ಶಿವಮೊಗ್ಗ, ಮೇ.03
ಶಿವಮೊಗ್ಗ ನಗರದ ವಿಧಾನಸಭಾ ಕ್ಷೇತ್ರದಲ್ಲಿ ಪೈಪೋಟಿಯಲ್ಲಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು ಅಸಮರ್ಥರಾಗಿದ್ದಾರೆ. ರಾಷ್ಟ್ರೀಯ ಮತ್ತು ಪ್ರಾದೇಶಿಕ ಈ ಪಕ್ಷಗಳಿಂದ ಸೂಕ್ತ ಅಭ್ಯರ್ಥಿ ನಿಂತಿಲ್ಲ. ಹಾಗಾಗೀ ಶಿವಮೊಗ್ಗ ಜನತೆ ಪಕ್ಷೇತರ ಅಭ್ಯರ್ಥಿ ಹಾಗೂ ಗೆಳೆಯರ ಬಳಗದ ನನ್ನನ್ನು ಬೆಂಬಲಿಸಲಿದ್ದಾರೆ ಎಂದು ಎಂ.ಆರ್.ಅನಿಲ್ ತಿಳಿಸಿದರು.
ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಕರ್ನಾಟಕ ಗೆಳೆಯರ ಬಳಗ ಕಳೆದ ೧೫ ವರ್ಷಗಳಿಂದ ತಮ್ಮದೇ ಹಣದಲ್ಲಿ ಸಾಮಾಜಿಕ ಸೇವಾ ಕಾರ್ಯಗಳ ಜೊತೆಗೆ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾ ಬಂದಿದೆ. ಹಿಂದೆ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅನುಭವದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಶಿವಮೊಗ್ಗ ಹಾಗೂ ಶಿಕಾರಿಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ ಎರಡೂ ಕಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ಅವರು ತಮ್ಮ ವಾರ್ಡ್ನ ಅಭಿವೃದ್ಧಿಯನ್ನು ಸರಿಯಾಗಿ ಮಾಡಿಲ್ಲ. ಇನ್ನೂ ಬಿಜೆಪಿಯ ಚೆನ್ನಬಸಪ್ಪ ಅವರು ಹಿಂದೆ ಮಾಡಿದ ಅಭಿವೃದ್ಧಿಯೇ ಸಾಕಷ್ಟಿದೆ ಎಂದು ವ್ಯಂಗವಾಡಿ, ಜೆಡಿಎಸ್ನ ಆಯನೂರು ಮಂಜುನಾಥ್ ಇಲ್ಲಿಯವರೆಗೂ ನಾಲ್ಕು ಸದನಗಳಲ್ಲಿ ಕರ್ತವ್ಯ ನಿರ್ವಹಿಸಿರುವ ಅವರು ನೀಡಿರುವ ಕೊಡುಗೆಯಾದರೂ ಏನೂ..? ಈ ಮೂವರು ಸ್ವಂತ ಹಣದಿಂದ ಯಾವುದಾದರೂ ಸಮಾಜಸೇವೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಬೆಳೆದ ನನಗೆ ನನ್ನ ಬದುಕಿನ ಆರ್ಥಿಕ ಲಾಭದಲ್ಲಿ ಒಂದಿಷ್ಟು ಪಾಲನ್ನು ನೊಂದವರ ನೆರವಾಗಿ ಬಳಸಿದ್ದೇನೆ. ನಾನು ನಿಮ್ಮ ಸೇವಕನಾಗಿ ಆಯ್ಕೆಯಾದರೆ ಹೊಸ ಹೊಸ ಯೋಜನೆಗಳನ್ನು ತರುತ್ತೇನೆ. ಪ್ರಸಕ್ತ ಸಹಕಾರ ಸಂಘದ ಮೂಲಕ ಜನರ ಸಹಕಾರದೊಂದಿಗೆ ನಿರುದ್ಯೋಗ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸೂಕ್ತವಾದ ಕಾರ್ಖಾನೆಗಳನ್ನು ತರುವ ಚಿಂತನೆ ಇದೆ ಎಂದರು.
ಯಾವುದೇ ಪಲಾಪೇಕ್ಷೆ ಹೊಂದಿರದ ನಾನು ಜನರ ಜೊತೆ ಗುರುತಿಸಿಕೊಳ್ಳಲು ಹಂಬಲಿಸಿದ್ದೇನೆ. ಅದು ಮತದಾರರಿಗೆ ಗೊತ್ತಾಗಿದೆ ಎಂಬುದು ಪ್ರಚಾರದ ವೇಳೆಯಲ್ಲಿ ತಿಳಿದು ಬರುತ್ತದೆ. ಹಾಗಾಗೀ ನನಗೆ ಅತಿ ಹೆಚ್ಚು ಮತಗಳು ಲಭಿಸಲಿವೆ ಎಂದರು.
ಉಚಿತ ಸಾಮೂಹಿಕ ವಿವಾಹ, ವಿದ್ಯಾಭ್ಯಾಸ ಕ್ರೀಡೆಗೆ ಸಹಾಯ, ಆರೋಗ್ಯ, ರಕ್ತದಾನ, ಕ್ರೀಡಾಕೂಟಗಳು ನಾಡಹಬ್ಬ ನಡೆಸುವ ಜೊತೆಗೆ ಬಗರ್ಹುಕುಂ ಹಿಡುವಳಿದಾರರಿಗೆ ಪಹಣಿ ಕೊಡಿಸುವ ಪ್ರಯತ್ನ, ಸರ್ಕಾರಿ ಶಾಲೆಗಳ ಉನ್ನತೀಕರಣ ಸೇರಿದಂತೆ ಹಲವು ಯೋಜನೆಗಳನ್ನು ಹೊಂದಿರುವ ನಾನು ಪ್ರಸಕ್ತ ವರ್ಷ ಉಂಗುರದ ಗುರುತಿನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಆಶೀರ್ವಾದಿಸಲು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಗೆಳೆಯರ ಬಳಗದ ರಾಮು ಉಪಸ್ಥಿತರಿದ್ದರು.