ಶಿವಮೊಗ್ಗ: ನ್ಯಾ. ಎ.ಜೆ. ಸದಾಶಿವ ಆಯೋಗದ ಅವೈಜ್ಞಾನಿಕ ವರದಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಮೀಸಲಾತಿ ಸಂರಕ್ಷಣಾ ಒಕ್ಕೂಟ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಪರಿಶಿಷ್ಟ ಜಾತಿಗಳ ಸಮುದಾಯದಲ್ಲಿ ಅನಗತ್ಯ ಗೊಂದಲ ಉಂಟು ಮಾಡಿ ಜಾತಿ, ಜಾತಿಗಳ ಮಧ್ಯೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿರುವ ಈ ದೋಷಪೂರಿತ ವರದಿಯನ್ನು ಹಿಂದಿನ ಸರ್ಕಾರ ಒಪ್ಪಿರಲಿಲ್ಲ. ಆದರೆ, ಸರಿಯಾದ ಸಮೀಕ್ಷೆ ನಡೆಸದೇ ಕೆಲವರ ಒತ್ತಾಸಗೆ ಮಣಿದು ತರಾತುರಿಯಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಈ ವರದಿಯು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿರುವಂತಹ ದೋಷಪೂರಿತ ವರದಿಯಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ವರದಿಯ ಬಗ್ಗೆ ಸಮಗ್ರವಾಗಿ ಏನಿದೆ ಎಂದೇ ತಿಳಿದಿಲ್ಲ. ಎಲ್ಲಾ ರಾಜಕೀಯ ಪಕ್ಷಗಳು ಇದರಲ್ಲಿ ರಾಜಕೀಯ ಮಾಡುತ್ತಿದ್ದು, ಮಾದಿಗ ಸಮುದಾಯ ಮತ್ತು ಚಲವಾದಿ, ಭೋವಿ, ಲಂಬಾಣಿ, ಕೊರಮ, ಕೊರಚ, ದೊಂಬಿದಾಸರು, ಬುಡಗ ಜಂಗಮ, ಶಿಳ್ಳೆಕ್ಯಾತರು, ಅಲೆಮಾರಿಗಳ ಮಧ್ಯೆ ದ್ವೇಷ ಭಿತ್ತಲಾಗುತ್ತಿದೆ. ಇದು ಅಪಾಯಕಾರಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಜಾತಿಯಲ್ಲಿಯೇ ಅತ್ಯಂತ ನಿರ್ಲಕ್ಷ್ಯಕ್ಕೊಳಗಾಗಿರುವ ಬಂಜಾರ, ಕೊರಮ, ಕೊರಚ, ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಪ್ರತ್ಯೇಕಿಸುವ ಹುನ್ನಾರ ಕಂಡು ಬರುತ್ತಿದೆ. ಇದರಲ್ಲಿ ಈ ಸಮುದಾಯಗಳನ್ನು ಮೀಸಲಾತಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಆದ್ದರಿಂದ ಆಯೋಗದ ಈ ಅವೈಜ್ಞಾನಿಕ ವರದಿ ರದ್ದುಪಡಿಸಬೇಕು. ಒಳ ಮೀಸಲಾತಿ ಕೊಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲವೆಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಆದ್ದರಿಂದ ಒಳ ಮೀಸಲಾತಿ ಮಾಡುವುದನ್ನು ನಿಲ್ಲಿಸಬೇಕು. ಈ ವರದಿಯನ್ನು ಅಧಿವೇಶನದಲ್ಲಿ ಚರ್ಚೆಗೆ ಮಂಡಿಸಬಾರದು ಮತ್ತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಹಿಂದಿನ ಸರ್ಕಾರದಿಂದ ತಿರಸ್ಕರಿಸಲ್ಪಟ್ಟ ವರದಿಯನ್ನು ಸರ್ಕಾರ ಮತ್ತೆ ಜಾರಿಗೆ ತರುತ್ತೇವೆ ಎಂಬ ವಿಷಯ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಇದಕ್ಕೂ ಮುನ್ನ ನಗರದ ಶಿವಪ್ಪನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ವೈ. ನಾನ್ಯಾನಾಯ್ಕ್, ಭೋವಿ ಸಮಾಜದ ಅಧ್ಯಕ್ಷ ಎನ್. ರವಿಕುಮಾರ್, ಜಿಲ್ಲಾ ಬಂಜಾರ ಸಂಘದ ಅಧ್ಯಕ್ಷ ಕೆ.ಬಿ. ಅಶೋಕ್ ನಾಯ್ಕ್, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆರ್. ಜಗದೀಶ್, ಜಿಲ್ಲಾ ಸಂಚಾಲಕ ಧೀರರಾಜ್ ಹೊನ್ನವಿಲೆ, ಕುಮಾರ್ ನಾಯ್ಕ್, ವೀರಭದ್ರಪ್ಪ ಪೂಜಾರಿ, ಈರಾನಾಯ್ಕ್, ಬೂದಿಗೆರೆ ಬಸವರಾಜ್, ಆಯನೂರು ಶಿವಾನಯ್ಕ್, ನಾಗೇಶ್ ನಾಯ್ಕ್, ದೇಶಾದ್ರಿ ಹೊಸಮನಿ, ಫಕೀರಪ್ಪ ಭಜಂತ್ರಿ, ಮಹಾಲಕ್ಷ್ಮಿ, ಲೋಕೇಶ್, ಅನಿಲ್ ಕುಮಾರ್, ಪ್ರೇಮ್ ಕುಮಾರ್, ನಾಗರಾಜ್ ನಾಯ್ಕ್, ಭೋಜ್ಯಾನಾಯ್ಕ್ ಮೊದಲಾದವರಿದ್ದರು.