ದಿನಪತ್ರಿಕೆ ವಿತರಿಸುವ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ
ಶಿವಮೊಗ್ಗ, ಡಿ. 28:
ಕಾರ್ಮಿಕ ಇಲಾಖೆಯ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ಕರ್ನಾಟಕ ರಾಜ್ಯ ದಿನ ಪತ್ರಿಕೆ ವಿತರಿಸುವ ಕಾರ್ಮಿಕರುಗಳಿಗೆ ಅಪಘಾತ ಪರಿಹಾರ ಸೌಲಭ್ಯ ಯೋಜನೆ ಜಾರಿಗೆ ತರಲಾಗಿದೆ. ಬಹುತೇಕ ದಿನಪತ್ರಿಕೆ ವಿತರಿಸುವ ಕಾರ್ಮಿಕರು ದ್ವಿಚಕ್ರ ವಾಹನಗಳನ್ನು ಬಳಸುತ್ತಿದ್ದು, ಅಪಘಾತಕ್ಕೊಳಗಾಗುವ ಸಾಧ್ಯತೆಗಳಿದ್ದು, ಈ ಕಾರ್ಮಿಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ವಿತರಿಸುವ ಮೂಲಕ ಸಾಮಾಜಿಕ ಭದ್ರತೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಎಲ್ಲಾ ದಿನಪತ್ರಿಕೆ ವಿತರಿಸುವ ಕಾರ್ಮಿಕರು ಆನ್ಲೈನ್ www.eshram.gov.in ನಲ್ಲಿ ನೋಂದಾಯಿಸಿಕೊಳ್ಳುವುದು. ಈ ಯೋಜನೆ ಸೌಲಭ್ಯ ಪಡೆಯುವವರು ಕರ್ನಾಟಕ ರಾಜ್ಯದ ನಿವಾಸಿಗಳಾಗಿದ್ದು, 16 ರಿಂದ 59 ವರ್ಷ ವಯೋಮಾನದವರಾಗಿರಬೇಕು. ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ನಲ್ಲಿ ನ್ಯೂಸ್ ಪೇಪರ್ ಬಾಯ್ ಎಂಬ ವರ್ಗದಡಿ ನೋಂದಣಿಯಾಗಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಇಎಸ್ಐ ಮತ್ತು ಇಪಿಎಫ್ ಸೌಲಭ್ಯ ಹೊಂದಿರಬಾರದು.
ಈ ಯೋಜನೆಯಡಿ ಅಪಘಾತದಿಂದ ಮರಣ ಹೊಂದಿದಲ್ಲಿ ರೂ. 2.00 ಲಕ್ಷ, ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ. 2.00 ಲಕ್ಷಗಳವರೆಗೆ ಹಾಗೂ ಅಪಘಾತ ಅಥವಾ ಮಾರಾಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚ ಮರುಪಾವತಿ ರೂ. 1.00 ಲಕ್ಷಗಳವರೆಗೆ ಸೌಲಭ್ಯವಿರುತ್ತದೆ ಎಂದು ಶಿವಮೊಗ್ಗ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಶ್ರೀಮತಿ ಸುಮ ಹೆಚ್.ಎಸ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.