ಉಳ್ಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಡ ಮಂಚಾಲೆ ಗ್ರಾಮದ ಸರ್ವೇ ನಂ. ೫೯ರಲ್ಲಿ ವೆಂಕಟೇಶ ಬಿನ್ ಕೊಲ್ಲೂರಪ್ಪ ಎಂಬುವವರು ಗ್ರಾಮಕ್ಕೆ ಸೇರಿದ ಎರಡು ಎಕರೆ ಜಮೀನು ಅತಿಕ್ರಮಿಸಿದ್ದಾರೆ. ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದಾಗ್ಯೂ ಅವರು ಮೌನವಹಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ ಎಂದು ಗ್ರಾಮಸ್ಥರಾದ ಪರಮೇಶ್ವರ ದೂರಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಮೀನು ಒತ್ತುವರಿ ಮಾಡುತ್ತಿರುವುದನ್ನು ಗ್ರಾಮಸ್ಥರು ವಿರೋಧಿಸಿದರೆ ಅಂತಹವರಿಗೆ ಒತ್ತುವರಿದಾರ ವೆಂಕಟೇಶ್ ಕೊಲೆ ಬೆದರಿಕೆ ಹಾಕವುವುದು, ಹಲ್ಲೆ ನಡೆಸುವುದು, ಅಶ್ಲೀಲ ಶಬ್ದಗಳಿಂದ ನಿಂದಿಸಿ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿದರು.
ಸರ್ವೇ ನಂ. ೫೯ರಲ್ಲಿರುವ ಜಮೀನನ್ನು ಗ್ರಾಮಸ್ಥರು ಸಮತಟ್ಟುಗೊಳಿಸಿ ಅಂಗನವಾಡಿ, ಸಮುದಾಯ ಭವನ ಮತ್ತು ಆಟದ ಮೈದಾನಕ್ಕಾಗಿ ಮೀಸಲಿರಿಸಿಕೊಂಡಿದ್ದೇವೆ. ಪದೇಪದೇ ವೆಂಕಟೇಶ್ ಈ ಜಾಗ ಒತ್ತುವರಿ ಮಾಡುವ ಪ್ರಯತ್ನ ನಡೆಸುತ್ತಿದ್ದು,
ಗ್ರಾಮಸ್ಥರು ಕಂದಾಯ ಇಲಾಖೆಗೆ ದೂರು ನೀಡಿದ್ದರ ಹಿನ್ನೆಲೆಯಲ್ಲಿ ಹಿಂದಿನ ತಹಶೀಲ್ದಾರ್ ಒತ್ತುವರಿ ತೆರವು ಮಾಡಿದ್ದರು. ಈಗಿನ ತಹಶೀಲ್ದಾರ್ ಮಾತ್ರ ಮನವಿ ಸಲ್ಲಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ಈ ಜಾಗಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿಗಳ ಮೂಲಕ ಕಡತ ಸರ್ಕಾರಕ್ಕೆ ಹೋಗಿದ್ದು ಸದ್ಯದಲ್ಲಿಯೆ ಗ್ರಾಮಸ್ಥರಿಗೆ ಮಂಜೂರಾಗುತ್ತದೆ. ಅಷ್ಟರೊಳಗೆ ಜಮೀನು ಅತಿಕ್ರಮಿಸುವ ಸಂಚು ನಡೆಸಲಾಗುತ್ತಿದೆ ಎಂದರು.
ಗ್ರಾಮಕ್ಕೆ ಜಾಗ ಉಳಿಸಲು ಹೋರಾಟ ನಡೆಸುತ್ತಿರುವ ಗ್ರಾಮದ ಯುವಕರನ್ನು ಟಾರ್ಗೇಟ್ ಮಾಡಿ ವೆಂಕಟೇಶ್ ಸುಳ್ಳು ಕೇಸು ದಾಖಲಿಸುತ್ತಿದ್ದಾರೆ. ಸುಮಾರು ೨೪ ಜನರ ಮೇಲೆ ದೂರು ಸಲ್ಲಿಸಲಾಗಿತ್ತಾದರೂ ಅದು ಸಾಬೀತಾಗಿಲ್ಲ.
ಜಮೀನಿನ ಎದುರಿನ ರಸ್ತೆಗೆ ಮರದ ತುಂಡನ್ನು ಅಡ್ಡಹಾಕಿ ಯಾರೂ ಓಡಾಡಬೇಡಿ ಎಂದು ವೆಂಕಟೇಶ್ ತಾಕೀತು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಒತ್ತುವರಿಗಾಗಿ ಪ್ರಯತ್ನ ನಡೆಯುತ್ತಿದ್ದು, ಗ್ರಾಮಸ್ಥರು ಮನವಿ ಕೊಟ್ಟುಕೊಟ್ಟು ಬೇಸತ್ತಿದ್ದೇವೆ. ತಕ್ಷಣ ಶಾಸಕರು ಮತ್ತು ತಹಶೀಲ್ದಾರರು ಗ್ರಾಮಕ್ಕೆ ಭೇಟಿ ನೀಡಿ ಒತ್ತುವರಿ ತೆರವಿಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗೋಷ್ಟಿಯಲ್ಲಿ ದಿವಾಕರ್, ಧರ್ಮೇಶ್, ಪವನ್, ರಘು ಹಾಜರಿದ್ದರು.