿಶೇಷವಾಗಿ ಈ ಮಾಸದಲ್ಲಿ ಪೂಜಿಸುವರು, ಸುಮಂಗಲಿಯರು ಭೀಮನ ಅಮಾವಾಸ್ಯೆ ವ್ರತ, ಮಠ — ಮಂದಿರದಲ್ಲಿ ಗುರುಪೂರ್ಣಮೆಯನ್ನು ಆಚರಿಸುವರು ಹಾಗಾಗಿ ಈ ಮಾಸವು ವಿಶಿಷ್ಟ ಮಹತ್ವವನ್ನು ಪಡೆದುಕೊಂಡಿದೆ.