ಸಾಗರದಾಚೆಯಲ್ಲೂ ದಸರಾ ಸಂಭ್ರಮ, ಕೀನ್ಯಾದ ನೈರೋಬಿಯಲ್ಲಿನ ಸಡಗರ, -ಡಾ. ಸುಕನ್ಯಾ ಅವರ ವಿಶೇಷ ಲೇಖನ ಓದಿ, ವೀಡಿಯೋ ಹಾಗೂ ಚಿತ್ರಣ ನೋಡಿ/ ನಮ್ಮಲ್ಲಿ ಮಾತ್ರ ನಿಮ್ಮ ತುಂಗಾತರಂಗದಲ್ಲಿ


-ಡಾ. ಸುಕನ್ಯಾ ಸೂನಗಹಳ್ಳಿ
ನೈರೋಬಿ, ಕೀನ್ಯಾ.

ಕಳೆದ ಕೆಲವು ದಿನಗಳಿಂದ ಭಾರತದೆಲ್ಲೆಡೆ ನವರಾತ್ರಿಯ ಸಂಭ್ರಮ ಮೊಳಗುತ್ತಿತ್ತು. ಅನಂತರ ’ವಿಜಯದಶಮಿ’ ಅಥವಾ ’ದಸರಾ’ ಹಬ್ಬದ ಸಡಗರ. ಇದಕ್ಕೆ ಹೊರತಾಗಿ ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಟ್ಟುಕೊಡದ ಭಾರತೀಯರು ವಿದೇಶಗಳಲ್ಲೂ ತಮ್ಮ ಹಬ್ಬಗಳನ್ನು ಆಚರಿಸುವುದುಂಟು. ಇಂತಹ ದೇಶಗಳಲ್ಲಿ ಕೀನ್ಯಾ ದೇಶದಲ್ಲಿರುವ ಭಾರತೀಯರು ಹಿಂದೂ ಧರ್ಮದ ಹಬ್ಬಗಳು, ಭಾರತದ ರಾಷ್ಟ್ರೀಯ ಹಬ್ಬಗಳನ್ನು ತಪ್ಪದೇ ಹಲವಾರು ವರ್ಷಗಳಿಂದಲೂ ಆಚರಿಸಿಕೊಂಡು ಬರುತ್ತಿದ್ದಾರೆ. ಅಂತಹವುಗಳಲ್ಲಿ ಮೊನ್ನೆ ತಾನೆ ಆಚರಿಸಿದ ’ದಸರಾ’ ಹಬ್ಬವೂ ಕೂಡ ಒಂದು.

https://youtu.be/Ko_ClJb6ddc?si=MEkm1HCVsK8JIFpx
ಸಾಗರದಾಚೆಯಲ್ಲೂ ದಸರಾ ಸಂಭ್ರಮ, ಕೀನ್ಯಾದ ನೈರೋಬಿಯಲ್ಲಿನ ಸಡಗರ, -ಡಾ. ಸುಕನ್ಯಾ ಅವರ ವಿಶೇಷ ಲೇಖನ ನಮ್ಮಲ್ಲಿ ಮಾತ್ರ, ಓದಿ, ವೀಡಿಯೋ ಹಾಗೂ ಚಿತ್ರಣ ನೋಡಿ


ಬ್ರಿಟೀಷರು ಭಾರತ ದೇಶವನ್ನು ಆಳುತ್ತಿದ್ದ ಸಮಯದಲ್ಲಿ, ಕೀನ್ಯಾ ದೇಶವನ್ನೂ ಕೂಡ ಆಳುತ್ತಿದ್ದರು. ಆ ಸಮಯದಲ್ಲಿ ಉಗಾಂಡ, ಕೀನ್ಯಾ ಮತ್ತು ತಾಂಜೇನಿಯಾ ಮೂರು ದೇಶಗಳ ನಡುವೆ ವ್ಯಾಪಾರ, ಸರಕುಗಳ ಸಾಗಾಣಿಕೆಗಾಗಿ ಸಂಪರ್ಕ ಕಲ್ಪಿಸಲು ರೈಲು ಮಾರ್ಗವನ್ನು ನಿರ್ಮಿಸುವ ಅಗತ್ಯವಿತ್ತು. ಇದಕ್ಕಾಗಿ ಸಾವಿರಾರು ಭಾರತೀಯರನ್ನು ಭಾರತದಿಂದ ಕರೆತಂದರು. ರೈಲು ಮಾರ್ಗ ನಿರ್ಮಾಣ ಮಾಡಬೇಕಾದರೆ ಹಲವಾರು ಭಾರತೀಯರು ಸಾವಿಗೀಡಾದರು. ರೈಲು ಮಾರ್ಗ ನಿರ್ಮಾಣವಾದ ನಂತರ ಕೆಲವು ಭಾರತೀಯರು ಕೀನ್ಯಾದಲ್ಲಿಯೇ ನೆಲೆಸಿದರು. ವ್ಯಾಪಾರ ವಹಿವಾಟುಗಳನ್ನು ಆರಂಭಿಸಿದರು. ತಮ್ಮ ಸಂಸ್ಕೃತಿ, ಸಂಪ್ರದಾಯಗಳನ್ನು ಬಿಡಲೊಪ್ಪದ ಅಲ್ಲಿಯೇ ನೆಲೆಸಿದ್ದ ಭಾರತೀಯರು, ರಾಜಧಾನಿ ನೈರೋಬಿಯಲ್ಲಿ ಅನೇಕ ಹಿಂದೂ ದೇವಾಲಯಗಳನ್ನು ನಿರ್ಮಿಸಿದರು. ಅನಂತರ ಭಾರತದಲ್ಲಿ ಆಚರಿಸಲಾಗುವ ಎಲ್ಲ ಹಬ್ಬಗಳನ್ನು ಇಲ್ಲಿಯೂ ಸಾಂಪ್ರದಾಯಿಕವಾಗಿ ಆಚರಿಸಲು ಮುಂದಾದರು. ಅಂತಹ ಹಬ್ಬಗಳಲ್ಲಿ ಒಂದಾದ ದಸರಾ ಹಬ್ಬವನ್ನು ತಪ್ಪದೇ ಆಚರಿಸಿಕೊಂಡು ಬಂದಿದ್ದಾರೆ. ಕೊರೊನಾ ಸಮಯದಲ್ಲಿಯೂ ಸಹ ನಿಲ್ಲಿಸಲಿಲ್ಲ.


ಸಾಮಾನ್ಯವಾಗಿ ಈ ಹಬ್ಬವನ್ನು ನವರಾತ್ರಿಯ ಒಂಭತ್ತು ದಿನಗಳ ನಂತರ ಹತ್ತನೆಯ ದಿನದಂದು ಆಚರಿಸಲಾಗುತ್ತದೆ. ದಸರಾ ಹಬ್ಬವನ್ನು ಕೆಟ್ಟದರ ಮೇಲೆ ಒಳಿತಿನ ವಿಜಯದ ಸಂಕೇತ, ಅಧರ್ಮದ ವಿರುದ್ಧ ಧರ್ಮದ ವಿಜಯವೆಂದು ಆಚರಿಸಲಾಗುತ್ತದೆ. ಆ ಕಾರಣಕ್ಕೆ ಇದನ್ನು “ವಿಜಯದಶಮಿ” ಎಂದು ಕರೆಯಲಾಗುತ್ತದೆ. ಲಂಕಾಧಿಪತಿ ರಾವಣನು ಭಗವಾನ್ ಶ್ರೀ ರಾಮನ ಪತ್ನಿ ಸೀತೆಯನ್ನು ಅಪಹರಿಸಿ ತನ್ನ ಸಾಮ್ರಾಜ್ಯವಾದ ಲಂಕೆಗೆ ಕರೆದುಕೊಂಡು ಹೋಗುತ್ತಾನೆ. ಸೀತೆಯನ್ನು ಬಿಡಲು ಶ್ರೀ ರಾಮ ರಾವಣನನ್ನು ಕೇಳುತ್ತಾನೆ. ಆದರೆ ರಾವಣ ನಿರಾಕರಿಸುತ್ತಾನೆ. ಆಗ ಪರಿಸ್ಥಿತಿಯು ತೀರಾ ಉಲ್ಬಣಗೊಂಡು ಯುದ್ಧಕ್ಕೆ ಕಾರಣವಾಗುತ್ತದೆ. ರಾವಣನು ಹಲವಾರು ವರ್ಷಗಳ ಕಾಲ ಕಠಿಣ ತಪಸ್ಸು ಮಾಡಿ ಬ್ರಹ್ಮನಿಂದ ವರವನ್ನು ಪಡೆದಿರುತ್ತಾನೆ. ಅದೇನೆಂದರೆ, ದೇವರುಗಳು, ರಾಕ್ಷಸರು ಅಥವಾ ಆತ್ಮಗಳಿಂದ ಇವನು ಕೊಲ್ಲಲ್ಪಡಬಾರದೆಂಬುದು. ರಾವಣ ವರ ಪಡೆದುಕೊಂಡಿದ್ದ ವಿಷಯ ಕುರಿತು ಮೊದಲೇ ಅರಿವಿದ್ದ ಶ್ರೀ ರಾಮ (ಭಗವಾನ್ ವಿಷ್ಣುವಿನ ಅವತಾರ) ಅವನನ್ನು ಸೋಲಿಸಲು ಮತ್ತು ಕೊಲ್ಲಲು ’ಮಾನವ’ ಅವತಾರವನ್ನು ತಾಳುತ್ತಾನೆ. ರಾಮ ಮತ್ತು ರಾವಣ ಇಬ್ಬರ ನಡುವೆ ಭೀಕರ ಯುದ್ಧ ನಡೆಯುತ್ತದೆ. ಇದರಲ್ಲಿ ಭಗವಾನ್ ರಾಮನು ರಾವಣನನ್ನು ಕೊಂದು ಸೀತಾ ಮಾತೆಯನ್ನು ಆತನ ಬಂಧನದಿಂದ ಮುಕ್ತಗೊಳಿಸಿದ. ರಾವಣನ ದುಷ್ಟತನವನ್ನು ಕೊನೆಗಳಿಸುತ್ತಾನೆ.

ಪರ್ಯಾಯವಾಗಿ ದುಷ್ಟ ಆಡಳಿತವು ಕೊನೆಗೊಂಡಂತಾಗುತ್ತದೆ. ರಾವಣನ ಮೇಲೆ ರಾಮನ ವಿಜಯದಿಂದಾಗಿ ಭೂಮಿಯ ಮೇಲೆ ಧರ್ಮ ಸ್ಥಾಪನೆಯಾಯಿತು. ಹಾಗಾಗಿ, ಈ ಹಬ್ಬವು ದುಷ್ಟರ ಮೇಲೆ ಒಳ್ಳೆಯತನದ ವಿಜಯವನ್ನು ಸ್ಮರಿಸುತ್ತದೆ. ಈ ಕಾರಣಕ್ಕಾಗಿ ದಸರಾ ದಿನದಂದು ದುಷ್ಟತನವನ್ನು ಸೂಚಿಸುವ ರಾವಣನ ಪ್ರತಿಕೃತಿಗಳನ್ನು ಪಟಾಕಿಗಳಿಂದ ಸುಡಲಾಗುತ್ತದೆ. ಕಾಮ, ಕ್ರೋಧ, ಮೋಹ, ಮದ, ಲೋಭ, ಅಹಂಕಾರ, ಹಿಂಸೆ ಇತ್ಯಾದಿ ಕೆಟ್ಟ ಕೃತ್ಯಗಳಿಂದ ದೂರವಿರುವಂತೆ ಪ್ರೇರೇಪಿಸುತ್ತದೆ.
ಹೀಗೆ ಪೌರಾಣಿಕ ಹಿನ್ನೆಲೆಯುಳ್ಳ ಈ ಹಬ್ಬವನ್ನು ಕೊರೊನಾ ವೈರಸ್ ಆರ್ಭಟದ ಸಮಯದಲ್ಲಿ ನೈರೋಬಿಯಲ್ಲಿ ರಾವಣ ದಹನವನ್ನು ಸರಳವಾಗಿ ಮಾಡಿದರು. ಏಕೆಂದರೆ, ರಾವಣ ದಹನ ಕಾರ್ಯಕ್ರಮದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾಗಿತ್ತು. ಭಯದಿಂದಾಗಿ ಮೊದಲಿನಷ್ಟು ಜನರು ಭಾಗವಹಿಸಲು ಸಿದ್ಧರಿರಲಿಲ್ಲ. ನಾಲ್ಕು ವರ್ಷಗಳ ನಂತರ ಮೊದಲಿನಂತೆಯೇ ಬಹಳ ಸಡಗರದಿಂದ ಮಾಡಲಾಯಿತು.


ಪ್ರತಿವರ್ಷವೂ ಆಚರಿಸುವ ರೀತಿಯಲ್ಲಿಯೇ, ಈ ವರ್ಷವೂ ಶ್ರೀ ಸನಾತನ ಧರ್ಮ ಸಭಾ (ಎಸ್‌ಎಸ್‌ಡಿಎಸ್) ಮೈದಾನದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಇಲ್ಲಿನ ಪ್ರಮುಖ ಆಕರ್ಷಣೆ ’ರಾವಣ ದಹನ’ವನ್ನು ನೋಡಲು ಸುಮಾರು ೨೦,೦೦೦ಕ್ಕೂ ಹೆಚ್ಚು ಭಾರತೀಯರು ಆಗಮಿಸಿದ್ದರು. ಸಂಪ್ರದಾಯದ ಪ್ರಕಾರ ಅಚ್ಚುಕಟ್ಟಾಗಿ ನೆರವೇರಿಸಲಾಯಿತು. ಕೆಲವು ಮಂದಿ ಯುವಕರು ಶ್ರೀ ರಾಮ, ಲಕ್ಷಣ, ಆಂಜನೇಯ, ರಾವಣ ಇನ್ನೂ ಹಲವು ವೇಷ-ಭೂಷಣಗಳಲ್ಲಿದ್ದುದನ್ನು ನೋಡುವುದೇ ಒಂದು ರೀತಿ ಚೆನ್ನ. ರಾಮ ಮತ್ತು ರಾವಣನ ನಡುವೆ ಬಿಲ್ಲುಗಳನ್ನು ಬಿಡಲಾಯಿತು. ರಾಮನ ಬಿಲ್ಲು ರಾವಣನಿಗೆ ತಾಕಿದ ನಂತರವೇ ರಾವಣನ ಪ್ರತಿಕೃತಿಯನ್ನು ದಹನ ಮಾಡಲು ಅದಕ್ಕೆ ಪೂಜೆ ಮಾಡಿ, ಬೆಂಕಿ ಹಚ್ಚಿದ್ದು ಇಲ್ಲಿನ ವಿಶೇಷವಾಗಿತ್ತು. ಯಾವುದೇ ಅನಾಹುತವಿಲ್ಲದೇ, ಯಶಸ್ವಿಯಾಗಿ ರಾವಣ ದಹನವನ್ನು ಮಾಡಿದ ನಂತರ ಅಲ್ಲಿ ಹರ್ಷೋದ್ಗಾರ ಮೊಳಗಿತು. ಅನಂತರ ವಿವಿಧ ರೀತಿಯ ಪಟಾಕಿಗಳನ್ನು ಸಿಡಿಸಲಾಯಿತು. ವೈವಿಧ್ಯಮಯ ಬಣ್ಣ ಬಣ್ಣ ಪ್ರಕಾಶಗಳಿಂದ ಸಿಡಿಯುವ ಪಟಾಕಿಗಳು ಬಾನಂಗಳದಲ್ಲಿ ಚಿತ್ತಾರ ಮೂಡಿಸಿದವು. ಅಲ್ಲಿ ನೆರೆದಿದ್ದ ಎಲ್ಲರ ಸಂತಸವನ್ನು ಹೆಚ್ಚು ಮಾಡಿದವು.


ಮೈದಾನದಲ್ಲಿಯೇ ಒಂದು ಕಡೆ ಪುಟ್ಟ ವೇದಿಕೆಯನ್ನು ನಿರ್ಮಿಸಿದ್ದರು. ಅಲ್ಲಿ ಹಲವು ಚಿಕ್ಕ ಮಕ್ಕಳು ಗುಂಪಿನಲ್ಲಿ ನೃತ್ಯಗಳನ್ನು ಮಾಡಿದರು. ಹಾಗೆಯೇ, ರಾಮಾಯಣದ ವಿವಿಧ ಪಾತ್ರಗಳ ಕುರಿತಂತೆ ಪುಟ್ಟ ಮಕ್ಕಳಿಗೆ ’ಫ್ಯಾನ್ಸಿ ಡ್ರೆಸ್’ ಸ್ಫರ್ಧೆಯನ್ನು ನಡೆಸಲಾಯಿತು. ಮತ್ತೊಂದೆಡೆ ಮಕ್ಕಳಿಗಾಗಿ ಆಟವಾಡಲು ಸಕಲ ಸಿದ್ಧತೆಗಳನ್ನು ಮಾಡಲಾಗಿತ್ತು. ಅನೇಕ ಮಕ್ಕಳು ಬಗೆ ಬಗೆಯ ಆಟಗಳನ್ನು ಆಡಿ ಸಂತೋಷಪಟ್ಟರು. ಆಹಾರ ಪ್ರಿಯ ಭಾರತೀಯರಿಗಾಗಿಯೇ ೩೦ಕ್ಕೂ ಹೆಚ್ಚು ಫುಡ್ ಸ್ಟಾಲ್‌ಗಳನ್ನು ಹಾಕಲಾಗಿತ್ತು. ಮೂರ‍್ನಾಲ್ಕು ಕೀನ್ಯಾ ಪುಡ್ ಸ್ಟಾಲ್‌ಗಳು ಇದ್ದವು. ಭಾರತದ ವಿಭಿನ್ನ ರುಚಿಕರವಾದ ಆಹಾರಗಳು ಘಮ-ಘಮಿಸಿ ತನ್ನತ್ತ ಸೆಳೆಯುತ್ತಿದ್ದವು. ಎಲ್ಲರೂ ಕೊನೆಗೆ ಆಹಾರವನ್ನು ಸೇವಿಸಿ, ಸಂತೋಷದಿಂದ ಅವರ ಮನೆಗಳಿಗೆ ವಾಪಸ್ಸು ತೆರಳಿದರು. ಹೀಗೆ ನಮ್ಮ ಹಬ್ಬ-ಹರಿದಿನಗಳನ್ನು ಎಲ್ಲೇ ಇದ್ದರೂ ನಾವು ಸಡಗರ, ಸಂಭ್ರಮದಿಂದ ತಪ್ಪದೇ ಆಚರಿಸೋಣ.

By admin

ನಿಮ್ಮದೊಂದು ಉತ್ತರ

error: Content is protected !!