ಶಿವಮೊಗ್ಗ, ಜುಲೈ 21,
      ಸಾಂಕ್ರಾಮಿಕ ರೋಗಗಳನ್ನು ಹರಡುವ ಸೊಳ್ಳೆಗಳ ನಿಯಂತ್ರಣ ಮತ್ತು ಮುಂಜಾಗ್ರತಾ ಕ್ರಮಗಳ ಕುರಿತು ಶಿಕ್ಷಕರು ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸಿ, ಮಾರ್ಗದರ್ಶನ ನೀಡಿದಲ್ಲಿ ಸಾಂಕ್ರಾಮಿಕ ರೋಗಗಳನ್ನು ಸಾಕಷ್ಟು ತಡೆಗಟ್ಟಬಹುದು ಎಂದು ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಶಿಕ್ಷಕರಿಗೆ ತಿಳಿಸಿದರು.


    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ಪ್ರಯುಕ್ತ ಇಂದು ಡಿಹೆಚ್‍ಓ ಕಚೇರಿ ಸಭಾಂಗಣದಲ್ಲಿ ಮಲೇರಿಯಾ ಸಾಂಕ್ರಾಮಿಕ ರೋಗದ ಕುರಿತು ಪ್ರೌಢಶಾಲಾ ಶಿಕ್ಷಕರುಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


      ರೋಗ ಬಂದ ಮೇಲೆ ಗುಣಪಡಿಸುವುದಕ್ಕಿಂತ ರೋಗ ಬಾರದಂತೆ ಮುಂಜಾಗೃತೆ ವಹಿಸುವುದು ಉತ್ತಮ. ಅದೇ ರೀತಿ ರೋಗವಾಹಕ ಸೊಳ್ಳೆಗಳಿಂದ ರೋಗ ಹರಡದಂತೆ ಕ್ರಮ ವಹಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಪಡೆದ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು.


      ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ಸಮುದಾಯದಲ್ಲಿ ರೋಗ ನಿಯಂತ್ರಣ ಕುರಿತು ತಿಳುವಳಿಕೆ ನೀಡುತ್ತಾರೆ. ಶಾಲೆ ಮತ್ತು ಮನೆ ಸುತ್ತಮುತ್ತ ಸ್ವಚ್ಚತೆಯನ್ನು ಕಾಪಾಡಿ, ಸೊಳ್ಳೆಗಳು ಉತ್ಪತ್ತಿಯಾಗದಂತೆ ಕ್ರಮ ಕೈಗೊಳ್ಳಬೇಕು. ಈ ಸಮಯದಲ್ಲಿ ಸೊಳ್ಳೆಯ ಹೆಚ್ಚಳ ಇದ್ದು ಶೀತ, ಕೆಮ್ಮು, ಜ್ವರ, ಮದ್ರಾಸ್ ಕಣ್ಣು, ಇತ್ಯಾದಿ ಆರೋಗ್ಯ ಸಮಸ್ಯೆ ಇದ್ದು ಶಾಲೆಗಳ ಮುಖಾಂತರ ಮುನ್ನೆಚ್ಚರಿಕೆ ವಹಿಸುವುದು ನಮ್ಮ ಜವಾಬ್ದಾರಿ. ಸೊಳ್ಳೆ ನಿರ್ವಹಣೆ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿರುವ ಸ್ಪರ್ಧೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದರು.

ಸ್ತಾವಿಕವಾಗಿ ಮಾತನಾಡಿ, ಮಲೇರಿಯಾ, ಡೆಂಗ್ಯು, ಚಿಕುನ್‍ಗುನ್ಯದಂತಹ ರೋಗಗಳು ಅನೇಕ ಜಾತಿಯ ರೋಗವಾಹಕ ಸೊಳ್ಳೆಗಳ ಕಡಿತದಿಂದ ಉಂಟಾಗುತ್ತದೆ. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸ್ವಚ್ಚವಾಗಿಟ್ಟುಕೊಳ್ಳುವುದು ಸೇರಿದಂತೆ ಮುಂಜಾಗರೂಕತಾ ಕ್ರಮಗಳಿಂದ ಇದರಿಂದ ಪಾರಾಗಬಹುದು. ಹಾಗೂ ಜ್ವರ ಇನ್ನಿತರೆ ಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರನ್ನು ಭೇಟಿ ಮಾಡಿ ಚಿಕಿತ್ಸೆ ಪಡೆಯಬೇಕು. ಈ ವರ್ಷ 8 ಮಲೇರಿಯಾ ಪ್ರಕರಣಗಳಿವೆ. ಡೆಂಗ್ಯು ಬಗ್ಗೆ ಹೆಚ್ಚಿನ ಭೀತಿ ಇದೆ. ಭಯ ಪಡುವ ಅವಶ್ಯಕತೆ ಇಲ್ಲ, ಸೂಕ್ತ ಮುನ್ನೆಚ್ಚರಿಕೆ ಕೈಗೊಂಡು, ರೋಗ ಲಕ್ಷಣ ಕಂಡ ತಕ್ಷಣ ಚಿಕಿತ್ಸೆ ಪಡೆಯಬೇಕೆಂದು ಸಲಹೆ ನೀಡಿದ ಅವರು ಜಿಲ್ಲೆಯಲ್ಲಿ ಕ್ಷೇತ್ರದಲ್ಲಿ ಅನೇಕ ಕಾರ್ಯಕರ್ತರು, 211 ಸಮುದಾಯ ಅಧಿಕಾರಿಗಳು ಸಾಂಕ್ರಾಮಿಕ ರೋಗ ನಿರ್ವಹಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.


         ಶಿವಮೊಗ್ಗ ಬಿಇಓ ನಾಗರಾಜ್ ಮಾತನಾಡಿ, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಗಳ ಕುರಿತು ಶಿಕ್ಷಕರಿಗೆ ತರಬೇತಿ ನೀಡುವುದು ಅವಶ್ಯಕ ಮತ್ತು ಉಪಯುಕ್ತವಾಗಿದೆ. ಈ ಕುರಿತು ಸಮುದಾಯದಲ್ಲಿ ಮಾಹಿತಿ-ಪ್ರಚಾರ ನೀಡಲು ವಿದ್ಯಾರ್ಥಿಗಳು ಉತ್ತಮ ಮಾಧ್ಯಮವಾಗಿದ್ದಾರೆ. ವಿಜ್ಞಾನ ಶಿಕ್ಷಕರನ್ನು ಈ ತರಬೇತಿಗೆ ಆಯ್ಕೆ ಮಾಡಿಕೊಂಡಿದ್ದು ಅವರು ವಿದ್ಯಾರ್ಥಿಗಳಿಗೆ ಈ ಬಗ್ಗೆ ಮನದಟ್ಟು ಮಾಡಿಸುವರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಕೂಡ ಅರಿವು ಮೂಡಿಸುವಲ್ಲಿ ಸಕ್ರಿಯವಾಗಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಅಭಿರುಚಿ ಬೆಳೆಸುತ್ತಿದೆ ಎಂದರು.
         ಮಳೆಗಾಲ ಪ್ರಾರಂಭ ಮತ್ತು ನಂತರ ಮಲೇರಿಯಾ, ಇತರೆ ಸಾಂಕ್ರಾಮಿಕ ರೋಗ ಪ್ರಸರಣ ಹೆಚ್ಚಾಗುವುದರಿಂದ ಸಮೂಹ ಮಟ್ಟದಲ್ಲಿ ಜಾಗೃತಿ ಹೆಚ್ಚಿಸಲಾಗುವುದು. ರೋಗವಾಹಕ ಸೊಳ್ಳೆಗಳ ನಿಯಂತ್ರಣ, ಸಾಂಕ್ರಾಮಿಕ ರೋಗಗಳ ಲಕ್ಷಣ, ಚಿಕಿತ್ಸೆ ಕುರಿತು ಮಾಸಾಚರಣೆಯಲ್ಲಿ ಜಾಗೃತಿ ಮೂಡಿಸಲಾಗುವುದು. ಮಲೇರಿಯಾ, ಡೆಂಗ್ಯು, ಮೆದುಳುಜ್ವರ ನಿಯಂತ್ರಣದಲ್ಲಿ ಶಾಲಾ ಮಕ್ಕಳ ಪಾತ್ರ ಹೆಚ್ಚಿದ್ದು, ಅವರಿಗೆ ತಿಳುವಳಿಕೆ ನೀಡಿದರೆ ಇಡೀ ಸಮುದಾಯಕ್ಕೆ ಅವರು ಮಾಹಿತಿ ನೀಡುವರು. ಈ ಉದ್ದೇಶದಿಂದ ರೋಗವಾಹಕಗಳಿಂದ ಹರಡುವ ರೋಗಗಳ ಕುರಿತು ಅವರಿಗೆ ಶಿಕ್ಷಕರ ಮೂಲಕ ಸವಿವರವಾದ ಮಾಹಿತಿ ನೀಡಿ ‘ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ’ ಸ್ಪರ್ಧೆಯನ್ನು 5 ರಿಂದ 7ನೇ ತರಗತಿ ಹಾಗೂ 8 ರಿಂದ 10 ನೇ ತರಗತಿ ಎರಡು ವಿಭಾಗಗಳಲ್ಲಿ ಏರ್ಪಡಿಸಲಾಗಿದೆ.  ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದವರಿಗೆ ಆಗಸ್ಟ್ 20 ರ ವಿಶ್ವ ಸೊಳ್ಳೆ ದಿನಾಚರಣೆಯಂದು ಜಿಲ್ಲಾ ಮಟ್ಟದ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಣೆ ಮಾಡಲಾಗುವುದು.
                   – ಡಾ.ಗುಡುದಪ್ಪ ಕಸಬಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ

     ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಂಯೋಜಕ ರಾಘವೇಂದ್ರ ವಿ.ಟಿ.ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಸಾಂಕ್ರಾಮಿಕ ರೋಗ ನಿರ್ವಹಣೆ ಕುರಿತು ಶಿಕ್ಷಕರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಹಾಲಸ್ವಾಮಿ, ವಿಜ್ಞಾನ ಮತ್ತು ಇತರೆ ಸಹಶಿಕ್ಷಕರು ಪಾಲ್ಗೊಂಡಿದ್ದರು.
     ತಮ್ಮಡಿಹಳ್ಳಿ ಸಹಶಿಕ್ಷಕ ಪ್ರಕಾಶ್ ಪ್ರಾರ್ಥಿಸಿದರು. ಡಿಹೆಚ್‍ಇಓ ಡೊಡ್ಡವೀರಪ್ಪ ನಿರೂಪಿಸಿದರು. ಟಿಹೆಚ್‍ಓ ಡಾ.ಚಂದ್ರಶೇಖರ್ ವಂದಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!