ಶಿವಮೊಗ್ಗ: ಶಿವಮೊಗ್ಗ ರೌಂಡ್ ಟೇಬಲ್-೧೬೬ ಹಾಗೂ ಸರ್ಜಿ ಫೌಂಡೇಷನ್ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನ.೧೮ರಂದು ಬೆಳಿಗ್ಗೆ ೧೧ ಗಂಟೆಗೆ ನಗರದ ಸ್ಕೌಟ್ ಭವದಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಕಿಡ್ಸ್ ಫಿಯಾಸ್ಟಾ-೨೦೨೩ (ಮಕ್ಕಳ ಜಾತ್ರೆ) ಎಂಬ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ರೌಂಡ್ ಟೇಬಲ್ನ ಅಧ್ಯಕ್ಷ ವಿಶ್ವಾಸ್ ಬಿ. ಕಾಮತ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ರೌಂಡ್ ಟೇಬಲ್ ಸರ್ಕಾರಿ ಶಾಲೆಗಳ ಪುನರುಜ್ಜೀವನಕ್ಕಾಗಿ ಹಲವು ಕಾರ್ಯಕ್ರಮಗಳನ್ನು ಪೀಠೋಪಕರಣ ಹಾಗೂ ಕಟ್ಟಡಗಳನ್ನು ಕಟ್ಟಿಸಿಕೊಡುತ್ತಿದೆ. ಶಿವಮೊಗ್ಗದಲ್ಲಿ ದುರ್ಗಿಗುಡು ಸರ್ಕಾರಿ ಶಾಲೆ ಸೇರಿದಂತೆ ಸುಮಾರು ೪೨ ಶಾಲೆಗಳಿಗೆ ಪೀಠೋಪಕರಣಗಳನ್ನು ನೀಡಿದೆ. ಜೊತೆಗೆ ಶೌಚಾಲಯ ನಿರ್ಮಿಸಿದ್ದೇವೆ.
ಅನೇಕ ಶಾಲೆಗಳನ್ನು ದತ್ತು ತೆಗೆದುಕೊಂಡಿದ್ದೇವೆ.ಈಗ ವಿಶೇಷ ಚೇತನ ಮಕ್ಕಳ ಮೊಗದಲ್ಲಿ ಸಂತಸ ತರುವ ಉದ್ದೇಶದಿಂದ ಜಾತ್ರೆ ರೀತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮಾಧವ ನೆಲೆ, ಶಾರದಾ ಅಂಧರ ವಿಕಾಸ ಶಾಲೆ, ತರಂಗ ಶಾಲೆ, ತಾಯಿಯ ಮನೆ, ಸರ್ಜಿ ಫೌಂಡೇಷನ್ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಕಲಚೇತನ ಮಕ್ಕಳು ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಚೀನಾದಲ್ಲಿ ನಡೆದ ಅಂತರರಾಷ್ಟ್ರೀಯ ಪ್ಯಾರಾ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗಳಿಸುವ ಮೂಲಕ ಜಿಲ್ಲೆಗೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರನ್ನು ಸನ್ಮಾನಿಸಲಾಗುವುದು ಎಂದರು.
ಸರ್ಜಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ ಧನಂಜಯ ಸರ್ಜಿ ಮಾತನಾಡಿ, ಭಾರತದಲ್ಲಿ ಸುಮಾರು ಶೇ. ೧೬ರಷ್ಟು ವಿಕಲಚೇತನ ಮಕ್ಕಳಿದ್ದಾರೆ ಅವರಿಗೆ ನೆರವು ನೀಡುವುದು ಅವರ ಪ್ರತಿಭೆಗಳಿಗೆ ಪುರಸ್ಕಾರ ನೀಡುವುದು, ಆ ಮಕ್ಕಳ ತಾಯಂದಿರಿಗೆ ಸಾಂತ್ವನದ ಜೊತೆಗೆ ಉತ್ತೇಜನ ನೀಡುವುದು ನಮ್ಮೆಲ್ಲರ ಪಾತ್ರವಾಗಿದೆ. ಈ ನಿಟ್ಟಿನಲ್ಲಿ ರೌಂಡ್ ಟೇಬಲ್ನವರ ಕೆಲಸ ಶ್ಲಾಘನೀಯವಾದುದು.ನಮ್ಮ ಸಂಸ್ಥೆಯೊಂದಿಗೆ ಸೇರಿಕೊಂಡ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರೌಂಡ್ ಟೇಬಲ್ನ ಪದಾಧಿಕಾರಿಗಳಾದ ಈಶ್ವರ್ ಸರ್ಜಿ, ಗುರುಹಂಜಿ, ಕಮಲೇಶ್, ಸಿದ್ಧಾರ್ಥ್, ಋತ್ವಿಕ್, ಕೌಶಿಕ್, ಸ್ಕಂದ, ಅನಿರುದ್ಧ್, ಆದಿತ್ಯ ಇದ್ದರು.