ನಗರದ ಪಿಇಎಸ್‌ಐಎಎಮ್‌ಎಸ್ ಪದವಿ ಕಾಲೇಜಿನಲ್ಲಿ ಕಲರವ ಸಾಂಸ್ಕೃತಿಕ ವೇದಿಕೆಯ ವತಿಯಿಂದ ಸಾಂಪ್ರದಾಯಿಕ ದಿನಾಚರಣೆ ಸಂಸ್ಕೃತಿ ಸಂಭ್ರಮವನ್ನು ಆಯೋಜಿಸಲಾಗಿತ್ತು. ವಿವಿಧತೆಯಲ್ಲಿ ಏಕತೆಯನ್ನು ಸಾರುವ ಭಾರತ ದೇಶದ ಸಂಪ್ರದಾಯಗಳು, ಆಚರಣೆ, ನಂಬಿಕೆಗಳು, ವೇಷಭೂಷಣಗಳು ಹಲವಾರು ವೈವಿಧ್ಯತೆಗಳನ್ನು ಹೊಂದಿವೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಾರುತ್ತಾ ಸಮಾನತೆಯನ್ನು +
ಎತ್ತಿಹಿಡಿದಿರುವುದು ಈ ದೇಶದ ಶ್ರೇಷ್ಠತೆಯಾಗಿದೆ. ಕೃಷಿ ಈ ದೇಶದ ಬೆನ್ನೆಲುಬಾಗಿದೆ. ದೇಶಕ್ಕೆ ಅನ್ನವನ್ನು ನೀಡುವ ಎಲ್ಲಾ ರೈತ ಸಮುದಾಯವನ್ನು ಗೌರವಿಸುವ ಹಾಗು ಸುಗ್ಗಿಯ ವೈಶಿಷ್ಟ್ಯತೆಗಳನ್ನು ಪ್ರತಿಬಿಂಬಿಸುವ
ಮೂಲಕ ರೈತರಿಗೆ ಈ ದಿನವನ್ನು ಅರ್ಪಿಸಲಾಯಿತು. ಪ್ರತಿಯೊಂದು ತರಗತಿಗಳಲ್ಲಿ ವಿದ್ಯಾರ್ಥಿಗಳು ಗ್ರಾಮೀಣ ಪರಿಸರದಲ್ಲಿ ಆಚರಿಸಲಾಗುವ ಸುಗ್ಗಿಯ
ಸಂಭ್ರಮವನ್ನು ಚಿತ್ತಾಕರ್ಷಕ ರಂಗೋಲಿಗಳು, ಧಾನ್ಯಗಳಿಂದ ಬಿಡಿಸಿದ ರಂಗೋಲಿಗಳು, ಕಬ್ಬು, ಬಾಳೆಕಂದು, ತೆಂಗಿನಗರಿ, ಭತ್ತದ ತೆನೆಗಳು, ಸಿಂಗಾರ, ಬಗೆ ಬಗೆಯ ಚಿತ್ತಾಕರ್ಷಕ ಹೂಗಳು ಮುಂತಾದವುಗಳನ್ನು ಬಳಸಿಕೊಂಡು ಸುಗ್ಗಿಯ ವಾತಾವರಣವನ್ನು ಸೃಷ್ಠಿಸಿ ಸಂಭ್ರಮಿಸಿದರು. ಮಕರ ಸಂಕ್ರಾಂತಿ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು.
ಸಂಕ್ರಾಂತಿ ಸಮೃದ್ಧಿಯ ಸಂಕೇತವಾಗಿದೆ. ಅಲ್ಲದೆ ಸೂರ‍್ಯನು ಮಕರ ರಾಶಿಗೆ ಪ್ರವೇಶಿಸುವ ಮೂಲಕ ಉತ್ತರಾಯಣ ಪುಣ್ಯ ಕಾಲವೆಂದೂ ಸಹ ಕರೆಯಲಾಗುತ್ತದೆ. ಇಂತಹ ಸುಗ್ಗಿಯ ಸಂಭ್ರಮವನ್ನು ವಿದ್ಯಾರ್ಥಿಗಳು ಆಚರಿಸಲು ಸಾಂಪ್ರದಾಯಿಕ ಗ್ರಾಮೀಣ ವೇಷಭೂಷಣಗಳನ್ನು ತೊಟ್ಟು ಸಂತಸಪಟ್ಟರು. ಕಾರ್ಯಕ್ರಮವನ್ನು ಭತ್ತವನ್ನು ಬೀರುವ ಮೂಲಕ ಪಿಇಎಸ್ ಟ್ರಸ್ಟ್‌ನ ಮುಖ್ಯ
ಆಡಳಿತ ಸಂಯೋಜಕರಾದ ಡಾ. ನಾಗರಾಜ. ಆರ್ ಅವರು ಚಾಲನೆಯನ್ನು ನೀಡಿದರು. ಸ್ಪರ್ಧೆಯ ತೀರ್ಪುಗಾರರಾಗಿ ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದ ಸ್ನಾತಕೋತ್ತರ ನಿರ್ವಹಣಾಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಜ್ಯೋತಿ ಜಿ ಹೆಚ್ ಪಿಇಎಸ್ ಪದವಿಪೂರ್ವ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾದ ಜ್ಯೋತಿ ಜಿಂಗಾಡೆ ಅವರುಗಳು ಆಗಮಿಸಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಅರುಣಾ ಎ, ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕರಾದ ಡಾ. ದಿಲೀಪ್ ಕುಮಾರ್ ಎಸ್. ಡಿ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ರೂಪ ಡಿ. ಎಸ್,
ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಮಂಜುನಾಥ ಹೆಚ್ ಆರ್, ನಿರ್ವಹಣಾಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮೋಹನ್ ಡಿ, ಕಲರವ ವೇದಿಕೆಯ ಸಂಚಾಲಕರಾದ ಸಿಂಚನ, ವಿವಿಧ ವಿಭಾಗಗಳ ಅಧ್ಯಾಪಕ ವೃಂದದವರು, ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಒಟ್ಟು ೧೮ ತರಗತಿಗಳಲ್ಲಿ ಸುಗ್ಗಿ ಸಂಭ್ರಮವನ್ನು ಅನಾವರಣ ಮಾಡಲಾಗಿತ್ತು.