ಶಿವಮೊಗ್ಗ: ದಸರಾ ಮೆರವಣಿಗೆಗೆ ತಂದ ಹೆಣ್ಣು ಆನೆ ನೇತ್ರಾವತಿ ಮರಿಗೆ ಜನ್ಮ ನೀಡಿದ್ದು, ಇದರ ಗರ್ಭಧಾರಣೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕೋರಿ ಶಿವಮೊಗ್ಗ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಮಲೆನಾಡು ಕೇಸರಿ ಪಡೆ ಮನವಿ ಸಲ್ಲಿಸಿದೆ.


ಅ,೨೩ರಂದು ದಸರಾ ಹಬ್ಬದ ಸಾರ್ವಜನಿಕ ಮೆರವಣಿಗೆಗೆಂದು ಸಕ್ರೆಬೈಲು ಆನೆಬಿಡಾರದಿಂದ ಒಂದು ಗಂಡು ಎರಡು ಹೆಣ್ಣು ಆನೆಯನ್ನು ತರಿಸಿದ್ದು,ಇದರಲ್ಲಿ ಎಲ್ಲರಿಗೂ ಆಶ್ಚರ್ಯ ಮೂಡಿಸುವಂತೆ ನೇತ್ರಾವತಿ ಆನೆ ಮರಿಗೆ ಜನ್ಮ ನೀಡಿದೆ.

ಗರ್ಭ ಧರಿಸಿದ ಆನೆಯನ್ನು ಸಾರ್ವಜನಿಕ ಮೆರವಣಿಗೆಗೆ ರವಾನಿಸುವುದು ವನ್ಯಜೀವಿ ಕಾಯ್ದೆ ಪ್ರಕಾರ ಅಪರಾಧವಾಗಿರುತ್ತದೆ. ಇದಕ್ಕೆ ಅನುಮತಿ ಕೊಟ್ಟ ಅಧಿಕಾರಿಯನ್ನು ಅಮಾನತು ಮಾಡಬೇಕು. ಗರ್ಭ ಧರಿಸಿದ ಆನೆಯ ದೈಹಿಕ ಬದಲಾವಣೆ ಗುರುತಿಸಬೇಕಾಗಿರುವುದು ಸದರಿ ಕಾರ್ಯನಿರ್ವಹಿಸುತ್ತಿರುವ ಪಶು ವೈದ್ಯಾಧಿಕಾರಿಯ ಕರ್ತವ್ಯವಾಗಿದ್ದು, ಈ ಪ್ರಕರಣದಲ್ಲಿ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ..
ಆನೆಗಳಲ್ಲಿ ಗರ್ಭಾವಸ್ಥೆಯ ಅವಧಿ ೨೦ರಿಂದ ೨೩ ತಿಂಗಳು ಇದ್ದು, ಈ ಹೆಣ್ಣು ಆನೆ ಗರ್ಭ ಧರಿಸಿರುವ ಬಗ್ಗೆ ಕೆಲವು ಲಕ್ಷಣಗಳ ಬಗ್ಗೆ ಮಾವುತ, ಜಮೇದಾರ್, ಆರ್‌ಎಫ್‌ಒ. ಪಶು ವೈದಾಧಿಕಾರಿಗಳು ಪತ್ತೆ ಮಾಡಬಹುದಾಗಿದೆ.


ಕೆಚ್ಚಲು, ಹೊಟ್ಟೆ ಉಬ್ಬುವಿಕೆ ಮುಂತಾದ ಅನೇಕ ಲಕ್ಷಣಗಳನ್ನು ಗಮನಿಸುವುದರಲ್ಲಿ ಸಿಬ್ಬಂದಿಗಳು ವಿಫಲರಾಗಿದ್ದಾರೆ. ಆನೆಯ ಚಲನವಲನದ ಬಗ್ಗೆ ಕರ್ತವ್ಯಲೋಪ ಎದ್ದುಕಾಣುತ್ತಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಕಳುಹಿಸುವ ಮೊದಲು ಎಲ್ಲಾ ಹೆಣ್ಣು ಆನೆಗಳಿಗೆ ಗರ್ಭಧಾರಣೆ ಪರೀಕ್ಷೆ ನಡೆಸಿ, ದೈಹಿಕ ಪರೀಕ್ಷೆ ನಡೆಸಿ ಸದೃಢತೆಯ ಸರ್ಟಿಫಿಕೇಟ್ ದಾಖಲುಪಡಿಸಿ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ನಿಯಮಾನುಸಾರವಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿದ್ದು, ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಕಂಡುಬಂದಿದೆ.


ಪ್ರತಿ ೧೫ ದಿನಗಳಿಗೊಮ್ಮೆ ಹೆಲ್ತ್ ರಿಜಿಸ್ಟರ್‌ನಲ್ಲಿ ವರದಿ ದಾಖಲಿಸಬೇಕಿರುತ್ತದೆ.
ಇಷ್ಟೆಲ್ಲಾ ನಿಯಮಗಳಿದ್ದರೂ ಸಂಬಂಧಪಟ್ಟ ಫಾರೆಸ್ಟ್ ಇನ್‌ಚಾರ್ಜ್ ಆಫ್ ಎಲಿಫೆಂಟ್, ಜಮೇದಾರ್, ಮಾವುತ ಹಾಗೂ ಕೋತಾಲ್‌ರಿಂದ ಕಾಲಕಾಲಕ್ಕೆ ಎಲ್ಲಾ ಮಾಹಿತಿಯನ್ನು ಆರ್‌ಎಫ್‌ಒ ಮತ್ತು ಪಶುವೈದ್ಯಾಧಿಕಾರಿಗಳಿಗೆ ತಿಳಿಸಬೇಕಾಗಿದ್ದು

, ಇವರ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ತಾಲೀಮಿನ ನೆಪದಲ್ಲಿ ಕಾದಿರುವ ಡಾಂಬರ್ ರಸ್ತೆಯ ಮೇಲೆ ನಡೆಸಿರುತ್ತಾರೆ ಹಾಗೂ ಪಟಾಕಿ ಶಬ್ದ ಮಾಡಿರುತ್ತಾರೆ. ಲಾರಿಯಲ್ಲಿ ಬಲವಂತವಾಗಿ ಕರೆದುಕೊಂಡು ಬರುವುದು ಹೋಗುವುದು ಅಮಾನವೀಯವಾಗಿರುತ್ತದೆ ಹಾಗಾಗಿ ಕೂಡಲೇ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಲೆನಾಡು ಕೇಸರಿ ಪಡೆ ಆಗ್ರಹಿಸಿದೆ.


ಈ ಸಂದರ್ಭದಲ್ಲಿ ಅಧ್ಯಕ್ಷ ಹೆಚ್.ಜಿ. ಚಂದ್ರಶೇಖರ್(ರಾಜು) ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!