ಶಿವಮೊಗ್ಗ,ಮೇ3: ಗೀತಾಶಿವರಾಜ್ಕುಮಾರ್ರವರ ಗೆಲುವು 100ಕ್ಕೆ 100ರಷ್ಟು ಖಚಿತ. ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಜನವಿರೋಧಿ ದುರಾಡಳಿತದ ವಿರುದ್ಧ ಜನಬೇಸತ್ತಿದ್ದು, ಈ ಬಾರಿ ಬದಲಾವಣೆ ಮಾಡುತ್ತಾರೆಂಬ ವಿಶ್ವಾಸವಿರುವುದರಿಂದ ಗೀತಾ ಶಿವರಾಜ್ಕುಮಾರ್ ಅವರು ಗೆಲ್ಲುವ ವಿಶ್ವಾಸ ಹೆಚ್ಚಾಗಿದೆ ಎಂದರು.
ಮತದಾರರು ಬದಲಾವಣೆ ಬಯಸಿದ್ದಾರೆ. ಒಳ್ಳೆಯ ರೀತಿಯಲ್ಲಿ ಚುನಾವಣೆ ನಡೆಯುತ್ತಿದೆ. ಲೋಕಸಭಾ ವ್ಯಾಪ್ತಿಯ ಎಲ್ಲಾ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆ ಉತ್ತಮ ವಾತಾವರಣ ಇದೆ. ಕಾರ್ಯಕರ್ತರು, ಮುಖಂಡರು, ಶಾಸಕರು ಹೀಗೆ ಎಲ್ಲರೂ ಸಂಘಟನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರೆ. ಮತದಾರರು ಕಾಂಗ್ರೆಸ್ ಪಕ್ಷದ ಬಗ್ಗೆ ಅತ್ಯಂತ ಒಲವು ತೋರಿಸುತ್ತಿದ್ದಾರೆ. ಮತ ಕೇಳಲು ಹೋದವರನ್ನೇ ಮನೆಯೊಳಗೆ ಕರೆದು ಗ್ಯಾರಂಟಿಗಳನ್ನು ಪಡೆಯುತ್ತಿರುವುದಾಗಿ ಹೇಳಿ ಟೀ, ಕಾಫಿ ಕೊಡುವುದನ್ನು ನೋಡಿದರೆ ಹೃದಯ ತುಂಬಿ ಬರುತ್ತದೆ ಎಂದರು.
ರಾಹುಲ್ ಗಾಂಧಿ ಅವರು ಶಿವಮೊಗ್ಗಕ್ಕೆ ಬಂದು ಗೀತಾ ಶಿವರಾಜ್ ಕುಮಾರ್ ಪರ ಪ್ರಚಾರ ಮಾಡಿರುವುದಂತೂ ನಮಗೆ ಆನೆ ಬಲ ಬಂದಂತಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಣದೀಪ್ ಸಿಂಗ್ ಸುರ್ಜೇವಾಲಾ, ಮಂಜುನಾಥ್ ಭಂಡಾರಿ, ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ಗಣ್ಯರು ಬಂದು ಪ್ರಚಾರ ಮಾಡಿರುವುದು ನಮ್ಮ ಗೆಲುವನ್ನು ಇನ್ನೂ ಹತ್ತಿರಕ್ಕೆ ಕರೆ ತಂದಿದೆ ಎಂದರು.
ಗೀತಾ ಅಕ್ಕ ಗೆದ್ದರೆ ವಿಐಎಸ್ಎಲ್ ಕಾರ್ಖಾನೆಯನ್ನು ಖಂಡಿತಾ ಪುನಾರಂಭಿಸುತ್ತೇವೆ. ಅಷ್ಟೇ ಅಲ್ಲ ಮಲೆನಾಡು ಭಾಗದ ರೈತರ ಸಮಸ್ಯೆಗಳನ್ನು ಕೂಡ ಬಗೆಹರಿಸುತ್ತೇವೆ. ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುತ್ತೇವೆ. ನೀರಾವರಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ವಿಮಾನ ನಿಲ್ದಾಣವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುತ್ತೇವೆ. ನೈಟ್ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಇನ್ನೂ ಹೆಚ್ಚಿನ ವಿಮಾನಗಳ ಹಾರಾಟಕ್ಕೆ ಆದ್ಯತೆ ಕೊಡುತ್ತೇವೆ ಎಂದರು.
ಗೀತಕ್ಕನ ವೋಟು ಸೊರಬದಲ್ಲಿ ಇಲ್ಲ ಎಂದು ಕೆಲವರು ಆರೋಪ ಮಾಡುತ್ತಾರೆ. ಆದರೆ ಮೋದಿ ಅವರು ವಾರಣಾಸಿಯಿಂದ ನಿಲ್ಲುತ್ತಾರೆ. ಅಲ್ಲಿ ಅವರಿಗೆ ಮತ ಇದೆಯೇ ಎಂದು ಪ್ರಶ್ನೆ ಮಾಡಿದ ಅವರು, ಕುಮಾರ್ ಬಂಗಾರಪ್ಪ ಅವರ ಟೀಕೆಗೆ ಉತ್ತರ ಕೊಡಲು ಹೋಗುವುದಿಲ್ಲ. ಅವರು ಇಷ್ಟು ದಿನ ಎಲ್ಲಿಗೆ ಹೋಗಿದ್ದರು. ಈಗ ಏಕೆ ಬಂದರು? ಈ ಎರಡು ಪ್ರಶ್ನೆಗಳಿಗೆ ಉತ್ತರ ಹೇಳಲಿ ಸಾಕು ಎಂದರು.
ಸಂಸದರಾಗಿ ರಾಘವೇಂದ್ರ ಏನನ್ನೂ ಮಾಡಲಿಲ್ಲ. ಕಾಂಗ್ರೆಸ್ ನ ಮೇಲೆ ಗೂಬೆ ಕೂರಿಸಿದ್ದರು ಅಷ್ಟೇ. ಸಂತ್ರಸ್ತರ ಬಗ್ಗೆ ಸಂಸತ್ ನಲ್ಲಿ ಏನೂ ಮಾತನಾಡಲಿಲ್ಲ. ಹೆದ್ದಾರಿಗಳು ಅಲ್ಲಿಗೆ ನಿಂತವು. ಹತ್ತು ವರ್ಷ ಆಡಳಿತ ನಡೆಸಿದರಲ್ಲ ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಗೆಹರಿಸದೇ ಇದು ಕಾಂಗ್ರೆಸ್ ನ ಪಾಪದ ಕೂಸು ಎಂದು ಆರೋಪ ಹೊರಿಸುತ್ತಿದ್ದಾರೆ ಎಂದರು.
ಕಾಡಾನೆ ದಾಳಿಯಿಂದ ಒಬ್ಬರು ಮೃತಪಟ್ಟ ಸುದ್ದಿ ಗೊತ್ತಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಇದರ ಜೊತೆಗೆ ಕೆ.ಎಫ್.ಡಿ. ಕಾಯಿಲೆ ಬಗ್ಗೆಯೂ ವರದಿಯಾಗಿದೆ. ಆರೋಗ್ಯಾಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ಚುನಾವಣೆ ನಂತರ ಅಗತ್ಯ ಕ್ರಮ ಕೈಗೊಳ್ಳುತ್ತೇನೆ. ಒಟ್ಟಾರೆ, ಅಧಿಕಾರಿಗಳಿಗೆ ಸೂಕ್ತ ಕ್ರಮಕ್ಕೆ ಆದೇಶ ನೀಡಿರುವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕೆ. ಅನಿತಾ ಕುಮಾರಿ, ಪ್ರಮುಖರಾದ ಕಲೀಂ ಪಾಷಾ, ಜಿ.ಡಿ. ಮಂಜುನಾಥ್, ಜಿ. ಪದ್ಮನಾಭ್, ಶಿ.ಜು. ಪಾಷಾ, ಫರ್ವೀಜ್ ಇದ್ದರು.