ಶಿವಮೊಗ್ಗ,
ರಕ್ತದಾನವು ಶ್ರೇಷ್ಠವಾದ ದಾನವಾಗಿದ್ದು, ರಕ್ತದಾನಕ್ಕೆ ಬದಲಿ ವ್ಯವಸ್ಥೆ ಇರುವುದಿಲ್ಲ. ಇಂತಹ ಚಿಕ್ಕ ಪಟ್ಟಣದಲ್ಲಿ ಇಷ್ಟೊಂದು ಸಂಸ್ಥೆಗಳು ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಸ್ಪೂರ್ತಿ ಫೌಂಡೇಶನ್, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಜೂ.28 ರಂದು ವಾಲ್ಮೀಕಿ ಭವನದಲ್ಲಿ ರಕ್ತದಾನ ಶಿಬಿರ ಮತ್ತು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಗಿದ್ದು, ರಕ್ತದಾನ ಮಾಡುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸ್ಪೂರ್ತಿ ಫೌಂಡೇಶನ್ ಅಧ್ಯಕ್ಷ ಡಾ|| ಪ್ರಭು ಸಾಹುಕಾರ್ ಮಾತನಾಡಿ, ಸ್ಪೂರ್ತಿ ಫೌಂಡೇಶನ್ ಒಂದು ಸಂಸ್ಥೆಯಾಗಿರದೇ ಸಮೂಹವಾಗಿದೆ. 2013 ನೇ ಸಾಲಿನಿಂದ ಇಲ್ಲಿಯವರೆಗೆ ಅನೇಕ ರಕ್ತದಾನ ಶಿಬಿರಗಳು, ಆರೋಗ್ಯ ತಪಾಸಣೆ ಶಿಬಿರಗಳು, ಪರಿಸರ ಕಾಳಜಿ ಕಾರ್ಯಕ್ರಮಗಳು ಇನ್ನೂ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಈ ಭಾಗದ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿ ಶ್ವೇತ ಅವರಿಗೆ ಸ್ಪೂರ್ತಿ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಹಂಸರಾಜ್ ಜೈನ್, ಆದಿತ್ಯ ಗ್ಯಾಸ್ ಮಾಲಿಕರಾದ ಅಗಡಿ ಅಶೋಕ್, ಡಿ.ವೈ.ಎಸ್.ಪಿ ಶಿವಾನಂದ್ ಮದರಕಂಡಿ, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶಿವಯೋಗಿ ಗೌಡ, ಶಿರಾಳಕೊಪ್ಪ ವ್ಯಾಪ್ತಿಯ ಎಲ್ಲಾ ಸಂಘ-ಸಂಸ್ಥೆಗಳು, ವಿವಿಧ ಸರ್ಕಾರಿ ಇಲಾಖೆಗಳು, ಶಾಲಾ-ಕಾಲೇಜುಗಳು ಭಾಗವಹಿಸಿ, ಕಾರ್ಯಕ್ರಮದಲ್ಲಿ ಇನ್ನಿತರರು ಉಪಸ್ಥಿತರಿದ್ದರು.