ಶಿವಮೊಗ್ಗ: ಆಡಳಿತ ಜನಸ್ನೇಹಿಯಾಗಿರಬೇಕು. ಜನರ ಸಂಕಷ್ಟಗಳಿಗೆ ಉತ್ತರವಾಗಬೇಕು ಎಂಬ ದೃಷ್ಟಿಯಿಂದ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.


ಅವರು ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಡಳಿತ ಜನರ ಬಳಿ ಹೋದಾಗ ಮಾತ್ರ ಜನರ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಜನತಾ ದರ್ಶನ ಹಮ್ಮಿಕೊಳ್ಳಲಾಗಿದೆ. ಪ್ರತಿ ತಿಂಗಳು ಜನತಾ ದರ್ಶನ ಏರ್ಪಡಿಸುವ ಉದ್ದೇಶವಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಜನತಾ ದರ್ಶನ ಆಯೋಜಿಸಿ ಜನರ ಅಹವಾಲುಗಳನ್ನು ಸ್ವೀಕರಿಸಿ ಅವರ ಸiಸ್ಯೆಗಳನ್ನು ಪರಿಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.


ಪ್ರತಿ ತಾಲೂಕಿನಲ್ಲಿಯೂ ಜನತಾ ದರ್ಶನ ಹಮ್ಮಿಕೊಳ್ಳುವ ಚಿಂತನೆ ಸರ್ಕಾರಕ್ಕಿದೆ. ಸ್ಥಳೀಯ ಶಾಸಕರ ನೇತೃತ್ವದಲ್ಲಿ ಅಧಿಕಾರಿಗಳ ತಂಡವೇ ತಾಲೂಕು ಕೇಂದ್ರಗಳಿಗೆ ಹೋಗಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಉತ್ತರ ನೀಡಬೇಕು. ಅಧಿಕಾರಿಗಳು ಸೋಮಾರಿತನ ಬಿಡಬೇಕು. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.


ಗಮನ ಸೆಳೆದ ಜನತಾ ದರ್ಶನ: ಇಂದು ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಜನತಾ ದರ್ಶನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಯಿತು. ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಸಭೆಗೆ ಹಾಜರಾಗಿದ್ದರು. ಪ್ರತಿಯೊಬ್ಬರಿಗೂ ಅರ್ಜಿಯ ರೂಪದಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಲು ವೇದಿಕೆಯಲ್ಲಿ ಅವಕಾಶ ನೀಡಲಾಗಿತ್ತು. ಮೊದಲು ವಿಕಲಚೇತನರಿಗೆ ನಂತರ ಮಹಿಳೆಯರಿಗೆ ಅನಂತರ ಗುಂಪುಗಳಿಗೆ ಹಾಗೂ ವೈಯಕ್ತಿಕ ಸಮಸ್ಯೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ವಿಕಲಚೇತನರ ಬಳಿಯೇ ಬಂದು ಸಚಿವರು ಅವರ ಅಹವಾಲುಗಳನ್ನು ಸ್ವೀಕರಿಸಿದರು.


ಆಸ್ಮಾ ಎಂ ಅಂಧ ಮಹಿಳೆ ತಮಗೆ ಎರಡೂ ಕಣ್ಣು ಕಾಣಿಸುವುದಿಲ್ಲ ನನಗೆ ಇದುವರೆಗೂ ಪಡಿತರ ಕಾರ್ಡ್ ಸಿಕ್ಕಿಲ್ಲ. ಅಧಿಕಾರಿಗಳಿಗೆ ಆದೇಶಿಸಿ ಪಡಿತರ ಚೀಟಿ ನೀಡಬೇಕು. ಮತ್ತು ಗೃಹಲಕ್ಷ್ಮಿ ಹಣವನ್ನು ಪಡೆಯುವಂತೆ ಅನುಕೂಲ ಮಾಡಿಕೊಡಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ಸಚಿವರ ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ರೇಷನ್ ಕಾರ್ಡ್ ಮಾಡಿಕೊಡುವಂತೆ ಸೂಚನೆ ನೀಡಿದರು.
ಕಾಂಗ್ರೆಸ್ ಮುಖಂಡರಾದ ಸುವರ್ಣಾ ನಾಗರಾಜ್ ಬಸ್ ನಿಲ್ದಾಣದಲ್ಲಿ ಕಸ ಗುಡಿಸುವವರ ಸಮಸ್ಯೆಗಳ ಬಗ್ಗೆ ಸಚಿವರ ಗಮನ ಸೆಳೆದರು. ಇಲ್ಲಿನ ಕಸ ಗುಡಿಸುವವರ ಕಷ್ಟವನ್ನು ಯಾರೂ ಕೇಳುತ್ತಿಲ್ಲ. ಪಿಎಫ್ ನೀಡಿಲ್ಲ. ಯೂನಿಫಾರ್ಮ್ ಕೊಡುತ್ತಿಲ್ಲ. ಹಲವು ಬಾರಿ ಸಮಸ್ಯೆಗಳನ್ನು ಹೇಳಿಕೊಂಡರೂ ಪ್ರಯೋಜನವಾಗಿಲ್ಲ. ಎಂದರು.


ಜಿಲ್ಲಾಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿ ಕೆಲಸ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ತಕ್ಷಣವೇ ನಿಯಮದಂತೆ ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ತಿಳಿಸಿದರು.


ಗೃಹಲಕ್ಷ್ಮಿ ಯೋಜನೆಯ ಹಣ ಇನ್ನೂ ಬಂದಿಲ್ಲ. ಕೊಳಚೆ ಪ್ರದೇಶಗಳಿಗೆ ನಿವೇಶನ ಪತ್ರ ನೀಡಿಲ್ಲ. ಹೊಸ ನ್ಯಾಯ ಬೆಲೆ ಅಂಗಡಿ ಬೇಕು. ಪಿಂಚಣಿ ಬರುತ್ತಿಲ್ಲ. ವಿದ್ಯುತ್ ಇಲ್ಲ. ಹೀಗೆ ಹತ್ತು ಹಲವು ಸಮಸ್ಯೆಗಳನ್ನು ಅರ್ಜಿಯ ಮೂಲಕ ನೂರಾರು ಜನರು ಸಚಿವರಿಗೆ ಮನವಿ ಮಾಡಿದರು. ಪ್ರತಿಯೊಬ್ಬರ ಸಮಸ್ಯೆಗಳನ್ನೂ ಆಲಿಸಿದ ಸಚಿವರು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲಿಯೇ ಕರೆಸಿ ಅರ್ಜಿದಾರರ ಎದುರಿಗೆಯೇ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

By admin

ನಿಮ್ಮದೊಂದು ಉತ್ತರ

error: Content is protected !!