ಸಾಗರ : ಪ್ರವಾಸಿ ಮಂದಿರ ಎದುರಿನ ಪಾರ್ಕ್ ಅಭಿವೃದ್ದಿಗೆ ೮೦ ಲಕ್ಷ ರೂ. ಮಂಜೂರು ಮಾಡಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.


ಇಲ್ಲಿನ ನಗರಸಭೆ ಹಿಂಭಾಗದಲ್ಲಿ ನಿರ್ಮಿಸಲಾಗುತ್ತಿರುವ ಕಾರು ಸೆಲ್ಟರ್‌ಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ನಗರವ್ಯಾಪ್ತಿಯಲ್ಲಿ ಪಾರ್ಕ್‌ಗಳ ಸಂಪೂರ್ಣ ಹಾಳುಬಿದ್ದು ಹೋಗಿದ್ದು ಅದನ್ನು ಪುನರ್ ನಿರ್ಮಾಣ ಮಾಡಲು ವಿಶೇಷ ಗಮನ ಹರಿಸಲಾಗಿದೆ. ನೆಹರೂ ಮೈದಾನದಲ್ಲಿ ಸುಮಾರು ೪೦ ಲಕ್ಷ ರೂ. ವೆಚ್ಚದಲ್ಲಿ ರಂಗಮಂದಿರ ನಿರ್ಮಾಣ, ಕ್ರೀಡಾಪಟುಗಳಿಗೆ ಡ್ರೆಸ್ಸಿಂಗ್ ರೂಮ್, ಶೌಚಾಲಯ ನಿರ್ಮಾಣಕ್ಕೆ ಹಣ ಮಂಜೂರು ಮಾಡಲಾಗಿದೆ. ನಗರಸಭೆ ಎದುರಿನ ಪಾರ್ಕ್‌ಗೆ ಕಾಯಕಲ್ಪ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.


ನಗರದ ಮೂರು ಭಾಗದಲ್ಲಿ ಸುಸಜ್ಜಿತವಾದ ಫುಡ್‌ಕೋರ್ಟ್ ನಿರ್ಮಾಣ, ಸೊರಬ ರಸ್ತೆ ಸೇರಿದಂತೆ ನಗರದ ನಾಲ್ಕೂ ಬದಿಗಳಲ್ಲಿ ವಾರದ ಸಂತೆ ನಡೆಸಲು ಅಗತ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಮೀನು ಮಾರ್ಕೇಟ್ ಅಭಿವೃದ್ದಿ ಅಂತಿಮ ಹಂತದಲ್ಲಿದ್ದು ಮುಂದಿನ ದಿನಗಳಲ್ಲಿ ಮೀನುಗಳನ್ನು ಮಾರ್ಕೇಟ್‌ನಲ್ಲಿ ಮಾತ್ರ ಮಾರಾಟ ಮಾಡಲು ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.


ಒಳಚರಂಡಿ ಕಾಮಗಾರಿ ಮುಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಆದರೆ ನಗರಸಭಾ ಬಿಜೆಪಿ ಸದಸ್ಯರಿಗೆ ಕಾಮಗಾರಿ ಮುಗಿದರೆ ಎಲ್ಲಿ ಶಾಸಕರಿಗೆ ಒಳ್ಳೆಯ ಹೆಸರು ಬರುತ್ತದೆಯೋ ಎಂದು ಅಡ್ಡಗಾಲು ಹಾಕುತ್ತಿದ್ದಾರೆ. ನಗರಸಭೆಯಿಂದ ೯೩ ಲಕ್ಷ ರೂ. ಭೂಸ್ವಾಧೀನಕ್ಕೆ ಅನುದಾನ ಬಳಕೆ ಮಾಡಿಕೊಳ್ಳಲು ಅವಕಾಶವಿದ್ದರೂ ಅದಕ್ಕೆ ಬಿಜೆಪಿ ಸದಸ್ಯರು ಅಡ್ಡಗಾಲು ಹಾಕಿ ಅಭಿವೃದ್ದಿ ವಿರೋಧಿಗಳಾಗಿದ್ದಾರೆ. ಬಿಜೆಪಿ ನಡವಳಿಕೆಯನ್ನು ಜನರು ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ಅವರಿಗೆ ತಕ್ಕಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.


ಜೋಗ ಅಭಿವೃದ್ದಿ ಬಗ್ಗೆ ವಿಶೇಷ ಕಾಳಜಿ ವಹಿಸಲಾಗಿದೆ. ವರ್ಷದ ೩೬೫ ದಿನವೂ ಜೋಗ ವೀಕ್ಷಣೆಗೆ ಪ್ರವಾಸಿಗರು ಬರುವಂತೆ ಸೌಲಭ್ಯ ಕಲ್ಪಿಸಲಾಗುತ್ತದೆ. ಜೋಗ ಅಭಿವೃದ್ದಿಗೆ ರಾಜ್ಯ ಸರ್ಕಾರದಿಂದ ೧೮೦ ಕೋಟಿ ರೂ. ಮಂಜೂರು ಮಾಡಿಸಲಾಗುತ್ತದೆ. ಜೋಗದಲ್ಲಿ ಸುಸಜ್ಜಿತ ಹೋಟೆಲ್ ನಿರ್ಮಾಣಕ್ಕೆ ಖಾಸಗಿಯವರು ಮುಂದೆ ಬಂದಿದ್ದು ಸುಮಾರು ೨೫೦ ಕೋಟಿ ರೂ. ಬಂಡವಾಳ ಹೂಡುವುದಾಗಿ ಭರವಸೆ ನೀಡಿದ್ದಾರೆ. ಅವರಿಗೆ ಹೋಟೆಲ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಕಾರು ಚಾಲಕರು ಮತ್ತು ಮಾಲೀಕರ ಸಂಘದ ಗಿರೀಶ್ ಕೋವಿ, ರಾಮಣ್ಣ, ವಿನಯ್ ಕೆಂಬಾವಿ, ಪ್ರವೀಣ್ ಕುಮಾರ್, ಕೃಷ್ಣಮೂರ್ತಿ, ಪ್ರದೀಪ್, ಗಣಪತಿ ಮಂಡಗಳಲೆ, ತಾರಾಮೂರ್ತಿ, ಸುರೇಶಬಾಬು, ಸೋಮಶೇಖರ ಲ್ಯಾವಿಗೆರೆ ಇನ್ನಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!