ಸಾಗರ : ಇಲ್ಲಿನ ಇತಿಹಾಸ ಪ್ರಸಿದ್ದವಾದ ಶ್ರೀ ಮಹಾಗಣಪತಿ ದೇವಸ್ಥಾನದ ಕಳಪೆ ಕಾಮಗಾರಿ ವಿರುದ್ದ ಸೂಕ್ತ ತನಿಖೆ ನಡೆಸಬೇಕು ಮತ್ತು ಸಂಬಂಧಪಟ್ಟ ಗುತ್ತಿಗೆದಾರರಿಂದಲೆ ದೇವಸ್ಥಾನ ಪುನರ್ ನಿರ್ಮಾಣ ಮಾಡಿಸಿಕೊಡುವಂತೆ ಒತ್ತಾಯಿಸಿ ಬುಧವಾರ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗ ದಳದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಸಲ್ಲಿಕೆ ಸಂದರ್ಭದಲ್ಲಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಐ.ವಿ.ಹೆಗಡೆ, ಗಣಪತಿ ದೇವಸ್ಥಾನ ಜೀರ್ಣೋದ್ಧಾರ ಕಾಮಗಾರಿ ನಡೆದು ನಾಲ್ಕೈದು ವರ್ಷವಾಗಿದೆ. ಅಷ್ಟರೊಳಗೆ ಮೂಲಸ್ವರೂಪಕ್ಕಿಂತ ಹೆಚ್ಚಿನ ಸೋರಿಕೆ ಕಂಡು ಬಂದಿದೆ. ಕಳಪೆ ಕಾಮಗಾರಿಯಾಗಿದ್ದರೂ ಕಾಮಗಾರಿ ಮಾಡಿದವರ ಮೇಲೆ, ಮಾಡಿಸಿದವರ ಮೇಲೆ ಈತನಕ ಕ್ರಮ ಜರುಗಿಸಿಲ್ಲ
. ಅರೆಬರೆ ಕಾಮಗಾರಿ ಮಾಡಿರುವ ಶಿಲ್ಪಿಗೆ ಪೂರ್ಣ ಪ್ರಮಾಣದಲ್ಲಿ ಹಣ ಸಂದಾಯವಾಗಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ಘಂಟಾಮಂಟಪದಲ್ಲಿ ವಿಗ್ರಹ ಅಳವಡಿಸಿಲ್ಲ. ಮೂರ‍್ನಾಲ್ಕು ಕೋಟಿ ರೂ. ಹಣವನ್ನು ವ್ಯಯಿಸಿದ್ದು ಸಾರ್ವಜನಿಕ ಹಣ ಅಪವ್ಯಯವಾಗಿದೆ. ಆದ್ದರಿಂದ ಯಾರು ಕಾಮಗಾರಿ ಮಾಡಿದ್ದಾರೋ ಅವರ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಯಾರು ಕಳಪೆ ಕಾಮಗಾರಿ ಮಾಡಿದ್ದಾರೋ ಅವರಿಂದಲೇ ದೇವಸ್ಥಾನ ಪೂರ್ಣ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ನ್ಯಾಯವಾದಿ ಕೆ.ವಿ.ಪ್ರವೀಣ್ ಮಾತನಾಡಿ,
ಗಣಪತಿ ದೇವಸ್ಥಾನ ನಿರ್ಮಾಣ ಪ್ರಾರಂಭದಿಂದಲೂ ಕಳಪೆ ಎನ್ನುವ ದೂರು ಇದ್ದಾಗ್ಯೂ ಅಧಿಕಾರಿಗಳು ಗಮನ ಹರಿಸದೆ ಇರುವುದು ಖಂಡನೀಯ. ಶಿಲಾಮಯ ದೇವಸ್ಥಾನವನ್ನು ಮಳೆ ನೀರು ಒಳಗೆ ಬರುತ್ತದೆ ಎಂದು ತಗಡು ಹೊದೆಸಿ ತಗಡುಮಯ ದೇವಸ್ಥಾನ ನಿರ್ಮಿಸಲಾಗಿದೆ. ಕಳಪೆ ಕಾಮಗಾರಿ ನಡೆದಿದ್ದಾಗ್ಯೂ ಯಾವುದೇ ಕ್ರಮವನ್ನು ಗುತ್ತಿಗೆದಾರರ ಮೇಲೆ, ಅಧಿಕಾರಿಗಳ ಮೇಲೆ ತೆಗೆದುಕೊಂಡಿಲ್ಲ. ತಕ್ಷಣ ಗಣಪತಿ ದೇವಸ್ಥಾನವನ್ನು ಪುನರ್ ನಿರ್ಮಿಸಬೇಕು. ಕಳಪೆ ಗುತ್ತಿಗೆದಾರ ಮತ್ತು ಅಧಿಕಾರಿಗಳಿಂದಲೇ ಹಣ ವಸೂಲಿ ಮಾಡಬೇಕು ಎಂದು ಆಗ್ರಹಿಸಿದರು.
ಮಾತೃಮಂಡಳಿ ಅಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಒಂದು ಮನೆ ಕಟ್ಟಿದರೆ ಅದು ನೂರು ವರ್ಷ ಚೆನ್ನಾಗಿರಬೇಕು ಎಂದು ನಾವು ಬಯಸುತ್ತೇವೆ. ಅಂತಹದ್ದರಲ್ಲಿ ಶಿಲಾಮಯ ದೇವಸ್ಥಾನವನ್ನು ಮೂರ‍್ನಾಲ್ಕು ಕೋಟಿ ರೂ. ವೆಚ್ಚದಲ್ಲಿ ಕಟ್ಟಿ ಅದು ನಿರ್ಮಾಣವಾದ ಮೂರ‍್ನಾಲ್ಕು ವರ್ಷದಲ್ಲಿ ಸೋರುತ್ತಿದೆ ಎಂದರೆ ಕಾಮಗಾರಿ ಗುಣಮಟ್ಟ ಎಂತಹ ಕಳಪೆಯಾಗಿದೆ ಎನ್ನುವುದು ಗೊತ್ತಾಗುತ್ತದೆ.
ಗಣಪತಿ ದೇವಸ್ಥಾನದಲ್ಲಿ ಗಂಟೆ ಹೊಡೆದರೆ ಕರೆಂಟ್ ಹೊಡೆಯುತ್ತಿದೆ. ಇಂತಹ ಕೆಟ್ಟ ಕಾಮಗಾರಿ ಮಾಡಿ, ದೇವಸ್ಥಾನದ ಹಣವನ್ನು ಅಪವ್ಯಯ ಮಾಡಿದವರ ಬಗ್ಗೆ ನಿರ್ಧಾಕ್ಷಿಣ್ಯಕ್ರಮ ಜರುಗಿಸಲು ಒತ್ತಾಯಿಸಿದರು.
ಭಜರಂಗ ದಳದ ತಾಲ್ಲೂಕು ಸಂಚಾಲಕ ಸಂತೋಷ್ ಶಿವಾಜಿ, ಮಂಜುಗೌಡ, ಸುನೀಲ್, ಶೋಭಾ, ಪಲ್ಲವಿ, ಕಿರಣ್ ಗೌಡ, ಅರುಣ್ ಇನ್ನಿತರರು ಹಾಜರಿದ್ದರು.