ಸಾಗರ : ಗೋಪಾಲಕೃಷ್ಣ ಬೇಳೂರು ಅವರದ್ದು ಚೇಳಿನ ಬುದ್ದಿ. ತನಗೆ ಸಹಾಯ ಮಾಡಿದವರನ್ನು ಕುಟುಕುವ ಚೇಳಿನ ಬುದ್ದಿ ಹೊಂದಿರುವ ಬೇಳೂರು ಚುನಾವಣೆ ಗೆಲುವಿನಲ್ಲಿ ಪ್ರಮುಖಪಾತ್ರ ವಹಿಸಿದ ಕಾಗೋಡು ತಿಮ್ಮಪ್ಪ ಅವರನ್ನು ಬಿಟ್ಟಿಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ತಿಳಿಸಿದ್ದಾರೆ.
ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರ ಬಿಜೆಪಿ ಸೇರ್ಪಡೆಗೊಂಡವನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಈ ಚೇಳಿನ ಕೈನಲ್ಲಿ ನಾವೆಲ್ಲಾ ಹಿಂದೆ ಕುಟುಕಿಸಿ ಕೊಂಡಿದ್ದೇವೆ ಎಂದರು.
ಸರ್ಕಾರ ಕಾಗೋಡು ತಿಮ್ಮಪ್ಪ ಅವರ ಸ್ವಾಧೀನದಲ್ಲಿರುವ ಪಾಲಿಟೆಕ್ನಿಕ್ ಕಾಲೇಜಿಗೆ ಜಾಗ ಮಂಜೂರು ಮಾಡಿದೆ. ಗೋಪಾಲಕೃಷ್ಣ ಬೇಳೂರು ತಾವು ಗೆದ್ದ ನಂತರ ಆ ಜಾಗವನ್ನು ವಶಕ್ಕೆ ಪಡೆಯುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಿಂದೆ ಕಂಸ, ಧ್ವಂಸ ಎಂದು ಕಾಗೋಡು ತಿಮ್ಮಪ್ಪ ಅವರನ್ನು ಟೀಕಿಸಿದ್ದರು. ಆದರೂ ಕಾಗೋಡು ತಿಮ್ಮಪ್ಪ ಅವರು ಬೇಳೂರು ಗೆಲುವಿಗೆ ಶ್ರಮಿಸಿದ್ದಾರೆ. ಅಂತಹವರ ಕಾಲೇಜಿಗೆ ಸರ್ಕಾರ ನೀಡಿದ ಜಾಗವನ್ನು ವಾಪಾಸ್ ಪಡೆಯಿರಿ ಎಂದು ಪತ್ರೆ ಬರೆದಿರುವ ದಾಖಲೆ ನನ್ನ ಬಳಿ ಇದೆ. ಇದನ್ನು ಸಾರ್ವಜನಿಕರಿಗೆ ತಿಳಿಸುವ ಕೆಲಸವನ್ನು ಪಕ್ಷದ ಪ್ರಮುಖರು ಮಾಡಬೇಕು ಎಂದರು.
ಅಭಿವೃದ್ದಿ ವಿಷಯವಾಗಿ ಹಣ ತಂದಿದ್ದು ತಾವೆ ಎಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಅವರು ಅಭಿವೃದ್ದಿಗೆ ಯಾವ ರೀತಿ ಹಣ ತಂದಿದ್ದಾರೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸಲಾಗುತ್ತದೆ. ಪಕ್ಷದ ಮುಖಂಡರು ಕಾರ್ಯಕರ್ತರು ಯಾವುದಕ್ಕೂ ಹಿಂದೆ ಸರಿಯದೆ ಪಕ್ಷ ಸಂಘಟನೆಗೆ ತೊಡಗಿಕೊಳ್ಳಬೇಕು. ಮುಂದಿನ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಈಗಿನಿಂದಲೆ ಸಿದ್ದತೆ ನಡೆಸಬೇಕು ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಮುಖರಾದ ಡಾ. ರಾಜನಂದಿನಿ ಕಾಗೋಡು, ಗಣೇಶಪ್ರಸಾದ್, ದೇವೇಂದ್ರಪ್ಪ ಯಲಕುಂದ್ಲಿ, ಮಧುರಾ ಶಿವಾನಂದ್, ವಿ.ಮಹೇಶ್, ಜನಾರ್ದನ ಉಡುಪ ಇನ್ನಿತರರು ಹಾಜರಿದ್ದರು