ಶಿವಮೊಗ್ಗ,ನ.27: ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರ ಕಟ್ಟಿ ಬೆಳಿಸಿದ ಜೆಡಿಎಸ್ ಪಕ್ಷ ರಾಜ್ಯದಲ್ಲಿ ಸದೃಢವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಬೋಜೇಗೌಡ ಹೇಳಿದರು.
ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನೂತನ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಾ.ಕಡಿದಾಳ್ ಗೋಪಾಲ್ ರವರ ಪದಗ್ರಹಣ ಸಮಾರಂಭವನ್ನು ಅಡಿಕೆ ಸಸಿಗೆ ನೀರು ಉಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಹೆಚ್.ಡಿ.ದೇವೇಗೌಡ ಹಾಗೂ ಹೆಚ್.ಡಿ. ಕುಮಾರಸ್ವಾಮಿ ಸಾರಥ್ಯದಲ್ಲಿ ಪಕ್ಷ ಸದೃಢವಾಗಿದ್ದು, ಅನೇಕ ನಾಯಕರು ಪ್ರಾದೇಶಿಕ ಪಕ್ಷವನ್ನು ರಚಿಸಿದ್ದು, ಅವು ಈಗ ಉಳಿದಿಲ್ಲ. ಆದರೆ, ಜೆಡಿಎಸ್ ಪಕ್ಷ ಮಾತ್ರ ಉಳಿದಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 135 ಶಾಸಕರನ್ನು ಜನರು ನೀಡಿದ್ದು, ಉತ್ತಮ ಆಡಳಿತ ನೀಡದ ಕಾಂಗ್ರೆಸ್ ಪಕ್ಷ ಬೇರೆ ಪಕ್ಷದ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ, ನಮ್ಮ ಪಕ್ಷದ 19 ಶಾಸಕರು ಯಾರೂ ಕಾಂಗ್ರೆಸ್ ಪಕ್ಷಕ್ಕೆ ಹೋಗುವುದಿಲ್ಲ ಎಂದರು.
ಬದಲಾದ ಸಂದರ್ಭದಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದು, ದೇವೇಗೌಡರು ಮತ್ತು ಕುಮಾರಸ್ವಾಮಿಯವರು ಈ ಹೊಂದಾಣಿಕೆಗೆ ಪ್ರಯತ್ನಿಸಿಲ್ಲ. ಆದರೆ ಪಕ್ಷದ ಸಭೆಯಲ್ಲಿ ಪಕ್ಷದ ಎಲ್ಲಾ ನಾಯಕರ ತೀರ್ಮಾನದಂತ್ತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ ಎಂದ ಅವರು, 1984ರಿಂದಲು ರಾಜ್ಯದಲ್ಲಿ ಪಕ್ಷಾಂತರ ಪರ್ವ ನಡೆಯುತ್ತಿದೆ. ಈಗಿನದ್ದೇನು ಹೊಸದಲ್ಲ ಎಂದರು.
ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿಯವರು ರೈತಾಪಿ, ಹಿಂದುಳಿದವರ, ಬಡವರ ಪರ ಕೆಲಸ ಮಾಡಿದ್ದು, ಈಗಲೂ ಸಹ ಅವರ ಆಡಳಿತವನ್ನು ಜನರು ಮೆಚ್ಚುತ್ತಿದ್ದಾರೆ. ಬಹುಮತ ಪಡೆದ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರ ವಿರುದ್ಧ ಆರೋಪಗಳನ್ನು ಮಾಡುವುದನ್ನು ಬಿಟ್ಟು ಉತ್ತಮ ಆಡಳಿತ ನೀಡಿ ಸರ್ಕಾರದ ಭ್ರಷ್ಟಾಚಾರವನ್ನು ಬಯಲುಗಳೆಯಲು ಕುಮಾರಸ್ವಾಮಿಯವರಿಂದ ಮಾತ್ರ ಸಾಧ್ಯ ಎಂದರು.
ಯಾರೂ ಅಲ್ಪಸಂಖ್ಯಾತರು ಪಕ್ಷವನ್ನು ಬಿಟ್ಟು ಹೋಗಿಲ್ಲ. ರಾಜ್ಯದಲ್ಲಿ ಪಕ್ಷ ಪ್ರಬಲವಾಗಿದ್ದು, ಕಾರ್ಯಕರ್ತರು ದೃತಿಗೆಡದೆ ನೂತನ ಅಧ್ಯಕ್ಷರಿಗೆ ಧೈರ್ಯತುಂಬಿ ಪಕ್ಷವನ್ನು ಜಿಲ್ಲೆಯಲ್ಲಿ ಪ್ರಬಲವಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಮಾತನಾಡಿ, ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದು, ಆರು ತಿಂಗಳಾದರು ಸಹ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ವಿಫಲವಾಗಿದೆ. ಜನರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸದೆ ಬೇರೆ ಪಕ್ಷದ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆಯುವಲ್ಲಿ ಕಾಲಕಳೆಯುತ್ತಿದೆ. ಪಕ್ಷದ ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಮುಂಬರುವ ಲೋಕಸಭ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಬೇರೆ ಪಕ್ಷದವರನ್ನು ಕರೆತರುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರ ಜವಾಬ್ದಾರಿ ಇದೆ. ಹೋರಾಟದ ಹಾದಿಯಲ್ಲಿ ಪಕ್ಷವಿದೆ ಎಂದರು.
ಪಕ್ಷ ಅಧಿಕಾರ ಇಲ್ಲದ ಸಂದರ್ಭದಲ್ಲಿ ನೂತನ ಜಿಲ್ಲಾಧ್ಯಕ್ಷರಾಗಿ ಡಾ.ಕಡಿದಾಳ್ ಗೋಪಾಲ್ರವರು ಅಧಿಕಾರ ವಹಿಸಿಕೊಂಡಿದ್ದು, ಜಿಲ್ಲೆಯಲ್ಲಿ ಪಕ್ಷವನ್ನು ಪ್ರಬಲವಾಗಿ ಕಟ್ಟಲು ಮುಖಂಡರು ಹಾಗೂ ಕಾರ್ಯಕರ್ತರು ಜೊತೆಗೂಡಿ ಪಕ್ಷವನ್ನು ಕಟ್ಟೋಣ ಎಂದರು.
ವೇದಿಕೆಯಲ್ಲಿ ನೂತನ ಅಧ್ಯಕ್ಷ ಡಾ. ಕಡಿದಾಳ್ ಗೋಪಾಲ್, ಶಾಸಕಿ ಶಾರದಾ ಪೂರ್ಯನಾಯ್ಕ್, ಮುಖಂಡರಾದ ಶಾರದ ಅಪ್ಪಾಜಿಗೌಡ, ಕೆ.ಎನ್.ರಾಮಕೃಷ್ಣ, ದೀಪಕ್ ಸಿಂಗ್ ಗೋವಿಂದಪ್ಪ, ಗೀತಾ ಸತೀಶ್, ಚಾಬೂಸಾಬ್, ಕಾಂತರಾಜ್, ಎಸ್.ಎನ್. ಮಹೇಶ್, ಸಿದ್ದಪ್ಪ, ಹೆಚ್.ಆರ್. ತ್ಯಾಗರಾಜ್, ಅಲ್ತಾಬ್, ಅಬ್ದುಲ್ವಾಜೀದ್, ಸತೀಶ್, ನಾಗೇಶ್, ನರಸಿಂಹ ಗಂಧದಮನೆ, ರಾಜರಾಮ್, ದಾದಪೀರ್, ಲೋಕೇಶ್, ಮಧುಕುಮಾರ್, ವಿನಯ್, ಕರುಣಾಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.