ಸ್ಥಳೀಯ ಸಂಸ್ಥೆಗಳ ಸಹಕಾರದೊಂದಿಗೆ ಪಟ್ಟಣದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದಲ್ಲಿ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ’ನಮ್ಮ ಮೇಲೆ ಭರವಸೆ ಇಟ್ಟು ಜನರು ಆಯ್ಕೆ ಮಾಡಿದ್ದಾರೆ.
ಜನರ ಜತೆ ಇದ್ದು ಕೆಲಸ ಮಾಡುವೆ. ಮತದಾರರು, ಪಕ್ಷದ ಹೈಕಮಾಂಡ್ ಜವಾಬ್ದಾರಿಯುತ ಸ್ಥಾನ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಲಾಗುವುದು’ ಎಂದರು.
ಪಟ್ಟಣ ಪಂಚಾಯಿತಿ ನೂತನ ಕಟ್ಟಡ, ವಾಣಿಜ್ಯ ಸಂಕೀರ್ಣ ಕಟ್ಟಡ, ಕುಡಿಯುವ ನೀರಿನ ಯೋಜನೆ, ನೆಹರೂ ಕ್ರೀಡಾಂಗಣದ ಅಭಿವೃದ್ಧಿ, ಪಟ್ಟಣ ಪಂಚಾಯಿತಿ ನೌಕರರಿಗೆ ವಸತಿ ಗೃಹ, ಹೈಮಾಸ್ಟ್ ದೀಪ ಅಳವಡಿಕೆ ಸೇರಿದಂತೆ ೩೮ ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಾಗಿ ಸಚಿವರಲ್ಲಿ ಮನವಿ ಮಾಡಲಾಯಿತು.
’ಈ ಹಿಂದೆ ಶಾಸಕನಾಗಿದ್ದಾಗ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದು, ಇನ್ನೂ ಅಭಿವೃದ್ಧಿ ಕೆಲಸಗಳು ಬಾಕಿ ಇದ್ದು, ಹಂತ ಹಂತವಾಗಿ ಕೈಗೊಳ್ಳಲಾಗುವುದು. ಮಧು ಬಂಗಾರಪ್ಪ ಸಚಿವರಾಗಿರುವುದರಿಂದ ಅಭಿವೃದ್ಧಿಗೆ ವೇಗ ಸಿಗಲಿದೆ’ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಹಾಲಗದ್ದೆ ಉಮೇಶ್, ಅಶ್ವಿನಿ, ಗುರುರಾಜ್ ಬಜಾಜ್, ಗುಲಾಬಿ ಮರಿಯಪ್ಪ, ಕೃಷ್ಣವೇಣಿ, ಸಿಂಥಿಯಾ ಶೆರಾವೋ, ನಾಗಪ್ಪ, ಶಾಹೀನಾ, ಚಂದ್ರಕಲಾ ಇತರರಿದ್ದರು.