“ಆರೋಗ್ಯವೇ ಭಾಗ್ಯ”, “ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ” ಎಂಬ ನಾಣ್ಣು ಡಿಗಳು ಇಂದಿಗೂ ಜನಜನಿತವಾಗಿವೆ. ಈ ನಾಣ್ಣುಡಿಗಳು ಯಾರಿಗೆ ತಾನೇ ತಿಳಿದಿಲ್ಲ ಹೇಳಿ?. ಕೇವಲ ತಿಳಿದಿದ್ದರೆ ಸಾಲದು, ಅದನ್ನು ಪರಿಪಾಲಿಸುವಂತಿದ್ದರೆ ಎಷ್ಟು ಚೆನ್ನ ಅಲ್ಲವೇ!
ಆರೋಗ್ಯಕರ ಜೀವನ ಎಂದರೆ ಒಬ್ಬರ ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಸ್ಥಿತಿಯ ಉತ್ತಮ ಸ್ಥಿತಿ ಎನ್ನಬಹುದು. ಇದನ್ನು ಸಾಧಿಸಲು ಆರೋಗ್ಯಕರ ಆಹಾರವು ಪ್ರಯೋಜನಕಾರಿ. ಆರೋಗ್ಯವಂತರಾಗಿರ ಬೇಕಾದರೆ ಪೋಷಕಾಂಶಗಳು ಸಮೃದ್ಧವಾಗಿರುವ ಪೌಷ್ಠಿಕ ಆಹಾರ ಸೇವನೆ ಬಹಳ ಮುಖ್ಯ. ಇದು ಅನೇಕ ಮಾರಣಾಂತಿಕ, ಸಾಂಕ್ರಾಮಿಕವಲ್ಲದ ರೋಗಗಳು ಬರದಂತೆ ತಡೆಗಟ್ಟುತ್ತದೆ.


ಆರೋಗ್ಯಕರ ಆಹಾರವನ್ನು ಚರ್ಚಿಸುವಾಗ ಆಗಾಗ ಉದ್ಭವಿಸುವ ಪ್ರಶ್ನೆ, ಏನು ತಿನ್ನಬೇಕು ಮತ್ತು ಹೇಗೆ ತಿನ್ನಬೇಕು? ಎಂದು. ನನಗೆ ಈಗಾಗಲೇ ಎಲ್ಲವೂ ತಿಳಿದಿದೆ. ನನಗೆ ಇದರ ಬಗ್ಗೆ ಏಕೆ ತಿಳಿದುಕೊಳ್ಳಬೇಕು? ಅಂತಾ ಅಂದುಕೊಳ್ಳುತ್ತಾರೆ ಬಹಳ ಮಂದಿ. ಎಲ್ಲರಿಗೂ ಯಾವ ಯಾವ ಆರೋಗ್ಯಕರ ಆಹಾರವನ್ನು ತಿನ್ನಬೇಕು ಎಂಬುದು ತಿಳಿದಿದ್ದರೆ, ಭಾರತವು ಮಧುಮೇಹ ಮತ್ತು ಹೃದ್ರೋಗಗಳ ವಿಶ್ವ ರಾಜಧಾನಿಯಾಗಿದ್ದು ಏಕೆ? ಎಂಬುದನ್ನು ನಾವು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಹೇಗೆ ಕಾಪಾಡಿಕೊಳ್ಳಬೇಕು? ಎಂಬುದನ್ನು ತಮ್ಮ ಮಾರ್ಗದರ್ಶನದ ಮೂಲಕ ಜನತೆಗೆ ತಿಳಿಸಿಕೊಟ್ಟವರು ನಾಡಿನ ಹೆಸರಾಂತ ಆಹಾರ ತಜ್ಞರಾದ “ಡಾ. ಕೆ.ಸಿ. ರಘು” ಅವರು. ಖ್ಯಾತ ಆಹಾರ ತಜ್ಞರಾಗಿ, ಚಿಂತಕರಾಗಿ, ಅಂಕಣಕಾರರಾಗಿ, ಲೇಖಕರಾಗಿ ನಮಗೆಲ್ಲ ಚಿರಪರಿಚಿತರು.


ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕಲ್ಮನೆಯಲ್ಲಿ ಜನಿಸಿದ ಡಾ. ಕೆ.ಸಿ ರಘು ಅವರು, ೧೯೯೨ರಲ್ಲಿ ಬೆಂಗಳೂರಿನಲ್ಲಿ “ಪ್ರಿಸ್ಟೀನ್ ಅರ್ಗಾನಿಕ್ಸ್” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಈ ಸಂಸ್ಥೆಯಿಂದ ನವಜಾತ ಶಿಶುಗಳಲ್ಲಿ ಕಂಡುಬರುವ ಮಾರಕ ಕಾಯಿಲೆಗಳಿಗೆ ಪೌಷ್ಠಿಕಾಂಶದ ಕೊರತೆಯನ್ನು ನೀಗಿಸಲು ಸಂಶೋಧನೆಯ ಮೂಲಕ ಪರಿಹಾರವನ್ನು ಕಂಡುಹಿಡಿದು, ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಮಹತ್ತರ ಕಾರ್ಯದಿಂದ ಸುಮಾರು ಐದು ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದರು. ಭಾರತದಲ್ಲಿ ಈ ರೀತಿಯ ಪರಿಹಾರ ಒದಗಿಸುವ ಏಕೈಕ ಸಂಸ್ಥೆ ಇದಾಗಿದೆ.


ಸಿರಿಧಾನ್ಯಗಳ ಬಗ್ಗೆ ಯಾರಿಗೂ ಅಷ್ಟು ಗೊತ್ತಿಲ್ಲದ ಕಾಲದಲ್ಲೇ ಸಹಜ ಸಮೃದ್ಧ ಮತ್ತು ಪ್ರಿಸ್ಟೀನ್ ಆರ್ಗಾನಿಕ್ಸ್ ಜೊತೆಗೂಡಿ ಸಿರಿಧಾನ್ಯಗಳ ಮೇಳ, ಪುಸ್ತಕ ಪ್ರದರ್ಶನ ಮೊದಲಾದ ಅರಿವಿನ ಕಾರ್ಯಕ್ರಮಗಳನ್ನು ರೂಪಿಸಿದ್ದರು. ೨೦೧೦ರಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಿದ “ಸಿರಿಧಾನ್ಯ ಮೇಳ” ದೊಡ್ಡ ಯಶಸ್ಸು ಕಂಡಿತು. ಈ ಸಂಧರ್ಭದಲ್ಲಿ, ಸಿರಿಧಾನ್ಯಗಳ ಕುರಿತು ರಘು ಅವರು ರಚಿಸಿದ ಇಂಗ್ಲಿಷ್ ಪುಸ್ತಕ ಬಹಳಷ್ಟು ವರ್ಷಗಳ ಕಾಲ ಆಕರ ಗ್ರಂಥವಾಗಿ, ಸಿರಿಧಾನ್ಯ ಪ್ರಪಂಚಕ್ಕೆ ಮುನ್ನುಡಿ ಬರೆಯಿತು. ಮುಂದೆ ಪ್ರಿಸ್ಟೀನ್ ಆರ್ಗಾನಿಕ್ಸ್ ಮೂಲಕ ಸಿರಿಧಾನ್ಯಗಳ ಹೊಸ ಬ್ರಾಂಡ್ ಹೊರತಂದರು. ಬಹುಶಃ ಇಡೀ ಭಾರತದಲ್ಲಿ ಸಿರಿಧಾನ್ಯಗಳ ಬ್ರಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದವರಲ್ಲಿ ರಘು ಮೊದಲಿಗರು. ಕೆಂಪಕ್ಕಿ, ಸಿರಿಧಾನ್ಯ, ಬಣ್ಣದ ಮುಸುಕಿನ ಜೋಳ, ಗೆಡ್ಡೆ ಗೆಣಸು ಮುಖ್ಯವಾಹಿನಿಗೆ ತರಲು ಅನೇಕ ಮಾರ್ಗದರ್ಶ ನಗಳನ್ನು ನೀಡಿದರು.
ಡಾ. ಕೆ.ಸಿ. ರಘು ಅವರು ಆಹಾರ ವಿಚಾರದಲ್ಲಿ ಅಗಾಧವಾದ ಜ್ಞಾನವನ್ನು ಹೊಂದಿದ್ದರು. ಟಿವಿ ವಾಹಿನಿಗಳ ಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಆಹಾರ ಕ್ರಮದ ಕುರಿತು ಟಿಪ್ಸ್ ನೀಡುತ್ತಿದ್ದರು. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ, ಆಹಾರದಲ್ಲಿದೆ ಆನಂದಮಯ ಜೀವನ, ಊಟ ಮಾಡಿದ ತಕ್ಷಣ ಏಕೆ ಮಲಗಬಾರದು?, ಸ್ಥೂಲಕಾಯ ನಿವಾರಣೆಗೆ ಆಹಾರ ಶೈಲಿ ಹೇಗಿರಬೇಕು?, ಆರೋಗ್ಯವಂತರು ಯಾರು?, ಆಯಸ್ಸು ಕಡಿಮೆ ಆಗಲು ಕಾರಣ ಯಾವುದು?, ಉತ್ತಮ ಆರೋಗ್ಯಕ್ಕೆ ಯಾವೆಲ್ಲಾ ಪೌಷ್ಠಿಕ ಆಹಾರ ಸೇವಿಸಬೇಕು? ಯಾವ ಹಸುವಿನ ಹಾಲು ಹೆಚ್ಚು ಆರೋಗ್ಯಕರ?, ಬಿ.ಪಿ./ಶುಗರ್ ಪೇಷೆಂಟ್‌ಗಳಿಗೆ ಆಹಾರ ಕ್ರಮ ಇತ್ಯಾದಿ ವಿಷಯಗಳನ್ನು ಕುರಿತು ಹಲವಾರು ಸಂದರ್ಶನ ಗಳನ್ನು ನೀಡಿದ್ದಾರೆ. ನಿಖರವಾಗಿ ವಿಷಯ ತಿಳಿಸುತ್ತಿದ್ದ ಅವರ ಬರೆಹ ಹಾಗೂ ಮಾತು ಎರಡೂ ಜನರಿಗೆ ಇಷ್ಟವಾಗಿದ್ದವು. ಬಹಳಷ್ಟು ವಾಹಿನಿಗಳಿಗೆ ಸರಣಿ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಕೊಟ್ಟಿದ್ದರು ಡಾ. ಕೆ.ಸಿ. ರಘು. ಪ್ರಚಲಿತ ವಿದ್ಯಾಮಾನಗಳ ಬಗ್ಗೆಯೂ ಉತ್ತಮವಾದ ಅರಿವು ಹೊಂದಿದ್ದ ರಘು ಅವರು ನಿರರ್ಗಳವಾಗಿ ಮಾತ ನಾಡುತ್ತಿದ್ದರು. ಅವರ ಬರೆಹದಲ್ಲಿ ಇರುವುದಕ್ಕಿಂತಲೂ ಹೆಚ್ಚಿನ ಜೀವಂತಿಕೆ ಮಾತಿನಲ್ಲಿತ್ತು. ಸಾಮಾಜಿಕ ಜಾಲತಾಣದಲ್ಲಿಯೂ ಆಹಾರ ಕಾಳಜಿಯ ಬಗ್ಗೆ ಅನೇಕ ಬಾರಿ ಮಾತನಾಡಿದ್ದಾರೆ. ಆಹಾರದ ಕುರಿತು ರಘು ಅವರ ಹತ್ತಾರು ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿವೆ.


ಕನ್ನಡದ ಬಹುತೇಕ ಸುದ್ದಿ ವಾಹಿನಿಗಳ ಮೂಲಕ ಮನೆ ಮಾತಾಗಿರುವ ಶ್ರೀಯುತರು, ಅನೇಕ ದೇಶಗಳಿಗೆ ಭೇಟಿ ನೀಡಿ ಅಧ್ಯಯನ ಮತ್ತು ಸಂಶೋಧನೆ ನಡೆಸಿ, ಅಂತಾರಾಷ್ಟ್ರೀಯ ವೈಜ್ಞಾನಿಕ ಪತ್ರಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ ಖ್ಯಾತಿ ಇವರದ್ದು. ಪುಡ್ ಅಂಡ್ ನ್ಯೂಟ್ರೀಷನ್ ವರ್ಲ್ಡ್ ಎಂಬ ಆಂಗ್ಲ ನಿಯತ ಕಾಲಿಕದ ಸಂಪಾದಕರಾಗಿದ್ದರು. ಸಿಟಿ ಟುಡೇ ಪತ್ರಿಕೆಗೆ ವಿಜ್ಞಾನ ವಿಷಯವಾಗಿ ಬರೆಯುತ್ತಿದ್ದರು. ಸಾಮಾನ್ಯ ಜ್ಞಾನ, ಆರ್ಥಿಕತೆ ವಿಷಯಗಳಲ್ಲಿ ಅತಿಥಿ ಉಪನ್ಯಾಸಕರಾಗಿಯೂ ಕಾರ್ಯ ನಿರ್ವಹಣೆ ಮಾಡಿ ಸೈ ಎನಿಸಿಕೊಂಡಿದ್ದರು. ದೇಹದ ಆರೋಗ್ಯದಷ್ಟೇ ಸಮಾಜದ ಆರೋಗ್ಯದ ಬಗ್ಗೆ ಕಾಳಜಿ ಹೊಂದಿದ್ದರು. ಕೇಂದ್ರ ಮತ್ತು ರಾಜ್ಯ ಬಜೆಟ್ ಸಂದರ್ಭದಲ್ಲಿ ಟಿವಿ ವಾಹಿನಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು.
ದೇಸಿ ಆಹಾರ ಪದ್ಧತಿಯ ಮಹತ್ವ, ಆಹಾರದ ಹಿಂದಿರುವ ರಾಜಕೀಯ ಮತ್ತು ಭವಿಷ್ಯದಲ್ಲಿ ನಮ್ಮ ನಿಲುವೇನು? ಎಂಬ ವಿಷಯಗಳ ಮೇಲೆ ಅವರು ಬೆಳಕು ಚೆಲ್ಲಿದರು. ವಂಶಪಾರಂಪರ್ಯ ಕಾಯಿಲೆ (ಜೆನೆಟಿಕ್ ಡಿಸ್‌ಆರ್ಡರ್ಸ್)ಗಳಿಗೆ, ವಿಶೇಷ ವೈದ್ಯಕೀಯ ಆಹಾರ ಪದ್ಧತಿ ಸಿದ್ಧಪಡಿಸಿ, ಸಾವಯವ ಆಹಾರ ಪದಾರ್ಥ ಬಳಸಿ ಔಷಧ ರೂಪದಲ್ಲಿ ಆಹಾರ ಕ್ರಮ ರೂಪಿಸಿದ ಹೆಗ್ಗಳಿಕೆ ಇವರದ್ದು.
ಡಾ. ಕೆ.ಸಿ. ರಘು ಅವರು ಲೇಖಕರಾಗಿ ತುತ್ತು ತತ್ತ್ವ, ಆಹಾರ ರಾಜಕೀಯ, ರಸ ತತ್ತ್ವ ಎಂಬ ಕೆಲವು ಕೃತಿಗಳನ್ನು ಹೊರತಂದಿ ದ್ದರು. ಹಲವು ವರ್ಷಗಳಿಂದ ಸಿದ್ದ ಆಹಾರ, ಆಹಾರ ವಸ್ತುಗಳ ಬಳಕೆ, ಕಲಬೆರಕೆ, ಅದರ ಪರಿಣಾಮಗಳ ಕುರಿತು ಅನೇಕ ಕನ್ನಡ ದಿನಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆ ಯುತ್ತಿದ್ದರು. ಕನ್ನಡದಲ್ಲಿ ವೈವಿಧ್ಯಮಯವಾದ ವಿಷಯಗಳನ್ನು ವಿಭಿನ್ನ ರೀತಿಯಲ್ಲಿ ಬರೆಯುವ ರಘು ಅವರು ಹೆಚ್ಚಿನ ಓದುಗರು ಕೂಡ ಹೌದು. ಅವರ ಓದಿನ ವ್ಯಾಪ್ತಿ ಮತ್ತು ವಿಸ್ತಾರ ಅನನ್ಯವಾ ದುದು ಹಾಗೂ ಆಸಕ್ತಿ ಹುಟ್ಟಿಸುವಂತಹದು. ಹೊಸ ವಿಷಯಗಳನ್ನು ಹುಡುಕುತ್ತಾ ಸದಾ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದ ಅವರು, ಅಧ್ಯಯನಕ್ಕಾಗಿಯೇ ಒಂದು ಬೃಹತ್ ಗ್ರಂಥಾಲಯವನ್ನೇ ತೆರೆದಿದ್ದರು. ಅವರ ಗ್ರಂಥಾಲ ಯದಲ್ಲಿ ಕೈಯಲ್ಲಿ ಹಿಡಿದುಕೊಂಡು ಓದಬಹುದಾದ ಪುಸ್ತಕಗಳ ಸಂಗ್ರಹವೇ ೫೦,೦೦೦ಕ್ಕಿಂತಲೂ ಹೆಚ್ಚಾಗಿ ಇದೆ. ಅದಲ್ಲದೆ ಇ-ಫಾರ್ಮ್ ಅಂದರೆ ಡಿಜಿಟಲ್ ಫಾರ್ಮ್‌ನಲ್ಲಿ ಇರುವ ಪುಸ್ತಕಗಳ ಸಂಖ್ಯೆ ಅಸಂಖ್ಯ ಅಂತಾ ಹೇಳಬ ಹುದು. ಹೀಗೆ ಓದಿನ ಲೋಕದಲ್ಲಿ ವಿಹರಿಸುವ ಡಾ. ಕೆ.ಸಿ. ರಘು ಅವರ ಪುಸ್ತಕ ಲೋಕದ ಒಡನಾಟ ಅಗಾಧವೆನ್ನಬಹುದು. ಅವರಿಗೆ ಪುಸ್ತಕದ ನಂಟು ಬೆಳೆದದ್ದು ಹೀಗೆ.. ಅವರು ಚಿಕ್ಕವರಿದ್ದಾಗ ಅವರ ಅಣ್ಣ ನಿಯತಕಾಲಿಕೆಗಳು ಮತ್ತು ಪುಸ್ತಕಗಳನ್ನು ತಂದು ಓದುತ್ತಿದ್ದದು ಇವರಿಗೆ ಪ್ರೇರಣೆಯಾಯಿತು. ಅನಂತರ ಒಮ್ಮೆ ಅವರ ಕಾಲೇಜಿಗೆ ಕಡಲ ತೀರದ ಭಾರ್ಗವ-ಕಾರಂತರು ಬಂದು ಮಾತನಾಡಿದ್ದನ್ನು ಕೇಳಿ, ಅವರು ಪ್ರಸ್ತಾಪ ಮಾಡಿದ್ದ ಕೆಲವು ಪುಸ್ತಕಗಳನ್ನು ಖರೀದಿಸಿ ಓದಿದಾಗ ರಘು ಅವರಲ್ಲಿದ್ದ ಓದಿನ ಬಯಕೆ ಇಮ್ಮಡಿಯಾ ಯಿತು. ಹಾಗೆಯೇ, ನವಕರ್ನಾಟಕದವರು ಜಿಲ್ಲೆ ಜಿಲ್ಲೆಗಳಿಗೂ ಬಂದು ಪುಸ್ತಕ ಪ್ರದರ್ಶನ ಮಾಡಿ ಪುಸ್ತಕಗಳನ್ನು ಮಾರಾಟ ಮಾಡುತ್ತಿದ್ದರು. ಇದರಿಂದಾಗಿ, ಸುಮಾರು ನಾಲ್ಕು ದಶಕಗಳಲ್ಲಿ ಇವರ ಪುಸ್ತಕ ಸಂಗ್ರಹಾಲಯಕ್ಕೆ ೫೦,೦೦೦ಕ್ಕೂ ಹೆಚ್ಚು ಪುಸ್ತಕಗಳು ಸೇರ್ಪಡೆಗೊಂಡವು.
ರಘು ಅವರಿಗೆ ಅನೇಕ ವಿಷಯಗಳಲ್ಲಿ ಆಳವಾದ ಜ್ಞಾನವಿತ್ತು. ಕೆಲವರ ತಲೆಯಲ್ಲಿ ಬರೀ ಅಕ್ಷರಗಳಿರುತ್ತವೆ. ಇನ್ನೂ ಕೆಲವರ ತಲೆಯಲ್ಲಿ ಒಂದಷ್ಟು ಪುಸ್ತಕಗಳಿರುತ್ತವೆ. ಕೆ.ಸಿ. ರಘು ಅವರ ತಲೆಯಲ್ಲಿ ಗ್ರಂಥಾಲಯವೇ ಇತ್ತು. ಅವರೇ ಭಾರತದ ಒಂದು ಜೀವಂತ ವಿಶ್ವವಿದ್ಯಾನಿಲ ಯದಂತೆ ಇದ್ದರು. ತತ್ತ್ವಜ್ಞಾನ ಮತ್ತು ಮಾನವಿಕ ನೆಲೆಯ ವಿವಿಧ ವಿಷಯಗಳ ಮೇಲೆ ಅಪಾರ ಆಸಕ್ತಿ ಹೊಂದಿದ್ದರು. ಅವರ ವಿಷಯ ವಿಜ್ಞಾನ, ಅದನ್ನು ಮಂಡಿಸುವ ರೀತಿಯೇ ಅನನ್ಯ. ಅರಳು ಹುರಿದಂತಹ ಮಾತು. ಜನರನ್ನು ಹುರಿದುಂಬಿಸುತ್ತಿದ್ದರೇ ವಿನಾಃ ಎಂದೂ ಉರಿ ತುಂಬಿಸಿದವರಲ್ಲ. ಮೊಗದಲ್ಲಿ ಸದಾ ಸಿರಿನಗೆಯ ಚಿತ್ತಾರ. ಸದಾ ಲವಲವಿಕೆಯ ವ್ಯಕ್ತಿ. ಸ್ಪುರದ್ರೂಪಿ. ಎಂದೂ, ಯಾರನ್ನೂ ಕಂಬನಿ ಮಿಡಿಸಿದ್ದಿಲ್ಲ. ಅವರು ಹೋದ ಕಡೆಯಲ್ಲೆಲ್ಲಾ ಜೀವನೋತ್ಸಾಹದ ಬೆಳೆ ತೆಗೆಯುತ್ತಿದ್ದವರು. ಉತ್ಸಾಹದ ಊಟೆ. ಅಗಣಿತ ಪ್ರತಿಭೆಯ ಗಣಿ. ಕೃಷಿ ರಂಗದ ಸಂಕಟಗಳು ಹಾಗೂ ಪರಿಹಾರಗಳ ಬಗ್ಗೆ ಸಶಕ್ತವಾಗಿ ಮಾತನಾಡುತ್ತಿದ್ದ ಧ್ವನಿ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಇದ್ದರೂ ತಮ್ಮ ಬೇರುಗಳನ್ನು ಬಿಟ್ಟವರಲ್ಲ. ಎಲ್ಲಾ ರೀತಿಯಲ್ಲೂ ವೈಶಿಷ್ಟ್ಯಪೂರ್ಣ ವಿದ್ವತ್ತನ್ನು ಗಳಿಸಿರುವಂತ ವ್ಯಕ್ತಿ.


ಸಮಾಜದಲ್ಲಿನ ಸಮಕಾಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದ ಮಾನವತಾವಾದಿ ಡಾ. ಕೆ.ಸಿ. ರಘುರವರು. ಬಡವರ ಅದು ದುಡಿಯುವ ವರ್ಗದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದರು. ದೇಶದ ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಅಲ್ಲದೇ ಸರ್ಕಾರಗಳ ಆರ್ಥಿಕ ನೀತಿಗಳ ಬಗ್ಗೆ ಸ್ಪಷ್ಟ ಮತ್ತು ವಸ್ತುನಿಷ್ಠ ವಿಶ್ಲೇಷಣೆಯನ್ನು ನೀಡುತ್ತಿದ್ದ ಅವರು ಪ್ರಜಾತಾಂತ್ರಿಕ ಮತ್ತು ಧರ್ಮ ನಿರಪೇಕ್ಷ ಮೌಲ್ಯಗಳನ್ನು ಎತ್ತಿ ಹಿಡಿಯುತ್ತಿದ್ದ ರೀತಿ ಅನನ್ಯವಾಗಿತ್ತು. ಸಮಾಜದಲ್ಲಿನ ಅನ್ಯಾಯಗಳ ವಿರುದ್ಧ ಹೋರಾಡಲು ಯುವ ಜನರನ್ನು ಪ್ರೇರೇಪಿಸುತ್ತಿದ್ದರು. ಅವರ ಮಹತ್ತರ ಕಾರ್ಯಗಳನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಿವೆ. ಅವರ ಪತ್ನಿ ಆಶಾ ರಘು ಅವರು ಲೇಖಕಿ, ಕಾದಂಬರಿಕಾರ್ತಿ. ವಾಗ್ಮಿಯಾಗಿಯೂ ಗುರುತಿಸಿ ಕೊಂಡಿದ್ದ ಡಾ. ಕೆ.ಸಿ. ರಘು ಇದ್ದ ಕಡೆ ನಗುವಿನ ಬುಗ್ಗೆ ಸಾಮಾನ್ಯ. ಪ್ರತಿ ಮಾತಿಗೂ ಪಂಚ್ ಕೊಟ್ಟು ಮಾತನಾ ಡುತ್ತಿದ್ದ ಅವರು ಹಾಸ್ಯದ ಹೊನಲು ಹರಿಸುತ್ತಿದ್ದರು. ಯಾರೊಂದಿಗೂ ಜಗಳವಾಡದ, ಸಮಾಜಮುಖಿ ಕಾರ್ಯಗಳ ಜೊತೆಗಿರುತ್ತಿದ್ದ ಅನ್ನ-ಆಹಾರದ ಬಗ್ಗೆ ಅಪಾರ ತಿಳುವಳಿಕೆಯಿದ್ದ ರಘುರವರಿಗೆ ಶ್ವಾಸಕೋಶದ ಕ್ಯಾನ್ಸರ್ ಆಗಿದೆ ಎಂದಾಗ ಯಾರಿಗೂ ನಂಬಲಾಗಲಿಲ್ಲ. ಅವರಿಗೆ ಕ್ಯಾನ್ಸರ್ ಎಂದು ತಿಳಿದ ಅವರ ಅನೇಕ ಚಿರಪರಿಚಿತರ ಮನಸ್ಸು ವಿಹ್ವಲಗೊಂಡಿತ್ತು. ಕ್ಯಾನ್ಸರ್ ಬಂದ ನಂತರ ರಘುರವರು ಮೌನಿಯಾಗಿಬಿಟ್ಟರು.
ಅಗಾಧವಾದ ಜ್ಞಾನ ಸಂಪತ್ತು ಹೊಂದಿದ್ದ ರಘು ಅವರು ಮರಣ ಹೊಂದಿರುವುದು ನಾಡಿಗೆ ತುಂಬಲಾರದ ನಷ್ಟವಾಗಿದೆ. ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರಿಗೆ ೬೦ ವರ್ಷ ವಯಸ್ಸಾಗಿತ್ತು. ಅವರು ವಯಸ್ಸಲ್ಲದ ವಯಸ್ಸಿನಲ್ಲಿ ೨೦೨೩ರ ಅಕ್ಟೋಬರ್ ೧೫ರಂದು ಬೆಳಗ್ಗೆ ೭.೩೦ ಗಂಟೆಗೆ ಇಹಲೋಕ ತ್ಯಜಿಸಿದರು. ಅವರ ನಿರ್ಗಮನವು ನಾಡಿನ ಒಂದು ಜೀವಂತಿಕೆಯ ಸುಂದರ ಮನಸ್ಸಿನ ಕೊಂಡಿ ಕಳಚಿದಂತಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!