ಭದ್ರಾವತಿ,ಜ.17:
ಭಾಷೆ ಎಂಬುದು ಬಳಸಿದಷ್ಟೂ ಸಮೃದ್ಧಿಯಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಪ್ರತಿಯೊಬ್ಬರೂ ಮನೆ-ಮನಗಳಲ್ಲಿ ಕನ್ನಡ ಭಾಷೆಯನ್ನು ಬಳಸುವ ಮನಃಸ್ಥಿತಿ ಬೆಳೆಸಿಕೊಂಡಾಗ ಕನ್ನಡ ಭಾಷೆ ಉಳಿದು ಬೆಳೆಯುತ್ತದೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.
ತಾಲೂಕಿನ ದೇವರ ನರಸೀಪುರದ ಶ್ರೀರಂಗನಾಥ ಸ್ವಾಮಿ ದೇವಾಲಯದಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ ನಡೆದ ರಂಗನಾಥ ಸ್ವಾಮಿ ಗೊದಾದೇವಿ ಕಲ್ಯಾಣೋತ್ಸವದಲ್ಲಿ ಭಾಗವಹಿಸಿದ್ದ ಅವರು ನಂತರ ಸಂಸಾರ-ಸಂಸ್ಕಾರ ಎಂಬ ವಿಷಯದ ಕುರಿತಂತೆ ಏರ್ಪಡಿಸಿದ್ದ ಹರಟೆ ವಿಶೇಷ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿರೇಮಗಳೂರು ಕಣ್ಣನ್ ಉಪನ್ಯಾಸ


ವೈಯಕ್ತಿಕವಾಗಿ ಅವರವರ ಕೌಟುಂಬಿಕ ಭಾಷೆ ಯಾವುದೇ ಆಗಿದ್ದರೂ ಪ್ರತಿ ಮನೆಯಲ್ಲೂ ನಾಡ ಭಾಷೆಯಾದ ಕನ್ನಡವನ್ನು ಮಾತನಾಡಬೇಕು. ಆಗಷ್ಟೇ ನಮ್ಮ ಭಾಷೆ ವೈವಿಧ್ಯತೆ ಮತ್ತಷ್ಟು ಶ್ರೀಮಂತವಾಗುತ್ತದೆ ಎಂದರು.
ಕುಟುಂಬಕ್ಕೆ ಸಂಸಾರವು ತಳಪಾಯವಾದರೆ, ಸಂಸಾರಕ್ಕೆ ಧರ್ಮಯುತವಾದ ಸಂಸ್ಕಾರವೇ ತಳಹದಿ ಎಂಬುದನ್ನು ಯಾರೂ ಮರೆಯಬಾರದು. ಮಕ್ಕಳಿಗೆ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ಹಿಂದೂ ಹಾಗೂ ಭಾರತೀಯ ಸಂಸ್ಕೃತಿಯ ಆಚಾರ ವಿಚಾರಗಳನ್ನು ಅವರಲ್ಲಿ ಭಿತ್ತಬೇಕು. ಅದರಿಂದ ಆ ಮಕ್ಕಳು ಉತ್ತಮ ಸುಸಂಸ್ಕೃತವಾದ ವ್ಯಕ್ತಿತ್ವವನ್ನು ಹೊಂದುವುದರ ಜೊತೆಗೆ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಎಲ್ಲರ ಗೌರವಾಧರಗಳಿಗೆ ಪಾತ್ರರಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.


ಹರಟೆ ಕಾರ್ಯಕ್ರಮದಲ್ಲಿ ಮತ್ತೋರ್ವ ಸಂಪನ್ಮೂಲವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಚಿಕ್ಕಮಗಳೂರಿನ ಸಂಸ್ಕೃತಿ ಚಿಂತಕರಾದ ನಾಗಶ್ರೀ ತ್ಯಾಗರಾಜ್, ಸಂಸಾರಕ್ಕೆ ಸಂಸ್ಕಾರ ತಳಪಾಯವಾದರೆ, ಅಂತಹ ಸಂಸ್ಕಾರವನ್ನು ಮನೆಯಲ್ಲಿ ಮಕ್ಕಳಿಗೆ ಕಲಿಸುವ ಹೆಣ್ಣು ಕುಟುಂಬದ ಕಣ್ಣಿದ್ದಂತೆ. ತಾಯಿ, ಸಹೋದರಿ, ಪತ್ನಿ ಈ ರೀತಿ ವಿವಿಧ ಸಂಬಂಧಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಮನೆಯ ಪ್ರತಿಯೊಬ್ಬ ಸದಸ್ಯರಿಗೂ ಹಬ್ಬ, ಹರಿದಿನ, ಪೂಜೆ ಪುನಸ್ಕಾರ ಸೇರಿದಂತೆ ಸಂಸ್ಕಾರದ ರೀತಿ ರಿವಾಜುಗಳನ್ನು ಸ್ವತಃ ತಾನು ಆಚರಿಸಿ ಅವರಿಗೆ ಹೇಳಿ ಕೊಡುತ್ತಾಳೆ. ಹೆಣ್ಣು ಸಂಸಾರ ಮತ್ತು ಸಂಸ್ಕಾರದ ತಳಪಾಯವಿದ್ದಂತೆ. ಮಹಿಳೆಯಿಲ್ಲದ ಮನೆಯಲ್ಲಿ ಸಂಸ್ಕಾರದ ಕೊರತೆ ಎದ್ದು ಕಾಣುತ್ತದೆ. ಆದ್ದರಿಂದ ಮಹಿಳೆ ಸಂಸಾರ-ಸಂಸ್ಕಾರ ಎರಡರ ನಡುವಿನ ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾಳೆ ಎಂದರು.


ಶಿವಮೊಗ್ಗ ಗುರುಗುಹ ಸಂಗೀತ ವಿದ್ಯಾಲಯದ ವಿದ್ವಾನ್ ಶೃಂಗೇರಿ ನಾಗರಾಜ್ ಮಾತನಾಡಿ, ಒಂದು ಗೃಹ ಸಂಫೂರ್ಣವಾಗಬೇಕಾದರೆ ಗೃಹಣಿ ಇರಲೇಬೇಕು. ಪ್ರತಿಯೊಬ್ಬ ಮನುಷ್ಯನೂ ಧರ್ಮ, ಅರ್ಥ, ಕಾಮಗಳನ್ನು ದಾಟಿ ಮೋಕ್ಷದೆಡೆಗೆ ಹೋಗಬೇಕು ಎಂದರೆ ಅದಕ್ಕೆ ಗೃಹಣಿ ಅತ್ಯವಶ್ಯಕ. ಇಂತಹ ಸ್ತ್ರೀಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತು, ಆಕೆಗೆ ಗೌರವ ನೀಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ವೈಷ್ಣವ ಪರಿಷತ್ ಅಧ್ಯಕ್ಷರಾದ ಜಗನ್ನಾಥ ಭಟ್ ವಹಿಸಿದ್ದರು. ಚಿಕ್ಕಮಗಳೂರು ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ತ್ಯಾಗರಾಜ್ ಜ್ಯೋತಿ ಬೆಳಗುವ ಮೂಲಕ ವೇದಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೈಷ್ಣವ ಪರಿಷತ್ ಜಿಲ್ಲಾಧ್ಯಕ್ಷರಾದ ಕೃಷ್ಣಸ್ವಾಮಿ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಶ್ರೀ ರಂಗನಾಥ ಸ್ವಾಮಿ ಕಲ್ಯಾಣೋತ್ಸವ
ಭಾನುವಾರ ಬೆಳಿಗ್ಗೆ ವೇದ, ದಿವ್ಯ ಪ್ರಬಂಧ, ವಿಷ್ಣು ಸಹಸ್ರನಾಮ ಪಾರಾಯಣ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿ ನಂತರ ಶ್ರೀಗೋದಾದೇವಿ ಹಾಗೂ ಭೂನೀಳಾ ಸಮೇತನಾದ ಶ್ರೀರಂಗನಾಥ ಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಕಲ್ಯಾಣೋತ್ಸವ, ಉಯ್ಯಾಲೆ ಸೇವೆ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.
ಶ್ರೀ ತುಳಸಿ ಕಲ್ಯಾಣ
ಇದೇ ಸಂದರ್ಭದಲ್ಲಿ ಶ್ರೀಕೃಷ್ಣ ತುಳಸಿ ವಿವಾಹವನ್ನೂ ಸಹ ನಡೆಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ದೇವಾಲಯದ ಅರ್ಚಕರು ಹಾಗೂ ಸಮಿತಿಯವರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಪುಟ್ಟ ಗ್ರಾಮದಲ್ಲಿ ಇಂತಹ ವಿಶೇಷ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದ ದೇವಾಲಯದ ಅರ್ಚಕರನ್ನು ಕಣ್ಣನ್ ಹಾಗೂ ಅವರ ತಂಡದವರು ಸನ್ಮಾನಿಸಿ ಗೌರವಿಸಿದರು.
ಪ್ರಮುಖರಾದ ನರಸಿಂಹಾರ್ಚಾ, ಸುದರ್ಶನ್, ನರಸಿಂಹ ಮೂರ್ತಿ, ರವಿ, ವೆಂಕಟೇಶ್, ಚೆಲುವರಾಜ್, ಯೋಗೀಶ್, ಶಾಸಕರ ಸಹೋದರ ಜಗನ್ನಾಥ್, ಹಿರೇಮಗಳೂರಿನ ಋತ್ವಿಜರ ತಂಡದವರು ಪಾಲ್ಗೊಂಡಿದ್ದರು.ಇಡಿಯ ಕಾರ್ಯಕ್ರಮಕ್ಕೆ ಇಡಿಯ ಗ್ರಾಮಸ್ಥರು ಸಹಕಾರ ನೀಡಿದ್ದು, ಆಯೋಜಕರು ಧನ್ಯವಾದ ಹೇಳಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!