ಚನ್ನಗಿರಿ: ತಾಲ್ಲೂಕು ವಡ್ನಾಳ್ ಬನ್ನಿಹಟ್ಟಿ ಗ್ರಾಮದ ಜನರಲ್ಲಿ ಭೀತಿ ಮೂಡಿಸಿದ್ದ ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ಬುಧವಾರ ತಡರಾತ್ರಿ ಬಿದ್ದಿದೆ.

ಐದಾರು ತಿಂಗಳಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಮೂರು ಚಿರತೆಗಳು ಕಾಣಿಸಿಕೊಂಡಿದ್ದವು. ಹತ್ತಾರು ನಾಯಿಗಳನ್ನು ಎಳೆದೊಯ್ದು ತಿಂದು ಹಾಕಿದ್ದವು.

ಗ್ರಾಮಸ್ಥರು ತೋಟಗಳಿಗೆ ಹೋಗಲು ಹೆದರುತ್ತಿದ್ದರು. ಈ ಬಗ್ಗೆ ಚನ್ನಗಿರಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಮೂರು ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು.

ಅರಣ್ಯ ಇಲಾಖೆಯವರು ಐದು ದಿನಗಳ ಹಿಂದೆ ಚಿರತೆ ಸೆರೆ ಹಿಡಿಯಲು ಬೋನನ್ನು ಇಟ್ಟಿದ್ದರು. ಬುಧವಾರ ರಾತ್ರಿ 11 ಗಂಟೆಯ ವೇಳೆಗೆ ದೊಡ್ಡ ಚಿರತೆಯೊಂದು ಬೋನಿನಲ್ಲಿ ಸೆರೆಯಾಗಿದೆ. ಹೀಗಾಗಿ ಜನರಲ್ಲಿ ಸಮಾಧಾನ ಮೂಡಿದೆ.

ವೀಣಾ-ಮಾಯಣ್ಣ ಅವರ ತೋಟದ ಕೃಷಿ ಹೊಂಡದಲ್ಲಿ ನೀರು ಕುಡಿಯಲು ಬಂದಿದ್ದ ಚಿರತೆ ಬೋನಿಗೆ ಬಿದ್ದಿದೆ. 3 ವರ್ಷ ವಯಸ್ಸಿನ ಗಂಡು ಚಿರತೆಯನ್ನು ಭದ್ರಾವತಿ ಅರಣ್ಯ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಬಿಡಲಾಗಿದೆ.

ಹಾಗೆಯೇ ಇನ್ನುಳಿದ ಎರಡು ಚಿರತೆಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಮಧುಸೂದನ್ ತಿಳಿಸಿದರು.

By admin

ನಿಮ್ಮದೊಂದು ಉತ್ತರ

You missed

error: Content is protected !!