ಶಿವಮೊಗ್ಗ: ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಿಸಲು ಪಕ್ಷಕ್ಕೆ ಸೇರಿರುವ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಹೇಳಿದರು.

ಅವರು ಇಂದು ಆಮ್ ಆದ್ಮಿ ಪಾರ್ಟಿಯ ಪ್ರಮುಖರನ್ನು ಕಾಂಗ್ರೆಸ್ ಗೆ ಬರಮಾಡಿಕೊಂಡು ಸದಸ್ಯತ್ವ ನೀಡಿ ನಂತರ ಮಾತನಾಡಿದರು.

ಅಲ್ಪಸಂಖ್ಯಾತರು ಕಾಂಗ್ರೆಸ್ ನಲ್ಲಿಯೇ ಇದ್ದವರು. ಕೆಲವು ಕಾರಣಕ್ಕಾಗಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಮತ್ತೆ ವಾಪಸ್ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದಾರೆ. ಕೇವಲ ಪಕ್ಷಕ್ಕೆ ಬಂದರೆ ಸಾಲದು, ಲೋಕಸಭೆ ಚುನಾವಣೆ ಸೇರಿದಂತೆ ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಪಕ್ಷ ಗೆಲ್ಲಿಸಲು ಸಂಘಟಿತರಾಗಿ ಹೋರಾಡಬೇಕು. ಪಕ್ಷದ ಸಿದ್ಧಾಂತ ಮೈಗೂಡಿಸಿಕೊಳ್ಳಬೇಕು ಎಂದರು.

ಕೇಂದ್ರದ ಬಿಜೆಪಿ ಸರ್ಕಾರ ಬಡವರ ಪರ ಇಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದೆ. ಕಾರ್ಪೊರೇಟ್ ಕಂಪನಿಗಳಿಗೆ ಮಣೆ ಹಾಕುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಪ್ರಧಾನಿಯಾಗುತ್ತಾರೆ ಎಂದರು.

ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಮಾತನಾಡಿ, ರಾಹುಲ್ ಪ್ರಧಾನಿಯಾಗಲು ನಮ್ಮ ಜಿಲ್ಲೆಯಿಂದಲೂ ಕೊಡುಗೆ ನೀಡಬೇಕು. ಶಿವಮೊಗ್ಗ ಕ್ಷೇತ್ರದಿಂದ ಕಾಂಗ್ರೆಸ್ ಪರವಾಗಿ ಯಾರಿಗೆ ಟಿಕೆಟ್ ಸಿಕ್ಕರೂ ಕೂಡ ಅವರನ್ನು ಗೆಲ್ಲಿಸಬೇಕು ಎಂದರು.

ಮುಸ್ಲಿಮರ ಓಟು ಬೇಡ ಎಂದು ಕೆ.ಎಸ್. ಈಶ್ವರಪ್ಪ ಹೇಳಿದ್ದರು. ಅವರಿಗೆ ಶಿವಮೊಗ್ಗ ನೆಮ್ಮದಿಯಿಂದ ಇರಲು ಇಷ್ಟವಿರಲಿಲ್ಲ. ಅಂತಹ ಪಕ್ಷಕ್ಕೆ ನಾವು ಪಾಠ ಕಲಿಸಬೇಕು. ಬದಲಾವಣೆ ಆಗಬೇಕು. ಆಮ್ ಆದ್ಮಿ ಪಕ್ಷದಿಂದ ಬಂದ ಎಲ್ಲರಿಗೂ ಅಭಿನಂದನೆಗಳು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬರಬೇಕು. ಕಾಂಗ್ರೆಸ್ ನುಡಿದಂತೆ ನಡೆಯುತ್ತಿದೆ. ಎಲ್ಲಾ ಭಾಗ್ಯಗಳು ಯಶಸ್ವಿಯಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲರೂ ಸೇರೋಣ. ಸಂಘಟಿತರಾಗಿ ಬಿಜೆಪಿ ಓಡಿಸೋಣ ಎಂದರು.

ಈ ಸಂದರ್ಭದಲ್ಲಿ ಸೋಮಿನಕೊಪ್ಪ ವಾರ್ಡ್ ನ ಬಹುತೇಕ ಆಪ್ ಸದಸ್ಯರು ಮಕ್ಬುಲ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ವೈ.ಹೆಚ್. ನಾಗರಾಜ್, ಚಂದ್ರಭೂಪಾಲ್, ಎಸ್.ಟಿ. ಚಂದ್ರಶೇಖರ್, ಕಲೀಂ ಪಾಶ, ಸ್ಟೆಲಾ ಮಾರ್ಟಿನ್, ಎನ್.ಡಿ. ಪ್ರವೀಣ್ ಕುಮಾರ್, ಚಂದನ್ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!