ಸಾಗರ : ಕಾಂಗ್ರೇಸ್ ಪಕ್ಷ ನೀಡಿದ್ದ ಐದು ಗ್ಯಾರಂಟಿ ಪೈಕಿ ನಾಲ್ಕು ಈಡೇರಿದೆ. ಇನ್ನೊಂದು ಗ್ಯಾರಂಟಿ ಶೀಘ್ರದಲ್ಲೆ ಅನುಷ್ಟಾನಕ್ಕೆ ಬರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಇಲ್ಲಿನ ನಗರಸಭೆ ಆವರಣದಲ್ಲಿ ಮಂಗಳವಾರ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗೃಹಲಕ್ಷ್ಮೀ ಯೋಜನೆ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೇಸ್ ಸರ್ಕಾರ ಎಲ್ಲ ವರ್ಗಗಳ ಹಿತಕಾಯುವ ದೃಷ್ಟಿಯಿಂದ ಐದು ಗ್ಯಾರಂಟಿ ಘೋಷಣೆ ಮಾಡಿತ್ತು. ಇದು ರಾಷ್ಟ್ರದಲ್ಲಿಯೆ ಮೊದಲು ಎನ್ನುವ ಹೆಗ್ಗಳಿಕೆ ಸಹ ಪಡೆದಿದೆ. ಯೋಜನೆ ಜಾರಿಯಿಂದ ಸರ್ಕಾರಕ್ಕೆ ೫೪ಸಾವಿರ ಕೋಟಿ ರೂ. ವೆಚ್ಚ ತಗಲುತ್ತಿದ್ದು, ಅದನ್ನು ನಿಭಾಯಿಸಿಕೊಂಡು ಅಭಿವೃದ್ದಿಪರ ಆಲೋಚನೆಯನ್ನು ಕಾಂಗ್ರೇಸ್ ಸರ್ಕಾರ ಅನುಷ್ಟಾನಕ್ಕೆ ತಂದು ನುಡಿದಂತೆ ನಡೆದ ಸರ್ಕಾರ ಎನ್ನುವ ಮೆಚ್ಚುಗೆ ಗಳಿಸಿದೆ ಎಂದು ತಿಳಿಸಿದರು.
ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಮನೆಗೆ ತಿಂಗಳಿಗೆ ಕನಿಷ್ಟ ನಾಲ್ಕರಿಂದ ಐದುಸಾವಿರ ರೂ.ವರೆಗೆ ನಗದು ಸೇರಿದಂತೆ ವಿವಿಧ ಯೋಜನೆ ರಾಜ್ಯ ಸರ್ಕಾರ ತಲುಪಿಸುತ್ತಿದೆ. ಉಚಿತ ಪ್ರಯಾಣ ಯೋಜನೆ ರಾಜ್ಯದ ಮಹಿಳೆಯರ ಪ್ರಯಾಣಕ್ಕೆ ಅನುಕೂಲ ಕಲ್ಪಿಸಿದ್ದು, ಸ್ವತಃ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆಯವರು ಯೋಜನೆಯನ್ನು ಪ್ರಶಂಸಿಸಿದ್ದಾರೆ. ಗ್ರಾಮೀಣ ಭಾಗಕ್ಕೆ
ಇನ್ನಷ್ಟು ಸರ್ಕಾರಿ ಬಸ್ ಕೊಡುವ ಉದ್ದೇಶ ಸರ್ಕಾರದ್ದಾಗಿದ್ದು, ಮುಂದಿನ ಒಂದೂವರೆ ತಿಂಗಳಿನಲ್ಲಿ ಸುಮಾರು ೪ಸಾವಿರ ಬಸ್ ಖರೀದಿ ಮಾಡುವ ಚಿಂತನೆ ಸರ್ಕಾರ ನಡೆಸಿದೆ. ಗೃಹಲಕ್ಷ್ಮೀ ಯೋಜನೆ ನೊಂದಣಿಗೆ ಯಾರೂ ಹಣ ಪಡೆಯಬೇಡಿ. ಬಡವರಿಗಾಗಿಯೆ ಯೋಜನೆ ಜಾರಿಗೆ ತಂದಿದ್ದು, ಕ್ರಮ ಜರುಗಿಸಲಾಗುತ್ತದೆ. ಸಾಗರ ನಗರ ವ್ಯಾಪ್ತಿಯಲ್ಲಿ ೫ ಸೇವಾ ಕೇಂದ್ರವನ್ನು ತೆರೆಯಲಾಗಿದ್ದು
ಮಹಿಳೆಯರು ನೊಂದಣಿ ಮಾಡಿಸಿಕೊಳ್ಳಲು ಸಲಹೆ ನೀಡಿದರು. ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಪೌರಾಯುಕ್ತ ಸಿ.ಚಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ನಗರಸಭೆ ಸದಸ್ಯರಾದ ಗಣಪತಿ ಮಂಡಗಳಲೆ, ಸೈಯದ್ ಜಾಕೀರ್, ಮಧುಮಾಲತಿ, ಸಬೀನಾ ತನ್ವೀರ್, ಪ್ರಮುಖರಾದ ಸುರೇಶಬಾಬು, ರವಿಕುಮಾರ್, ಕೆ.ಸಿದ್ದಪ್ಪ ಇನ್ನಿತರರು ಹಾಜರಿದ್ದರು