ಶಿವಮೊಗ್ಗ : ಮಹಿಳಾ ಸಬಲೀಕರಣದಲ್ಲಿ ಶಿಕ್ಷಣವೇ ಮೊದಲ ಪ್ರಮುಖ ವಿಚಾರವಾಗಿದ್ದು ಮಹಿಳಾ ಶಿಕ್ಷಣದಿಂದ ಮಾತ್ರ ಉತ್ತಮ ಸಮುದಾಯ ನಿರ್ಮಾಣ ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅಭಿಪ್ರಾಯಪಟ್ಟರು.

ನಗರದ ಕಸ್ತೂರಬಾ ಬಾಲಿಕಾ ರಾಷ್ಟ್ರೀಯ ಪ್ರೌಢಶಾಲೆಯ ವತಿಯಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ 2023-24 ನೇ ಸಾಲಿನ ವಿದ್ಯಾರ್ಥಿನಿ ಸಂಘ ಉದ್ಘಾಟನಾ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರೌಢಶಾಲೆಯ ಮಟ್ಟದಲ್ಲಿ ವಿದ್ಯಾರ್ಥಿನಿಯರಲ್ಲಿ ಪ್ರಧಾನಿ, ನಾಯಕ ಎಂಬ ಚುನಾವಣಾ ಪ್ರಕ್ರಿಯೆ ನಡೆಸಿರುವುದು ಒಳ್ಳೆಯ ವಿಚಾರ. ವಿದ್ಯಾರ್ಥಿ ಜೀವನದ ಇಂತಹ ಪ್ರಕ್ರಿಯೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ನಾಯಕತ್ವ ಗುಣ ಪಡೆಯಲು ಸಹಕಾರಿ ಎಂದು ಹೇಳಿದರು.

ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕುಮಾರ ಚಲ್ಯ ಮಾತನಾಡಿ, ಯುವ ಪ್ರತಿಭೆಗಳನ್ನು ಸಾಂಗಿಕವಾಗಿ ಒಟ್ಟುಗೂಡಿಸುವ ಪ್ರಕ್ರಿಯೆಯಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇವತ್ತಿನ ಮಕ್ಕಳು ಎಲ್ಲವನ್ನು ಪ್ರಶ್ನಿಸಬಹುದಾದ ಕಾಲಘಟ್ಟದಲ್ಲಿದ್ದಾರೆ. ಎಲ್ಲಿ ನಾವಿರುವ ವಾತಾವರಣ ಏರಿಳಿತವಾಗುತ್ತದೆ ಅಲ್ಲಿ ಪ್ರಶ್ನಿಸುವ ಸಾಧ್ಯತೆಗಳು ಬರುತ್ತದೆ.

ಅಂಕಗಳನ್ನು ಗಳಿಸಿದವರು ಪ್ರತಿಭಾವಂತರೊ ಅಥವಾ ಜ್ಞಾನವನ್ನು ಪಡೆದವರು ಪ್ರತಿಭಾವಂತರೆ ಎಂಬ ಪ್ರಶ್ನೆಯಿದೆ. ಇಂದು ಪ್ರತಿಭಾವಂತರು ಸರಿಯಾದ ಅವಕಾಶಗಳು ಸಿಗದೆ ಅಸ್ಪ್ರಶ್ಯರಾಗಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಾವಂತರು ಗುರಿಯನ್ನು ಬೆನ್ನಟ್ಟಿ ಹೋಗಬೇಕಿದೆ.

ವ್ಯಕ್ತಿತ್ವ ವಿಕಸನದಲ್ಲಿ ಯಾವುದೇ ಜಾತಿ ಧರ್ಮ ಅಡ್ಡಿಯಾಗಬಾರದು. ಎಲ್ಲಿ ಅತಿ ಹೆಚ್ಚು ಬಡತನ, ಅವಮಾನಗಳಿರುತ್ತದೆ ಅಲ್ಲಿ ಯಶಸ್ಸಿನ ಪರಿಶ್ರಮ ಹೆಚ್ಚಿರುತ್ತದೆ. ಮನೆಯ ಸಾಂಸ್ಕೃತಿಕ ವಾತಾವರಣ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿ ಸಾಹಿತ್ಯ ಸಾಂಸ್ಕೃತಿಕ ವ್ಯಕ್ತಿತ್ವ ವಿಕಸನದ ಜವಾಬ್ದಾರಿ ಪೋಷಕರ ಮೇಲಿದೆ.

ಸರ್ಕಾರ ನಮಗೆ ಕೊಡುತ್ತಿರುವುದು ಸವಲತ್ತುಗಳಲ್ಲ ಅದು ಜವಾಬ್ದಾರಿ. ನಮ್ಮ ಕಣ್ಣಿಗೆ ತುಪ್ಪವನ್ನು ಸವರಿದ ಖಡ್ಗವನ್ನು ಇಂದಿನ ರಾಜಕೀಯ ವ್ಯವಸ್ಥೆಯಿಂದ ನೀಡಲಾಗುತ್ತಿದೆ. ತುಪ್ಪದ ಸವಿಗೆ ಖಡ್ಗವನ್ನು ನೆಕ್ಕುವಾಗ ಖಡ್ಗ ನಮ್ಮ ನಾಲಿಗೆಯನ್ನು ಕತ್ತರಿಸಬಹುದು ಎಂಬ ಅರಿವೆ ಇಲ್ಲದಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಹೆಚ್.ಸಿ.ಶಿವಕುಮಾರ್, ಕಸ್ತೂರಬಾ ಬಾಲಿಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಗಪ್ಪ, ಉಪ ಪ್ರಾಂಶುಪಾಲರಾದ ಉಮೇಶ್, ಕಾಲೇಜಿನ ಪ್ರಧಾನಿ ಕೆ.ವಿ.ಇಂಚರ, ವಿರೋಧ ಪಕ್ಷದ ನಾಯಕಿ ವೇದಿಕಾ.ಎನ್.ರಾಯ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಕಳೆದ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಅಭಿನಂದನೆ ಸಲ್ಲಿಸಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!