ಶಿವಮೊಗ್ಗ: ಕೋವಿಡ್ ೧೯ ನಡುವೆ ಬೇಕು ಬೇಡಗಳ ತಳಮಳದೊಂದಿಗೆ ಇಂದಿನಿಂದ ಆರಂಭಗೊಂಡಿರುವ ಎಸ್ಎಸ್ಎಲ್ಸಿ ಪರೀಕ್ಷಾ ವ್ಯವಸ್ಥೆ ಶಿವಮೊಗ್ಗ ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಆರಂಭಗೊಂಡಿದೆ. ಜಿಲ್ಲೆಯ ಬಹಳಷ್ಟು ಮಕ್ಕಳು ಯಾವುದೇ ಆತಂಕವಿಲ್ಲದೇ ಪರೀಕ್ಷಾ ಕಾರ್ಯದಲ್ಲಿ ಭಾಗವಹಿಸಿದ್ದು ಅತ್ಯಂತ ವಿಶೇಷ.
ಜಿಲ್ಲೆಯ ೮೪ ಪರೀಕ್ಷಾ ಕೇಂದ್ರಗಳಲ್ಲಿ ಈ ಬಾರಿ ೨೪,೯೦೪ ವಿದ್ಯಾರ್ಥಿಗಳು ಹಾಗೂ ೨ ಖಾಸಗಿ ಕೇಂದ್ರಗಳಲ್ಲಿ ೬೧೦ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದು ಬೆಳಿಗ್ಗೆ ಏಳೂ ಮುವತ್ತರಿಂದಲೇ ಮಕ್ಕಳು ಪರೀಕ್ಷಾ ಕೊಠಡಿಗಳಿಗೆ ಆಗಮಿಸುತ್ತಿದ್ದ ದೃಶ್ಯ ಕಂಡುಬರುತ್ತಿತು.
ನಗರದ ಅತೀ ದೊಡ್ಡ ಪರೀಕ್ಷಾ ಕೊಠಡಿಗಳಾದ ದುರ್ಗಿಗುಡಿ ಸರ್ಕಾರಿ ಶಾಲೆ, ಆದಿಚುಂಚನಗಿರಿ ವಿದ್ಯಾಲಯ, ರಾಮಕೃಷ್ಣ ವಿದ್ಯಾಸಂಸ್ಥೆ ಸೇರಿದಂತೆ ಹಲವೆಡೆ ಅತ್ಯಂತ ವ್ಯವಸ್ಥಿತವಾಗಿ ಮಕ್ಕಳು ಬರುವ ಹಾಗೂ ಪರೀಕ್ಷೆ ಮುಗಿದ ಮೇಲೆ ಹೋಗುವಂತೆ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಪರೀಕ್ಷಾ ಕೊಠಡಿಗಳಿಗೆ ಆಗಮಿಸುವ ಮಕ್ಕಳಿಗೆ ಸ್ಯಾನಿಟೈಜರ್ ಬಳಸಿ, ಉಷ್ಣಾಂಶ ಪ್ರಮಾಣದ ಪರೀಕ್ಷೆ ನಾಡಲಾಯಿತು. ಅದರ ಜೊತೆಗೆ ಮಕ್ಕಳಿಗೆ ಮಾಸ್ಕ್ ವಿತರಿಸಲಾಯಿತು.
ಸಾರಿಗೆ ವ್ಯವಸ್ಥೆ: ಸಾರಿಗೆ ವ್ಯವಸ್ಥೆ ಬಯಸಿದ ವಿದ್ಯಾರ್ಥಿಗಳಿಗಾಗಿ ೧೪೨ ಖಾಸಗಿ ಬಸ್ ಹಾಗೂ ೫೬ ಸರ್ಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ. ದಿನಂಪ್ರತಿ ಓಡಾಡುವ ಸರ್ಕಾರಿ ಬಸ್ ಮಾರ್ಗದ ಬಸ್ನಲ್ಲಿ ವಿದ್ಯಾರ್ಥಿಗಳು ಬೆಳಗ್ಗೆ ೭ಕ್ಕೆ ಪ್ರವೇಶ ಪತ್ರ ತೋರಿಸಿ ಉಚಿ ತವಾಗಿ ಪ್ರಯಾಣಿಸುವ ಅವಕಾಶ ಮಾಡಲಾಗಿದೆ. ತಾತ್ಕಾಲಿಕವಾಗಿ ಹಾಸ್ಟೆಲ್ ಸೌಲಭ್ಯ ಬಯ ಸಿದ ೭೭೩ ವಿದ್ಯಾರ್ಥಿಗಳಿಗೆ ೬೨ ಹಾಸ್ಟೆಲ್ಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಸಾರ್ವ ಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಮೇಶ್ ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದ ೨೦೦ ಮೀ. ವ್ಯಾಪ್ತಿ ಯಲ್ಲಿ ೧೪೪ ನಿಷೇದಾಜ್ಞೆ ಜಾರಿಗೊಳಿಸಿದ್ದು, ಕೇಂದ್ರಗಳ ಸುತ್ತಾ ಇರುವ ಎಲ್ಲಾ ಜೆರಾಕ್ಸ್ ಮತ್ತು ಸೈಬರ್ ಸೇವಾ ಕೇಂದ್ರಗಳನ್ನು ಮುಚ್ಚಲು ಜಿಲ್ಲಾಧಿಕಾರಿ ಅವರು ಈಗಾಗಲೇ ಆದೇಶ ಹೊರಡಿಸಿದ್ದಾರೆ. ಎಲ್ಲಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣಾ ವ್ಯವಸ್ಥೆ ಕಲ್ಪಿಸಲಾಗಿದೆ.
ಕೊಠಡಿಯೊಳಗೆ ಬೆಳಗ್ಗೆ ೮.೩೦ ರಿಂದ ಪ್ರವೇಶಾವಕಾಶವಿದ್ದು, ೧೦ ಗಂಟೆಯ ತನಕ ಮಕ್ಕಳು ಕೊಠಡಿಯಲ್ಲಿ ಅಭ್ಯಾಸ ಮಾಡಿಕೊಂಡು ನಂತರ ಬ್ಯಾಗನ್ನು ಕೊಠಡಿ ಹೊರಭಾಗದಲ್ಲಿ ಶೇಖರಿಸಿಡುವುದು. ವಿದ್ಯಾರ್ಥಿಗಳು ತಮ್ಮ ಬ್ಯಾಗ್ಗಳ ಮೇಲೆ ಹೆಸರು ಮತ್ತು ನೋಂದಣಿ ಸಂಖ್ಯೆಯನ್ನು ಹಾಕುವುದು. ಮೊಬೈಲ್ ಮತ್ತು ವಿದ್ಯುದ್ಮಾನ ಉಪಕರಣಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಮೊಬೈಲ್ ಸ್ಕ್ವಾಡ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಪೋಷಕರು ಮತ್ತು ಮಕ್ಕಳು ಆತಂಕ ಪಡುವ ಅಗತ್ಯವಿಲ್ಲ ಹಾಗೂ ಪ್ರತಿದಿನ ಪರೀಕ್ಷೆ ಆರಂಭ ಹಾಗೂ ಮುಗಿದ ಮೇಲೆ ರಸಾಯನಿಕಗಳಿಂದ ಶುದ್ಧೀಕರೀ ಸಲಾಗುವುದು. ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಮಕ್ಕಳು ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಮಾಸ್ಕ್ಗಳನ್ನು ಕಡ್ಡಾಯವಾಗಿ ಹಾಕಿಕೊಂಡು ಬರುವುದು ಕಡ್ಡಾಯವಾಗಿದೆ.