ಶಿವಮೊಗ್ಗ,ಡಿ.೨೭: ೨೧ನೇಯ ಶತಮಾನದಲ್ಲೂ ಅಂತರ್‌ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆ ಚೋರಡಿಯ ಹೊರಬೈಲ್‌ನಲ್ಲಿ ನಡೆದಿದೆ.
ಈ ಕುರಿತಂತೆ ದಲಿತ ಸಂಘರ್ಷ ಸಮಿತಿ(ಡಾ.ಅಂಬೇಡ್ಕರ್ ವಾದ)ಯ ಮುಖಂಡ ಎ.ಹಾಲೇಶಪ್ಪ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾರನಹಳ್ಳಿ ಹೋಬಳಿಯ ರಾಮನಗರದ ಮಹೇಶಪ್ಪ ಮತ್ತು ಶಾಂತಮ್ಮನವರ ಮಗಳಾದ ಪ್ರೀತಿ ಎಂಬುವಳು ಕುಂಸಿ ಹೋಬಳಿಯ ಹೊರಬೈಲು ಗ್ರಾಮದ ಗಿರಿಜಮ್ಮ ಹಾಗೂ ಜಗದೀಶ್ ದಂಪತಿಗಳ ಮಗನಾದ ದಿನೇಶ್ ಎಂಬುವರ ಜೊತೆ ಇತ್ತೀಚೆಗೆ ಮದುವೆಯಾಗಿ ಈ ಮದುವೆ ನೊಂದಣಿ ಕೂಡ ಆಗಿತ್ತು ಎಂದರು.
ಪ್ರೀತಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕದವಳಾಗಿದ್ದಳು, ದಿನೇಶ್ ಜೋಗಿ ಜನಾಂಗದ ಯುವಕ. ಜೋಗಿ ಜನಾಂಗ ಸ್ಪರ್ಶವಾಗಿದ್ದು, ಆದಿ ಕರ್ನಾಟಕ ಅಸ್ಪೃಶ್ಯ ಜನಾಂಗವಾಗಿದೆ. ಇದರಿಂದ ಪ್ರೀತಿಯ ಗಂಡನ ಜಾತಿಯ ಹೊರಬೈಲಿನ ಸನ್ನಿವಾಸದಲ್ಲಿ ವಾಸವಾಗಿರುವ ನಾಗರಾಜ್, ಸುರೇಖಾ, ಮಂಜುನಾಥ, ಶಶಿ ಮುಂತಾದವರುಗಳು ಗುಂಪು ಕಟ್ಟಿಕೊಂಡು ಕೆಳ ಜಾತಿಯ ಹೆಣ್ಣನ್ನು ಮದುವೆ ಮಾಡಿಕೊಂಡಿರುವೆ ಎಂದು ಯುವಕನ ಕುಟುಂಬಕ್ಕೆ ಸಾಮಾಜಿ ಬಹಿಷ್ಕಾರ ಹಾಕಿದ್ದಾರೆ.
ಹೊರಬೈಲ್‌ನಲ್ಲಿ ಜೋಗಿ ಜಾತಿಯ ಸುಮಾರು ೩೦ ಕುಟುಂಬಗಳು ಒಟ್ಟುಗೂಡಿಕೊಂಡು ಯುವತಿಯ ಕುಟುಂಬದ ವಿರುದ್ಧ ಎಲ್ಲರನ್ನೂ ಎತ್ತಿಕಟ್ಟಿ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದ ಯುವಕನ ಕುಟುಂಬದವರು ಯಾರು ಬೇರೆಯವರ ಮನೆಗಳಿಗೆ ಹೋಗುವಾಗಿಲ್ಲ. ಮಾತನಾಡಿಸುವ ಆಗಿಲ್ಲ, ಒಂದು ಪಕ್ಷ ಮತ್ತೆ ಸೇರಬೇಕು ಎಂದರೆ, ಮದುವೆಯಾದ ಯುವತಿಯನ್ನು ಬಿಟ್ಟುಬರಬೇಕು ಎಂದು ತಾಕೀತು ಮಾಡಿದ್ದಾರೆ ಎಂದು ಆರೋಪಿಸಿದರು.
ಅಲ್ಲದೇ ಈ ಸಾಮಾಜಿಕ ಬಹಿಷ್ಕಾರದ ವಿಕೃತ ಎಷ್ಟಿದೆ ಎಂದರೆ, ಆಕಸ್ಮಾತ್ ಆ ಕುಟುಂಬದವರು ಅದೇ ಕುಟುಂಬದವರನ್ನು ಮಾತನಾಡಿಸದರೆ, ಒಂದು ಸಾವಿರ ರೂ. ದಂಡ ಹಾಗೂ ಇದನ್ನು ಕಂಡುಹಿಡಿದವರಿಗೆ ೫೦೦ ರೂ. ಬಹುಮಾನ ಎಂದು ಘೋಷಿಸಿರುವುದು ಈ ಶತಮಾನದಲ್ಲೂ ಅಸ್ಪಶ್ಯತೆಯ ಕರಾಳತೆ ಎಷ್ಟಿದೆ ಎಂದು ಗೊತ್ತಾಗುತ್ತದೆ ಎಂದರು.
ಇನ್ನು ವಿಶೇಷವಾಗಿ ಈ ಮದುವೆಗೆ ಕಾಲೇಜೊಂದರಲ್ಲಿ ಪಾಠ ಮಾಡಿ ಈಗ ನಿವೃತ್ತರಾಗಿರುವ ಪ್ರಾಧ್ಯಪಕ ಚಂದ್ರಪ್ಪ ಜೋಗಿ ಎಂಬುವವರು ಕೂಡ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತರ್‌ಜಾತಿ ಮದುವೆಯನ್ನು ಪ್ರೋತ್ಸಾಹಿಸುವ ವಿದ್ಯಾವಂತರೇ ಹೀಗೆ ನಡೆದುಕೊಂಡರೆ ಅವಿದ್ಯಾವಂತರು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ ಅವರು, ಸಾಮಾಜಿಕ ಬಹಿಷ್ಕಾರ ಹಾಕಿದ ಯುವಕನ ಜಾತಿಯವರೇ ಆದ ಪ್ರಮುಖರ ವಿರುದ್ಧ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಮತ್ತು ಬಹಿಷ್ಕಾರ ಹಾಕಿದವರನ್ನು ಜೈಲಿಗೆ ಕಳಿಸಬೇಕು, ಸಾಮಾಜಿಕ ಬಹಿಷ್ಕಾರವನ್ನು ಕೊನೆಗಾಣಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಶಿವಕುಮಾರ್, ರುದ್ರಮ್ಮ ಶೇಷಪ್ಪ, ಸೂಗೂರು ಪರಮೇಶ್ವರಪ್ಪ ಇದ್ದರು.