ಶಿವಮೊಗ್ಗ: ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು, ಅವುಗಳ ನಿರ್ವಹಣಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದ್ದು, ರೋಗ ನಿರ್ವಹಣೆಯ ಬಗ್ಗೆ ಡಾ. ನಾಗರಾಜಪ್ಪ ಅಡಿವಪ್ಪರ್, ಮುಖ್ಯಸ್ಥರು, ಅಡಿಕೆ ಸಂಶೋಧನಾ ಕೇಂದ್ರ, ನವಿಲೆ, ಇವರು ಮಾಹಿತಿಯನ್ನು ನೀಡಿರುತ್ತಾರೆ.
ಹಿಂಗಾರ ಒಣಗುವ ರೋಗವು ಅಡಿಕೆ ಬೆಳೆಯಲ್ಲಿ ಬರುವ ಪ್ರಮುಖ ರೋಗ. ಇದು ಕೋಲ್ಲೆಟೊಟ್ರೈಕಂ ಗ್ಲಿಯೋಸ್ಪೊರಾಯಿಡ್ಸ್ ಎಂಬ ಶಿಲೀಂದ್ರದಿಂದ ಉಂಟಾಗುತ್ತದೆ. ಈ ರೋಗವನ್ನು ಕರ್ನಾಟಕದಲ್ಲಿ ಶೇ. ೬೦ ಕ್ಕೂ ಹೆಚ್ಚು ಅಡಿಕೆ ತೋಟಗಳಲ್ಲಿ ಕಾಣಬಹುದು. ಈ ರೋಗವು ಸಾಂಪ್ರದಾಯಿಕವಾಗಿ ಅಡಿಕೆ ಬೆಳೆಯುವ ಮಲೆನಾಡು ಪ್ರದೇಶಗಳಿಗೆ ಹೋಲಿಸಿದಲ್ಲಿ ಮೈದಾನ ಪ್ರದೇಶಗಳಲ್ಲಿ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಇದರಿಂದ ಅಡಿಕೆ ಕೃಷಿಕರಿಗೆ ಹೆಚ್ಚಿನ ಆರ್ಥಿಕ ನಷ್ಟವನ್ನುಂಟು ಮಾಡುತ್ತದೆ. ಅಡಿಕೆ ಬೆಳೆಯಲ್ಲಿ ಹಿಂಗಾರ ಒಡೆದು ಪರಾಗಸ್ಪರ್ಶವಾಗಿ ಕಾಯಿ ಕಚ್ಚುವ ಸಮಯದಲ್ಲಿ ಇದನ್ನು ಕಾಣಬಹುದು. ರೋಗವು ವರ್ಷಪೂರ್ತಿ ಇರುತ್ತದೆ, ಆದರೆ ರೋಗದ ಭಾದೆಯು ಜನವರಿ ಯಿಂದ ಏಪ್ರಿಲ್‌ವರೆಗೆ ಅಂದರೆ ಬೇಸಿಗೆಯಲ್ಲಿ ಹೆಚ್ಚಾಗುತ್ತದೆ.
ರೋಗದ ಲಕ್ಷಣಗಳು: ಹಿಂಗಾರದಲ್ಲಿ ಗಂಡು ಹೂಗಳ ಎಸಳುಗಳ ಹಳದಿಯಾಗುವಿಕೆ ಈ ರೋಗದ ಮೊದಲ ಚಿಹ್ನೆ. ಹಳದಿ ಬಣ್ಣ ಎಸಳುಗಳ ತುದಿಯಿಂದ ಪ್ರಾರಂಭವಾಗಿ ಹಿಮ್ಮುಖವಾಗಿ ಬುಡಭಾಗಕ್ಕೆ ಮುಂದುವರೆದು, ನಂತರ ಎಸಳುಗಳು ಕಂದು ಬಣ್ಣಕ್ಕೆ ತಿರುಗಿ ಒಣಗತೊಡಗುತ್ತವೆ. ಈ ಸ್ಥಿತಿಯನ್ನು ಡೈಬ್ಯಾಕ್ ಎನ್ನುವರು. ಎಸಳುಗಳ ಹಳದಿಯಾಗುವಿಕೆ ಮತ್ತು ಕಂದಾಗುವಿಕೆ ಮುಂದುವರೆದಂತೆ ಹೆಣ್ಣು ಹೂವುಗಳು ಉದುರತೊಡಗುತ್ತದೆ. ನಂತರ ರೋಗ ಇಡೀ ಹಿಂಗಾರಕ್ಕೆ ಹರಡಿ ಅಂತಹ ಹಿಂಗಾರಗಳು ಸಾಯುತ್ತವೆ. ರೋಗ ಪೀಡಿತ ಹಿಂಗಾರಗಳಲ್ಲಿ ಪರಾಗಸ್ಪರ್ಶ ಕ್ರಿಯೆ ಕಡಿಮೆಯಾಗುವುದರಿಂದ ಎಳೆ ಕಾಯಿಗಳು ಉದುರುತ್ತವೆ. ಇಂತಹ ರೋಗದ ಚಿಹ್ನೆಗಳು ಎಲ್ಲಾ ತೋಟಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ.
ರೋಗ ಹರಡಲು ಸೂಕ್ತ ವಾತಾವರಣ: ಮೋಡ ಕವಿದ ವಾತಾವರಣ, ಉಷ್ಣಾಂಶ (೨೪-೩೨೦ ಸೆಂ.) ಮತ್ತು ಆದ್ರತೆ (೮೦-೯೦೦) ಈ ರೋಗ ಹರಡುವುದಕ್ಕೆ ಪೂರಕವಾದ ಅಂಶಗಳು. ಅಲ್ಲದೆ, ಮಳೆಗಾಲದಲ್ಲಿಯೂ ಇದರ ಬಾಧೆ ಮುಂದುವರೆಯುವುದರಿಂದ ಅಡಿಕೆ ಬೆಳೆಯುವ ಕೃಷಿಕರು ಈ ರೋಗ ಕಂಡು ಬಂದಲ್ಲಿ ಈ ಕೆಳಗೆ ಸೂಚಿಸಿದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
ನಿರ್ವಹಣೆ: ರೋಗಕ್ಕೆ ತುತ್ತಾದ ಒಣಗಿದ ಹಿಂಗಾರಗಳನ್ನು ತೆಗೆದು ನಾಶಪಡಿಸಬೇಕು ಇದರಿಂದ ರೋಗ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಯಬಹುದು. ಪ್ರತಿ ಲೀಟರ್ ನೀರಿನಲ್ಲಿ ೨.೫ಗ್ರಾಂ. ಮ್ಯಾಂಕೋಜೆಬ್‌ನ್ನು (ಡೈಥೇನ್ ಎಂ-೪೫ ಅಥವಾ ಇಂಡೋಫಿಲ್ ಎಂ-೪೫) ಅಥವಾ ೨ ಗ್ರಾಂ. ಸಾಫ್ (ಮ್ಯಾಂಕೋಜೆಬ್ ೬೩%+ಕಾರ್ಬೆನ್‌ಡೈಜೀಮ್ ೧೨%) ಅನ್ನು ಗೊಂಚಲು ಅರಳುವ ಸಮಯದಲ್ಲಿ ಹಾಗೂ ೨೦-೨೫ ದಿನಗಳ ಅಂತರದಲ್ಲಿ ಮತ್ತೊಂದು ಸಾರಿ ಸಿಂಪಡಿಸಬೇಕು. ಜನವರಿ-ಫೆಬ್ರವರಿ ತಿಂಗಳಿನಲ್ಲಿ ಸಿಂಪರಣೆ ಮಾಡುವುದು ಉತ್ತಮ ಎಂದು ಡಾ. ನಾಗರಾಜಪ್ಪ ಅಡಿವಪ್ಪರ್ ತಿಳಿಸಿರುತ್ತಾರೆ.