ಶಿವಮೊಗ್ಗ : ಜುಲೈ ೧೧ : ಜಿಲ್ಲೆಯ ಜನರ ಜೀವಜಲದ ಮೂಲವಾಗಿರುವ ತುಂಗಾನದಿ ಮಲಿನವಾಗುವುದನ್ನು ನಿಯಂತ್ರಿಸುವಲ್ಲಿ ಸರ್ಕಾರ, ಸರ್ಕಾರೇತರ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಕೈಜೋಡಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮನವಿ ಮಾಡಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ನಟ ಅನಿರುದ್ಧ ಜತಕರ ಅವರು ತುಂಗಾನದಿಗೆ ನಿತ್ಯ ತ್ಯಾಜ್ಯ, ಚರಂಡಿ ನೀರು ಸೇರಿ ಮಲಿನವಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರ ಹಿನ್ನೆಲೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನಾ ಸಭೆ ನಡೆಸಿದರು.


ನದಿ ನೀರು ಕಲುಷಿತಗೊಳ್ಳುವುದನ್ನು ನಿಯಂತ್ರಿಸಿ, ಜನಸಾಮಾನ್ಯರ ಆರೋಗ್ಯಕರ ಜೀವನ ನಡೆಸಲು ಸಹಕಾರಿಯಾಗಬೇಕು. ಪ್ರಸ್ತುತ ಸಂದರ್ಭದಲ್ಲಿ ಪ್ರಮುಖವಾಗಿ ಮಾನವ ಬಳಕೆ ಹಾಗೂ ಕೈಗಾರಿಕೆಗಳ ಬಳಕೆಯಿಂದ ನೀರು ಮಲಿನಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನದಿಗೆ ಮಲಿನ ನೀರು ಸೇರುವ ಸ್ಥಳಗಳನ್ನು ಗುರಿತಿಸಿ, ಅದನ್ನು ಸಂಸ್ಕರಿಸಿ, ಬಳಕೆಗೆ ಯೋಗ್ಯವಾಗುವಂತೆ ಮಾಡಿ, ನದಿಗೆ ಪುನರ್ ಸೇರ್ಪಡೆಗೊಳಿಸುವಂತಾಗಬೇಕು ಎಂದ ಅವರು, ಒಳಚರಂಡಿ ಮಂಡಳಿ ವತಿಯಿಂದ ಈಗಾಗಲೇ ಅನೇಕ ಸ್ಥಳಗಳನ್ನು ಗುರುತಿಸಿ, ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಬೇಸಿಗೆಯಿಂದ ಈ ಘಟಕಗಳು ಕಾರ್ಯಾರಂಭಗೊಳ್ಳಲಿವೆ ಎಂದರು.


ಮಾಲಿನ್ಯ ನಿಯಂತ್ರಣ ಮಂಡಳಿಯೂ ಕೂಡ ಹಂತಹಂತದಲ್ಲಿ ಕಾಕಾಲಕ್ಕೆ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ವರದಿ ಸಲ್ಲಿಸುತ್ತಿದೆ. ಅದರಂತೆ ನದಿಯ ಪರಿಶುದ್ಧತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಇನ್ನಷ್ಟು ಪೂರಕ ವರದಿಗಳನ್ನು ನೀಡಿದಲ್ಲಿ ಅದನ್ನು ಆದ್ಯತೆಯ ಮೇಲೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ ಎಂದರು.


ತುಂಗಾನದಿಗೆ ಶಿವಮೊಗ್ಗ ನಗರ ಮಾತ್ರವಲ್ಲದೇ ತೀರ್ಥಹಳ್ಳಿ ಪಟ್ಟಣ ಹಾಗೂ ಗ್ರಾಮಾಂತರ ವಸತಿ ಪ್ರದೇಶಗಳ ತ್ಯಾಜ್ಯವೂ ಸೇರಿಕೊಳ್ಳುತ್ತಿದೆ. ಇದರ ನಿಯಂತ್ರಣಕ್ಕಾಗಿ ತೀರ್ಥಹಳ್ಳಿಯ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಆಯಾ ಗ್ರಾಮಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರವನ್ನು ಪಡೆಯುವುದಾಗಿ ತಿಳಿಸಿದ ಅವರು, ಇದರ ವ್ಯವಸ್ಥಿತ ನಿರ್ವಹಣೆಗಾಗಿ ಜಿಲ್ಲಾ ಮಟ್ಟದ ಓರ್ವ ಅರ್ಹ

ಅಧಿಕಾರಿಯನ್ನು ನೇಮಿಸಲಾಗುವುದು. ಮುಂದಿನ ದಿನಗಳಲ್ಲಿ ನದಿಯ ಶುದ್ಧತೆಗಾಗಿ ಕೈಗೊಂಡ ಕ್ರಮಗಳ ಕುರಿತು ಪ್ರತಿ ಎರಡು ತಿಂಗಳಿಗೊಮ್ಮೆ ಸಭೆ ಸೇರಿ ಚರ್ಚಿಸಿ, ಮುಂದಿನ ೨ವರ್ಷಗಳಲ್ಲಿ ನದಿಯನ್ನು ಸಂಪೂರ್ಣ ಶುದ್ಧವಾಗಿಸಲು ಕ್ರಮ ವಹಿಸುವುದಾಗಿ ಅವರು ತಿಳಿಸಿದರು.
ನದಿಯ ನಿರಂತರ ಉಸ್ತುವಾರಿ ಹಾಗೂ ನಿರ್ವಹಣೆಗಾಗಿ ಸರ್ಕಾರದ ಮಟ್ಟದಲ್ಲಿ ಸಮಿತಿಯನ್ನು ರಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಪಾಲಿಕೆ ಹಾಗೂ ನದಿ ಪಾತ್ರದ ಪಂಚಾಯಿತಿಗಳ ಹಂತದಲ್ಲಿ ಜನಜಾಗೃತಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಿಗೆ ಸೂಚಿಸಿದರು.


ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕರ್ನಾಟಕ ರಾಜ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಅವರು ಮಾತನಾಡಿ, ಕಲುಷಿತ ನೀರು ನದಿ ಸೇರುವುದನ್ನು ನಿಯಂತ್ರಿಸಲು ಸ್ಥಳೀಯವಾಗಿ ಸಾಧ್ಯವಾಗಬಹುದಾದ ತಂತ್ರಜ್ಞಾನ ಹಾಗೂ ಪರ್ಯಾಯ ಕ್ರಮಗಳನ್ನು ಬಳಸುವುದು ಸೂಕ್ತವಾಗಿದೆ ಎಂದರು.


ನಟ ಅನಿರುದ್ಧ ಜತಕರ ಅವರು ಮಾತನಾಡಿ, ನದಿಯ ಮಾಲಿನ್ಯ ನಿಯಂತ್ರಿಸುವುದರ ಜೊತೆಗೆ ನವೆಂಬರ್ ೦೧ರಂದು ತುಂಗೆಯನ್ನು ಎಲ್ಲರನ್ನು ಒಪ್ಪುವ ಹಾಗೂ ಅಪ್ಪಿಕೊಳ್ಳುವ ಹಾಗೂ ಗಂಗಾರತಿಯಂತೆ ಪ್ರತಿದಿನ ತುಂಗಾರತಿ ಕಾರ್ಯಕ್ರಮವನ್ನು ಮಾನ್ಯ ಮುಖ್ಯಮಂತ್ರಿಗಳಿಂದ ಉದ್ಘಾಟಿಸುವ ಆಶಯ ಹೊಂದಿರುವುದಾಗಿ ಅವರು, ಈ ಮಹತ್ವದ ಕಾರ್ಯದಲ್ಲಿ ಜಿಲ್ಲಾಡಳಿತ ಸೇರಿದಂತೆ ಎಲ್ಲರ ಸಹಕಾರ ಬಯಸುವುದಾಗಿ ಅವರು ತಿಳಿಸಿದರು.
ನದಿಯ ಶುದ್ಧತೆಗೊಳಿಸುವುದರಿಂದ, ತುಂಗಾರತಿ ಕಾರ್ಯಕ್ರಮದ ಅನುಷ್ಠಾನದಿಂದ ಎಲ್ಲರಲ್ಲೂ ಪೂಜ್ಯ ಭಾವನೆ ಬೆಳೆಯಲಿದೆ. ಇದರೊಂದಿಗೆ ಪ್ರವಾಸಿಗರ ತಾಣವಾಗಿ ಪರಿವರ್ತನೆಗೊಳ್ಳಲಿದೆ. ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಅಲ್ಲದೆ ಇಲ್ಲಿನ ಆಯಕಟ್ಟಿನ ಸ್ಥಳದಲ್ಲಿ ಜಲಸಾಹಸ ಕ್ರೀಡೆಗೆ ಅವಕಾಶಗಳು ಒದಗಿಬರಲಿದೆ ಎಂದರು.


ಕೊಳಚೆ ನೀರು ನದಿ ಸೇರುವುದನ್ನು ನಿಯಂತ್ರಿಸುವುದು, ಕಾರ್ಖಾನೆಗಳ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸ್ಥಾಪನೆ, ನದಿ ಪಾತ್ರದಲ್ಲಿ ತುಂಬಿರುವ ಕಳೆ ಕಿತ್ತು ನೀರನ್ನು ಶುದ್ಧಗೊಳಿಸುವ ಅತ್ಯಂತ ತುರ್ತು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ನಿಯಮ ಮೀರಿ ತುಂಗೆಯನ್ನು ಕಲುಷಿತಗೊಳಿಸುವವರ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕು. ಹೊಲಗದ್ದೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು. ಬಟ್ಟೆ, ಜಾನುವಾರು, ವಾಹನಗಳು ತೊಳೆಯುವುದನ್ನು ನಿಲ್ಲಿಸಬೇಕು ಎಂದವರು ನುಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ಕವಿತಾ ಯೋಗಪ್ಪನವರ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಕೆ.ಆರ್.ಸುಜಾತಾ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!