ಶಿವಮೊಗ್ಗ, ಅ.09:
ಮಾನವ ಹಕ್ಕುಗಳ ಆಯೋಗ ಪ್ರಸಕ್ತ ವರ್ಷದ ಶಾಲೆಗಳ ಆರಂಭ ಹಾಗೂ ಕಲಿಕೆಯ ಬಗ್ಗೆ ನೀಡಿರುವ ಶಿಫಾರಸನ್ನು ಅನುಷ್ಠಾನಗೊಳಿಸಬೇಕು ಎಂದು ಶಿವಮೊಗ್ಗ ಮಾನವಹಕ್ಕುಗಳ ಕಮಿಟಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
2020-21ರ ಸಾಲಿನ ಕಲಿಕೆಯನ್ನು ಪರೀಕ್ಷಾ ರಹಿತ ಕಲಿಕಾ ವರ್ಷವೆಂದು ಘೋಷಿಸಬೇಕು. 30 ಕ್ಕಿಂತ ಕಡಿಮೆ ಮಕ್ಕಳಿರುವ ಸರ್ಕಾರಿ ಕಿರಿಯ ಹಾಗೂ ಹಿರಿಯ ಶಾಲೆಗಳನ್ನು ಕೂಡಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು. ಮೊದಲ 15 ದಿನ ಅರ್ಧ ದಿನದ ಮಟ್ಟಿಗೆ ಶಾಲೆಗಳು ಕರ್ತವ್ಯ ನಿರ್ವಹಿಸಬೇಕು ಎಂದು ಆಯೋಗ ಸರ್ಕಾರಕ್ಕೆ ಮಾಡಿರುವ ಶಿಫಾರಸನ್ನು ಅಂಗೀಕರಿಸಬೇಕೆಂದು ಕಮಿಟಿ ಒತ್ತಾಯಿಸಿದೆ. ಮಕ್ಕಳಿಗಾಗಿ ಶಾಲೆಗಳನ್ನು ತೆರೆಯುವ ಹಿನ್ನೆಲೆಯಲ್ಲಿ ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಮಕ್ಕಳ ಬಾಲ್ಯ ವಿವಾಹ ಬಾಲಕಾರ್ಮಿಕ ಪದ್ಧತಿ ಮಕ್ಕಳ ಸಾಗಣೆ ಅಂತಹ ಪ್ರಕರಣಗಳಲ್ಲಿ ಸಿಲುಕುವ ಸಾಧ್ಯತೆಗಳಿವೆ ಎಂದು ಆಯೋಗ ವ್ಯಕ್ತಪಡಿಸಿರುವ ಆತಂಕಕ್ಕೆ ಅನುಗುಣವಾಗಿ ಅನುಗುಣವಾಗಿ ಸರ್ಕಾರ ಶಾಲೆಗಳನ್ನು ಆರಂಭಿಸಬೇಕು ಎಂದು ಕಮಿಟಿ ಮುಖ್ಯಮಂತ್ರಿಗಳಿಗೆ ಜಿಲ್ಲಾ ಆಡಳಿತದ ಮೂಲಕ ಒತ್ತಾಯಿಸಿದೆ.
ಪ್ರಸಕ್ತ ಲಭ್ಯವಿರುವ ಮಾಹಿತಿ ಪ್ರಕಾರ ಕೊರೊನಾ ಸಮಸ್ಯೆ ವಯಸ್ಸಾದವರಿಗೆ ಮತ್ತು ಬೇರೆ ಕಾಯಿಲೆಗಳ ಇತಿಹಾಸ ಇರುವವರಿಗೆ ಕಠಿಣವಾಗಿದೆ. ಮಕ್ಕಳು ಹೆಚ್ಚಿನ ರೋಗನಿರೋಧಕ ಶಕ್ತಿ ಹೊಂದಿರುತ್ತಾರೆ ಎಂದಿರುವ ಆಯೋಗದ ಅಭಿಪ್ರಾಯವನ್ನು ಮನ್ನಿಸಿ ಸರ್ಕಾರ ಶಾಲೆಗಳ ಆರಂಭಕ್ಕೆ ಮುಂದಾಗಬೇಕು. ಪಾಳಿ ವ್ಯವಸ್ಥೆ ಜಾರಿಗೆ ತರಬೇಕು. 11 ವರ್ಷ ದಾಟಿದ ಮಕ್ಕಳಿಗೆ ಕಡ್ಡಾಯವಾಗಿ ಗುಣಮಟ್ಟದ ಆಹಾರ ಒದಗಿಸಬೇಕು. ಮಕ್ಕಳಿಗೆ ರೋಗ ನಿರೋಧಕ ಮಾತ್ರೆಗಳನ್ನು ನೀಡಬೇಕು. ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕು. ವ್ಯಕ್ತಿಗತ ಅಂತರ ಕಾಪಾಡಬೇಕು. ಅಡುಗೆ ಸಿಬ್ಬಂದಿಯನ್ನು ಕೊವೀಡ್ ಪರೀಕ್ಷೆಗೊಳಪಡಿಸಿ ಅವರಿಗೆ ವೈಯಕ್ತಿಕ ಸ್ವಚ್ಛತೆ ಬಗ್ಗೆ ಮಾರ್ಗದರ್ಶನ ನೀಡಬೇಕು ಎಂದಿರುವ ಆಯೋಗದ ಶಿಫಾರಸನ್ನು ಅಂಗೀಕರಿಸಲು ವಿನಂತಿಸಲಾಗಿದೆ. ಶಾಲೆಗಳನ್ನು ಆರಂಭಿಸುವ ಪೂರ್ವದಲ್ಲಿ ಪೋಷಕರು ಮತ್ತು ಎಸ್ ಡಿಎಂಸಿ ಜೊತೆ ಸಭೆ ನಡೆಸಿ ಗ್ರಾಮ ಪಂಚಾಯಿತಿ ನೆರವಿನಲ್ಲಿ ಎಲ್ಲ ಶಾಲೆಗಳನ್ನು ಸ್ವಚ್ಛಗೊಳಿಸಬೇಕು ಎಂದಿರುವ ಆಯೋಗದ ಸೂಚನೆಯನ್ನು ಪರಿಪಾಲಿಸಬೇಕು ಎಂದು ಮಾನವ ಹಕ್ಕುಗಳ ಕಮಿಟಿ ವಿನಂತಿಸಿದೆ. ಕಮಿಟಿಯ ರಾಜ್ಯಾಧ್ಯಕ್ಷ ಕೆ. ನಾಗರಾಜ್, ಜಿಲ್ಲಾ ಪ್ರಮುಖರಾದ ದಯಾನಂದ್, ರಮೇಶ್, ಅಣ್ಣಪ್ಪ, ರಮೇಶ್, ವಿನೋದ್ , ಮಂಜುನಾಯ್ಡು ಹಾಗೂ ಇತರರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!