ಶಿವಮೊಗ್ಗ,ಡಿ.೨೭: ನುಡಿದಂತೆ ನಡೆಯುವ ರಾಜ್ಯ ಸರ್ಕಾರದ ೫ನೇ ಗ್ಯಾರಂಟಿ ಯೋಜನೆಯಾದ ಯುವ ನಿಧಿ ಯೋಜನೆಗೆ ಮುಖ್ಯಮಂತ್ರಿಗಳು ಈಗಾಗಲೇ ಚಾಲನೆ ನೀಡಿದ್ದು, ಶಿವಮೊಗ್ಗದಲ್ಲಿಯೂ ಸಹ ಈ ಬಗ್ಗೆ ಅರಿವು ಮೂಡಿಸಲು ನಾಳೆ ಡಿ.ವಿ.ಎಸ್. ಸರ್ಕಲ್‌ನಲ್ಲಿ ನೊಂದಣಿ ಮಾಡಿಕೊಳ್ಳಲು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಾಲಿಕೆ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಯುವ ನಾಯಕ ಹೆಚ್.ಸಿ.ಯೋಗೀಶ್ ಹೇಳಿದರು…


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಯವರ ಆರೋಪಗಳ ನಡುವೆಯೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯತ್ತ ಸಾಗಿದೆ. ಅದರ ಮುಂದುವರೆದ ಭಾಗವಾಗಿ ಈ ೫ನೇ ಯೋಜನೆಯಾಗಿರುವ ಯುವನಿಧಿ ಯೋಜನೆಯನ್ನು ಕೂಡ ಈಗಾಗಲೇ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಈ ಯೋಜನೆಗಾಗಿ ಅರ್ಜಿ ಹಾಕಲು

ಈಗಾಗಲೇ ನೊಂದಣಿ ಕಾರ್ಯ ಆರಂಭವಾಗಿದೆ. ೨೦೨೩ರಲ್ಲಿ ಪದವಿ ಪಡೆದ ಹಾಗೂ ಡಿಪ್ಲೋಮಾ ಪದವಿ ಪಡೆದ ನಿರುದ್ಯೋಗಿ ಯುವಕರು ಇದರ ಅವಕಾಶವನ್ನು ಬಳಸಿಕೊಳ್ಳಬೇಕು. ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜಿಲ್ಲಾ ಕಾಂಗ್ರೆಸ್ ಕಾರ್ಯಕತರು, ಮುಖಂಡರು, ಯುವ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಡಿ.ವಿ.ಎಸ್. ಕಾಲೇಜಿನಿಂದ ನಾಳೆ ಬೆಳಿಗ್ಗೆ೧೧ಕ್ಕೆ ಅಲ್ಲಿನ ವಿದ್ಯಾರ್ಥಿಗಳಿಗೆ ಈ ಬಗ್ಗೆ ಅರಿವು ಮೂಡಿಸಲಾಗುವುದು ಎಂದರು.


ಹಾಗೆಯೇ ಈ ಯೋಜನೆ ಶಿವಮೊಗ್ಗದಿಂದಲೇ ಆರಂಭವಾಗಲಿದೆ ಎಂಬ ಮಾಹಿತಿ ಸಿಕ್ಕಿದೆ. ಜನವರಿ ೧೨ರ ವಿವೇಕಾನಂದ ಜಯಂತಿ ದಿನವೇ ಈ ಯೋಜನೆ ಜಾರಿಗೆ ಬರಲಿದೆ. ಮುಖ್ಯಮಂತ್ರಿಗಳು ಶಿವಮೊಗ್ಗದಲ್ಲಿ ಇದನ್ನು ಉದ್ಘಾಟಿಸಲಿದ್ದಾರೆ. ಇದು ನಿರಂತರ ಯೋಜನೆಯಾಗಿದ್ದು, ಎಲ್ಲಾ ಗ್ಯಾರಂಟಿಗಳಂತೆ ಇದು ಕೂಡ ಯಶಸ್ವಿಯಾಗಿದೆ. ನಮ್ಮದು ನುಡಿದಂತೆ ನಡೆದ ಸರ್ಕಾರ ಮತ್ತು ಕೊಟ್ಟ ಭರವಸೆಗಳನ್ನು ಈಡೇರಿಸಿದ ಸರ್ಕಾರವಾಗಿದೆ ಎಂದರು.


ಹಾಗೆಯೇ ಪ್ರತಿತಿಂಗಳು ೨೫ನೇ ತಾರೀಖಿಗೆ ಆಕಸ್ಮಾತ್ ಈ ಯೋಜನೆಯಲ್ಲಿದ್ದವರು ಕೆಲಸ ಸಿಕ್ಕರೆ ತಿಳಿಸಬೇಕಾಗುತ್ತದೆ. ಆ ತಕ್ಷಣವೇ ಅವರಿಗೆ ಆ ಯೋಜನೆಯನ್ನು ರದ್ದುಮಾಡಲಾಗುವುದು. ಮತ್ತು ಹೊಸಬರಿಗೆ ಅವಕಾಶ ನೀಡಲಾಗುವುದು. ಅರ್ಹ ವಿದ್ಯಾವಂತ ಯುವಕರು ತಕ್ಷಣವೇ ನೊಂದಣಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.


ಶಿವಮೊಗ್ಗದಲ್ಲಿ ಸ್ಮಾರ್ಟ್ ಸಿಟಿ ಕಾಮಗಾರಿಗಳೆಲ್ಲ ಕಳಪೆಯಾಗಿವೆ ಎಂಬ ದೂರುಗಳು ಬಂದಿವೆ. ಈ ಹಿನ್ನಲೆಯಲ್ಲಿ ಈಗಾಗಲೇ ಜಿಲ್ಲಾ ಉಸ್ತುವರಿ ಸಚಿವರ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ಸಭೆಯನ್ನು ಕರೆದು ಚರ್ಚಿಸಿ ನಂತರ ತನಿಖೆಗೆ ಆದೇಶಿಸುವರು ಎಂಬ ಭರವಸೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರಮೇಶ್ ಹೆಗ್ಡೆ, ಎಸ್.ಟಿ.ಹಾಲಪ್ಪ, ಯಮುನಾರಂಗೇಗೌಡ, ವೈ.ಬಿ.ಚಂದ್ರಕಾಂತ್, ಸೌಗಂಧಿಕ, ಮೇಹಕ್ ಷರೀಪ್, ವಿಶ್ವನಾಥ್ ಕಾಶಿ, ಶಿವಕುಮಾರ್, ಕುಮಾರ್, ಚರಣ್ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!