ಶಿವಮೊಗ್ಗ ಜಿಲ್ಲೆಯ ಸಿಂಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಮೇಲ್ವಿಚಾರಣೆ ಸಮಿತಿ ರಚಿಸಿರುವುದನ್ನು ಸರ್ಕಾರ ಪುನರ್ ಪರಿಶೀಲಿಸಬೇಕು ಎಂದು ಹಿಂದುಳಿದ, ದಲಿತ ಮಠಾಧೀಶರ ಒಕ್ಕೂಟ ಮನವಿ ಮಾಡಿದೆ.
ಸಿಎಂ ಗೃಹ ಕಛೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಶ್ರೀನಾರಾಯಣ ಗುರು ಮಹಾ ಸಂಸ್ಥಾನದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ನೇತೃತ್ವದಲ್ಲಿ ಒಕ್ಕೂಟದ ನಿಯೋಗ ಬೇಟಿ ಮಾಡಿ ಶನಿವಾರ ಮನವಿ ಸಲ್ಲಿಸಿತು.
ಈಡಿಗ ಸಮುದಾಯದ ರಾಮಪ್ಪ ನೇತೃತ್ವದ ಧರ್ಮದರ್ಶಿ ಮಂಡಳಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳ ಮೂಲಕ ದೇವಸ್ಥಾನದ ಕೀರ್ತಿಯನ್ನು ಇನ್ನಷ್ಟು ಹೆಚ್ಚಸಿದೆ. ಸಣ್ಣಪುಟ್ಟ ಲೋಪದೋಷಗಳಿದ್ದರೆ ಸರಿಪಡಿಸಿಕೊಳ್ಳಲು ಹಾಗೂ ಎಂದಿನಂತೆ ಈ ಟ್ರಸ್ಟ್‌ಗೆ ಧಾರ್ಮಿಕ, ಸಾಮಾಜಿಕ ಕಾರ್ಯಗಳ ನಿರ್ವಹಣೆ ಜವಾಬ್ದಾರಿ ನೀಡಿ, ಜಿಲ್ಲಾಧಿಕಾರಿ ರಚಿಸಿದ ಮೇಲ್ವಿಚರಣೆ ಸಮಿತಿ ಕೈಬಿಡಬೇಕು ಎಂದು ಕೋರಿದ್ದು, ವಸ್ತುಸ್ಥಿತಿ ಮಾಹಿತಿ ತರಿಸಿಕೊಂಡು ಸೂಕ್ತ ಕ್ರಮವಹಿಸುವುದಾಗಿ ಬಿಎಸ್‌ವೈ ಭರವಸೆ ನೀಡಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಮಠಾಧೀಶರಾದ ಮಧುರೆ ಹೊಸದುರ್ಗ ಭಗೀರಥ ಪೀಠಾಧಿಪತಿ ಪುರುಷೋತ್ತಮನಂದ ಪುರಿ ಸ್ವಾಮಿ, ಕನಕಗುರು ಪೀಠದ ಈಶ್ವರಾನಂದ ಪುರಿ ಸ್ವಾಮಿ, ಕುಂಚಿಟಿಗ ಮಹಾ ಸಂಸ್ಥಾನದ ಶಾಂತವೀರ ಸ್ವಾಮೀಜಿ ಇನ್ನಿತರ ಮಠಾಧೀಶರು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!