ಸೊರಬ: ಅಧಿಕಾರಿಗಳು ಜನಸ್ನೇಹಿಯಾಗಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದಲ್ಲಿ ಕ್ಷೇತ್ರ ತೊರೆಯುವುದು ಒಳಿತು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಮಧು ಬಂಗಾರಪ್ಪ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.


ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ತಾವು ವರ್ಗಾವಣೆ ಮಾಡುವುದಿಲ್ಲ. ಆದರೆ, ಜನ ಸ್ನೇಹಿ ಆಡಳಿತ ನೀಡಲು ಸಾಧ್ಯವಾಗದವರು ಮತ್ತು ಜನರಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಹಕಾರ ನೀಡಲು ಸಾಧ್ಯವಾಗದವರು ಕ್ಷೇತ್ರ ತೊರೆಯಲು ತಮ್ಮ ಅಭ್ಯಂತರವಿಲ್ಲ. ಇರುವ ಅಧಿಕಾರಿಗಳಿಂದ ಜನತೆ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ತಾಲೂಕಿನ ಅಭಿವೃದ್ಧಿಯನ್ನು ಬಯಸುತ್ತಿದ್ದೇನೆ. ಅಧಿಕಾರಿ ವರ್ಗದವರಿಗೆ ವಿನಾಃ ಕಾರಣ ತೊಂದರೆ ನೀಡುವ ಕೆಲಸಕ್ಕೆ ತಾವು ಕೈ ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಸೊರಬ ಪುರಸಭೆ ಮುಖ್ಯಾಧಿಕಾರಿ ಟಿ.ಎಸ್. ಗಿರೀಶ್ ವಿರುದ್ಧ ಅನೇಕ ದೂರುಗಳು ಕೇಳಿ ಬರುತ್ತಿವೆ. ಈ ನಿಟ್ಟಿನಲ್ಲಿ ಕಾರ್ಯವೈಖರಿಯಲ್ಲಿ ಬದಲಾವಣೆ ಮಾಡಿಕೊಂಡು ಕಾರ್ಯನಿರ್ವಹಿಸಬೇಕು ಹಾಗೂ ಪಕ್ಷಬೇಧ ಮರೆತು ಎಲ್ಲಾ ಪುರಸಭೆಯ ಜನಪ್ರತಿಗಳಿಗೆ ಹಾಗೂ ಸಾರ್ವಜನಿಕರಿಗೆ ಗೌರವ ನೀಡುವಂತೆ ಸೂಚನೆ ನೀಡಿದ ಅವರು, ಕ್ಷೇತ್ರದಲ್ಲಿ ತಾವು ಈ ಹಿಂದೆ ಶಾಸಕರಾಗಿದ್ದ ಅವಧಿಯಲ್ಲಿ ಅನಾವೃಷ್ಟಿ ಎದುರಾಗಿತ್ತು. ಅಧಿಕಾರಿ ವರ್ಗದವರ ಜೊತೆ ಸೇರಿ ಬರವನ್ನು ಸಮರ್ಥವಾಗಿ ಎದುರಿಸಿದ್ದೆವು. ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಅಗತ್ಯವಿದ್ದಲ್ಲಿ ಕೊಳವೆಬಾವಿ ಕೊರೆಸುವಂತೆ ತಿಳಿಸಿದರು.


ಕ್ಷೇತ್ರದ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಸೌಲಭ್ಯಗಳ ಕುರಿತು ಪಟ್ಟಿ ನೀಡಿದರೆ, ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಈ ನಿಟ್ಟಿನಲ್ಲಿ ಶಾಲಾ ಮುಖ್ಯಸ್ಥರುಗಳು ಇಲಾಖೆಗೆ ವರದಿ ಸಲ್ಲಿಸಿದರೆ, ತಾವು ಸ್ಪಂದನೆ ನೀಡುತ್ತೇನೆ. ಕ್ಷೇತ್ರವು ಸೇರಿದಂತೆ ರಾಜ್ಯದ ಸರ್ಕಾರಿ ಶಾಲೆಗಳ ಉನ್ನತಿಗೆ ಪ್ರಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು. ಇದಕ್ಕೆ ಇಲಾಖೆಯ ಅಧಿಕಾರಿಗಳ ಸ್ಪಂದನೆ ಹಾಗೂ ಸಮರ್ಪವಾಗಿ ಮಾಹಿತಿ ನೀಡುವ ಜವಾಬ್ದಾರಿ ಅತಿ ಮುಖ್ಯ ಎಂದರು.


ಟಿಎಚ್‌ಒ ಡಾ. ಪ್ರಭು ಸಾಹುಕಾರ್ ಮಾತನಾಡಿ, ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಹೆಚ್ಚುವರಿ ಡಯಾಲಿಸಿಸ್ ಯಂತ್ರಗಳ ಅಗತ್ಯವಿದೆ ಎಂದು ಸಚಿವರ ಗಮನಕ್ಕೆ ತಂದರು, ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇಲಾಖಾವಾರು ಸಿಬ್ಬಂದಿ ಕೊರತೆ ಮತ್ತು ಅಗತ್ಯವಿರುವ ಮೂಲ ಸೌಲಭ್ಯಗಳ ವರದಿ ತಯಾರಿಸಿ ತಮ್ಮ ಗಮನಕ್ಕೆ ತಂದರೆ, ಆಯಾ ಇಲಾಖೆಯ ಸಚಿವರನ್ನು ಭೇಟಿಯಾಗಿ ತಾಲೂಕಿಗೆ ಅಗತ್ಯವಿರುವ ಸೌಕರ್ಯಗಳು ಮತ್ತು ಅಭಿವೃದ್ಧಿಗೆ ಅನುದಾನ ಪಡೆಯಲು ಅನುಕೂಲವಾಗಲಿದೆ ಎಂದರು.


ತಾಳಗುಪ್ಪ ಗ್ರಾಮದಲ್ಲಿ ಅರಣ್ಯ ಭೂಮಿ ಸಾಗುವಳಿದಾರರನ್ನು ತೆರವು ಮಾಡಿದ ಘಟನೆ ಪುನಾರಾವರ್ತಿತವಾಗಬಾರದು. ಟ್ರಂಚ್ ಮಾತ್ರ ತೆಗೆಯಲು ಕೋರ್ಟ್ ಆದೇಶ ನೀಡಿದ್ದರೂ ಸಹ ಬೆಳೆನಾಶ ಮಾಡಲಾಗಿದೆ. ಇಂತಹ ಪ್ರಕರಣ ನಡೆಯದಂತೆ ಅರಣ್ಯಾಧಿಕಾರಿಗಳಿಗೆ ಎಚ್ಚರಿಸಿದ ಅವರು, ಕಚವಿ ಏತ ನೀರಾವರಿಯನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಂಡು ಪೂರ್ಣಗೊಳಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ಸಾಗರ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ತಾಪಂ ಆಡಳಿತಾಧಿಕಾರಿ ಹಾಗೂ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಪೂರ್ಣಿಮಾ, ತಹಶೀಲ್ದಾರ್ ಹುಸೇನ್ ಸರಕಾವಸ್, ತಾಲೂಕು ಪಂಚಾಯ್ತಿ ಇಒ ನಾಗರಾಜ್ ಅನ್ವೇಕರ್, ಡಿವೈಎಸ್‌ಪಿ ಶಿವಾನಂದ ಮದರಕಂಡಿ ಸೇರಿದಂತೆ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!