ಶಿವಮೊಗ್ಗ: ಹಳೆಯ ಬಾಕ್ಸ್ ಚರಂಡಿಯನ್ನು ತೆರವುಗೊಳಿಸದೆ ಅದಕ್ಕೆ ತಾಗಿ ಹೊಸ ಬಾಕ್ಸ್ ಚರಂಡಿಯ ಕಾಮಗಾರಿ ಕೈಗೊಂಡಿದ್ದು, ರಸ್ತೆಯನ್ನು 1.5 ಅಡಿ ಅತಿಕ್ರಮಣಗೊಳಿಸಿ ಮಾಡುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ಅಶೋಕ್ ನಗರ ನಿವಾಸಿಗಳು ಖಂಡಿಸಿ ಸ್ಥಳಕ್ಕೆ ಅಧಿಕಾರಿಗಳು ಬಂದು ಪರಿಶೀಲನೆ ನಡೆಸುವವರೆಗು ಕಾಮಗಾರಿ ನಿಲ್ಲಿಸುವಂತೆ ಆಗ್ರಹಿಸಿದರು.
ಅಶೋಕ ನಗರ ಮುಖ್ಯ ರಸ್ತೆಯಲ್ಲಿ ಅಮೃತ ಯೋಜನೆಯಡಿಯಲ್ಲಿ 60 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿರುವ ಈ ಕಾಮಗಾರಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ. ಪಕ್ಕದಲ್ಲಿ ಪೊಲೀಸ್ ವಸತಿ ಗೃಹದ ತಂತಿಬೇಲಿಯಿದ್ದು, ಪೊಲೀಸ್ ಅಧಿಕಾರಿಯವರು ಹೇಳಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಎಲ್ಲಾ ನಿಯಮಗಳನ್ನು ಮೀರಿ ಗುತ್ತಿಗೆದಾರರ ರಸ್ತೆಯನ್ನು ಅತಿಕ್ರಮಿಸಿ ಕಳಪೆ ಕಾಮಗಾರಿ ಮಾಡುತ್ತಿದ್ದಾರೆ. ನಗರದ ಅನೇಕ ಕಡೆ ಈ ರೀತಿಯಾಗಿದೆ. ಕಾಮಗಾರಿ ಪ್ರಾರಂಭದಲ್ಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಪರ್ಕಿಸಿದರೂ ಕೂಡ ಯಾರೂ ಕೂಡ ಇದುವರೆಗೆ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿಲ್ಲ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್ ಆರೋಪಿಸಿದರು.
ಸ್ಥಳೀಯ ಜನರ ಒತ್ತಾಯದ ಮೇರೆಗೆ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸಿದ ಅವರು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೆ ಆಯುಕ್ತರು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸಬೇಕು. ಇಲ್ಲವಾದರೆ ಅವೈಜ್ಞಾನಿಕ ಕಾಮಗಾರಿಯ ವಿರುದ್ದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಯೋಗೀಶ್‌ಗೌಡ, ರವಿ ಸೇರಿದಂತೆ ಸ್ಥಳೀಯ ಮುಖಂಡರು ಇದ್ದರು.