ಶಿವಮೊಗ್ಗ: ಸುಳ್ಳು ಭರವಸೆಗಳನ್ನು ನೀಡಿದ ಕೇಂದ್ರ ಸರ್ಕಾರದ ವಿರುದ್ಧ ಜು.೩ರಂದು ಮಹಾತ್ಮಾ ಗಾಂಧಿ ಪಾರ್ಕಿನ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಅವರು ಇಂದು ಜಿಲ್ಲಾಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ,ಕೇಂದ್ರ ಸರ್ಕಾರ ಕಳೆದ ೯ ವರ್ಷಗಳ ಹಿಂದೆಯೇ ಹಲವು ಭರವಸೆಗಳನ್ನು ನೀಡಿತ್ತು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದರು. ಅದರಂತೆ ೯ ವರ್ಷದಲ್ಲಿ ೧೮ ಕೋಟಿ ಉದ್ಯೋಗಗಳನ್ನು ನೀಡಬೇಕಿತ್ತು. ಆದರೆ ನೀಡುವುದಿರಲಿ, ಇರುವ ಉದ್ಯೋಗಗಳನ್ನೇ ಕಸಿದುಕೊಂಡಿದೆ ಎಂದು ಆರೋಪಿಸಲಾಗಿದೆ.
ಪ್ರಧಾನಿ ಮೋದಿಯವರು ವಿದೇಶದಲ್ಲಿರುವ ಕಪ್ಪು ಹಣವನ್ನುತಂದು ಪ್ರತಿಯೊಬ್ಬರ ಅಕೌಂಟಿಗೆ ೧೫ ಲಕ್ಷ ಜಮಾ ಮಾಡುತ್ತೇವೆ ಎಂದಿದ್ದರು. ಈ ಬಗ್ಗೆ ಪ್ರಶ್ನೆ ಮಾಡಿದರೆಬಿಜೆಪಿಯವರು ಅವರೇನು ಗ್ಯಾರಂಟಿ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡುತ್ತಾರೆ. ಬರೆದುಕೊಟ್ಟರೆ ಮಾತ್ರ ಕೊಡಬೇಕೆ ಮಾತು ಕೊಟ್ಟರೆ ಕೊಡಬಾರದೆ ಎಂದ ಅವರು, ೧೫ ಲಕ್ಷವನ್ನು ಮೊದಲು ಕೊಡಲಿ. ಆಮೇಲೆ ಕಾಂಗ್ರೆಸ್ಸಿನ ಗ್ಯಾರಂಟಿ ಬಗ್ಗೆ ಮಾತನಾಡಲಿ. ೧೫ ಲಕ್ಷಕೊಟ್ಟರೆ ಕಾಂಗ್ರೆಸ್ಸಿನ ಎಲ್ಲರೂ ಕೂಡ ಅದನ್ನು ರಾಜ್ಯ ಸರ್ಕಾರಕ್ಕೆ ವಾಪಾಸು ಮಾಡುತ್ತೇವೆ ಎಂದರು.
ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ಮಾಡಲು ಈಗಾಗಲೇ ಸರ್ಕಾರ ನಿರ್ಧರಿಸಿದೆ. ಪಿಎಸೈ ಹಗರಣವನ್ನು ತನಿಖೆ ಮಾಡಬೇಕು. ಈ ಹಗರಣದಲ್ಲಿಯೇ ದುಡ್ಡು ಮಾಡಿಕೊಂಡವರು ತೀರ್ಥಹಳ್ಳಿಯ ಚುನಾವಣೆಗೆ ಸುರಿದಿದ್ದರು. ಆ ಹಗರಣದ ದುಡ್ಡಲ್ಲೇ ನಾನು ಸೋತಿದ್ದೇನೆ. ದಿವ್ಯ ಹಾಗರಗಿ ಆರತಿ ಮಾಡಿದ್ದು ಗೊತ್ತಿಲ್ಲವೇ, ಸ್ಯಾಂಟ್ರೋ ರವಿ ಆರ್.ಜ. ಪಾಟೀಲ್ ಯಾರು? ಇವರು ತೀರ್ಥಹಳ್ಳಿಯಲ್ಲಿ ೭೦ ಕೋಟಿ ಹಣ ಖರ್ಚು ಮಾಡಿದ್ದು ಗೊತ್ತೇ ಇದೆ ಎಂದು ಛೇಡಿಸಿದ ಅವರು, ಶೇ.೪೦ರ ಕಮಿಷನ್ ಹಗರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯಲ್ಲಿ ನಡೆದ ಎಲ್ಲಾ ಹಗರಣಗಳನ್ನು ತನಿಖೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಾನು ಪ್ರತ್ಯೇಕವಾಗಿಯೇ ಒತ್ತಾಯಿಸುತ್ತೇನೆ ಎಂದರ.
ದೇಶದ ಎಲ್ಲಾ ರಾಜ್ಯಗಳನ್ನು ಒಕ್ಕೂಟ ವ್ಯವಸ್ಥೆಯಲ್ಲಿ ನೋಡಿಕೊಳ್ಳಬೇಕಾದುದು ಪ್ರಧಾನಿಯವರ ಜವಾಬ್ದಾರಿಯಾಗಿದೆ. ಈಗ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡಲ್ಲ ಎಂದು ಹೇಳುತ್ತಿದ್ದಾರೆ. ಇದು ಒಕ್ಕೂಟ ವ್ಯವಸ್ಥೇಗೆ ಧಕ್ಕೆ ಉಂಟಾಗುವುದಿಲ್ಲವೇ ಎಂದರು.\
ರಾಜ್ಯ ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಗ್ಯಾರಂಟಿಯ ಬಗ್ಗೆ ಪ್ರಶ್ನೆ ಮಾಡುವ ನೈತಿಕ ಹಕ್ಕೇ ಇಲ್ಲ. ಮತ್ತು ಪ್ರಶ್ನೆ ಮಾಡುವ ರೀತಿಯು ಕೂಡ ಸರಿ ಇಲ್ಲ. ಅಶೋಕ್ ಅಂತವರು ಸಗಣಿ ತಲೆಯಲ್ಲಿ ಇಟ್ಟುಕೊಂಡಿದ್ದಾರಾ ಎಂದು ಕೇಳುತ್ತಾರೆ. ಇದು ಅವರ ಸಂಸ್ಕೃತಿಯನ್ನು ತಿಳಿಸುತ್ತದೆ. ಕಾಂಗ್ರೆಸ್ ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ಜಾರಿ ಮಾಡದೆ ಬಿಡುವುದಿಲ್ಲ. ಎಲ್ಲದಕ್ಕೂ ಒಂದು ಸಮಯವಿರುತ್ತದೆ. ಸ್ವಲ್ಪ ವಿಳಂಬವಾಗಿದ್ದಕ್ಕೆ ಈ ರೀತಿಯಲ್ಲಿ ಹುಂಬರಂತೆ ಬಿಜೆಪಿಗರು ವರ್ತಿಸುತ್ತಿದ್ದಾರೆ. ಬಿ. ಎಸ್. ಯಡಿಯೂರಪ್ಪನಂತವರು ಕೂಡ ಪ್ರತಿಭಟನೆ ಮಾಡುವುದಾಗಿ ತಿಳಿಸುತ್ತಾರೆ. ಅವರು ಕೊನೇ ಪಕ್ಷ ಜನವರಿ ತಿಂಗಳವರೆಗೂ ಕಾಯಬೇಕು ಎಂದರು.
ಜೀವನ ಭದ್ರತೆ ಇದ್ದವರೇ ಗ್ಯಾರಂಟಿಗಳಿಗೆ ಒತ್ತಾಯ ಮಾಡುತ್ತಿದ್ದಾರೆ. ಬಿಜೆಪಿ ಆರ್‌ಎಸ್‌ಎಸ್‌ನ ಭಾಗವೇ ಆಗಿದೆ. ನಾನು ಆರ್‌ಎಸ್‌ಎಸ್ನ ಅನೇಕ ಪುಸ್ತಕಗಳನ್ನು ಓದಿದ್ದೇನೆ. ಯಾವ ಪುಸ್ತಕದಲ್ಲೂ ಒಂದೇ ಒಂದು ಸಾಲು ಬಡವರ ಬಗ್ಗೆ ಧ್ವನಿ ಎತಿಲ್ಲ. ಅಸಮಾನತೆ ಬಗ್ಗೆ ತಿಳಿಸಿಲ್ಲ. ಗಾಂಧೀಜಿ ಬಗ್ಗೆ ವಿದೇಶದಲ್ಲಿ ಮಾತನಾಡುವ ಪ್ರಧಾನಿ ದೇಶದ ಒಳಗೆ ಮಾತನಾಡುತ್ತಿಲ್ಲ. ಗಾಂಧೀಜಿಯವರು ಹಿಂದು ಧರ್ಮವನ್ನು ಉಳಿಸಲು ಮುಂದಾದವರು. ಆದರೆ ಅಂಬೇಡ್ಕರ್ ಹಿಂದು ಧರ್ಮವನ್ನೇ ಬಿಟ್ಟವರು. ಅಂಬೇಡ್ಕರ್ ಬಗ್ಗೆ ವಿರೋಧ ಮಾಡುವ ಧೈರ್ಯವನ್ನು ಬಿಜೆಪಿಯ ನಾಯಕರು ಮಾಡುತ್ತಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ಪ್ರಸನ್ನಕುಮಾರ್, ಎನ್. ರಮೇಶ್, ಕಲೀಂ ಪಾಶಾ, ವಿಶ್ವನಾಥಕಾಶಿ, ಇಕ್ಕೇರಿ ರಮೇಶ್, ಮಧುಸೂದನ್, ಚೇತನ್, ಬಾಲಾಜಿ, ನಾಗರಾಜ್, ,ಮಂಜುನಾಥ್, ದುಗ್ಗಪ್ಪ ಗೌಡ, ಸ್ವರೂಪ್ ಮತ್ತಿತರರಿದ್ದರು.