ಶಿವಮೊಗ್ಗ : ಯುವ ಸಮೂಹದಲ್ಲಿ ಜೀವನ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ಮುಖ್ಯಸ್ಥರಾದ ಡಾ.ಹಿರೇಮಣಿ ನಾಯಕ್ ಹೇಳಿದರು.

ನಗರದ ಎನ್ಇಎಸ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜಿನ ವತಿಯಿಂದ ಶನಿವಾರ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಂತಿಮ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ಹಣದಿಂದ ಎಲ್ಲವನ್ನೂ ಗೆಲ್ಲಲು ಸಾಧ್ಯ ಎಂಬ ಭ್ರಮೆ ಬೇಡ. ನಮ್ಮ ನಡವಳಿಕೆಯೇ ಬದುಕಿನಲ್ಲಿ ಅಗ್ರಸ್ಥಾನ ಪಡೆಯಲಿದೆ. ಇಂದಿನ ಯುವ ಸಮೂಹ ಅಂತಹ ನೈತಿಕತೆಯ ಕೊರತೆಯನ್ನು ಎದುರಿಸುತ್ತಿದೆ. ನಮಗೆ ಎದುರಾಗುವ ಅನೇಕ ಜೀವನಾನುಭವ ಅತಿ ಹೆಚ್ಚು ಜ್ಞಾನ ನೀಡುತ್ತದೆ.

ಪದವೀಧರ ವಿದ್ಯಾರ್ಥಿಗಳಿಂದ ಸಮಾಜ ಅನೇಕ ನಿರೀಕ್ಷೆಗಳನ್ನು ಹೊಂದಿದೆ. ಸಮಾಜದ ಅವಶ್ಯಕತೆಗಳ ಅನುಗುಣವಾಗಿ ಕಲಿಕೆ ಮುಂದುವರೆಯಬೇಕಾಗಿದ್ದು, ಬಹುಮುಖಿ ಕೌಶಲ್ಯತೆಗಳನ್ನು ಹೊಂದಿದ ಪದವೀಧರರಾಗಿ.

ಬದುಕಿನಲ್ಲಿ ಸವಾಲುಗಳು ಸಹಜ. ಅಂತಹ ಸವಾಲುಗಳು ಯಶಸ್ಸಿಗೆ ಅಡೆತಡೆಯಾಗದಿರಲಿ. ಪ್ರತಿಯೊಬ್ಬ ಸಾಧಕರ ಹಿಂದೆ ತಮ್ಮದೇ ಸವಾಲುಗಳಿರುತ್ತದೆ. ಅಂತಹ ಸಾಧನೆಯ ಹಾದಿಗಳಿಂದ ಪ್ರೇರಣೆ ಪಡೆಯಿರಿ ಎಂದು ಕಿವಿಮಾತು ಹೇಳಿದರು. 

ಎನ್ಇಎಸ್ ಅಜೀವ ಸದಸ್ಯರಾದ ಡಾ.ಹೆಚ್.ಎಂ.ವಾಗ್ದೇವಿ ಮಾತನಾಡಿ, ಪದವಿಯ ನಂತರ ಮುಂದಿನ ಗುರಿಯ ಕುರಿತು ಅಗತ್ಯ ತಯಾರಿ ನಡೆಸಿ. ಯಶಸ್ಸು ಎಂಬುದು ಒಂದೇ ದಿನದಲ್ಲಿ ಸಿಗುವ ವಸ್ತುವಲ್ಲ. ಅದರ ಹಿಂದಿನ ಶ್ರಮ ನಮ್ಮಲ್ಲಿನ ಆತ್ಮವಿಶ್ವಾಸ ಮತ್ತು ಕೌಶಲ್ಯತೆಯ ಆಧಾರಿತವಾಗಿರುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕರಾದ ಎನ್.ಟಿ.ನಾರಾಯಣರಾವ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಿ.ಎಸ್.ಶಿವಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕಿ ವಿನುತಾ ಶೆಣೈ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

By admin

ನಿಮ್ಮದೊಂದು ಉತ್ತರ

error: Content is protected !!