ಶಿವಮೊಗ್ಗ , ಏ. 29:
ಮತದಾನ ಜಾಗೃತಿಗಾಗಿ ನಾಳೆ ರಾಜ್ಯಾದ್ಯಂತ ‘ನಮ್ಮ ನಡೆ ಮತಗಟ್ಟೆಯ ಕಡೆ’ ಕಾರ್ಯಕ್ರಮದಡಿ ಏಕಕಾಲಕ್ಕೆ ಧ್ವಜಾರೋಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈತನ ನಿಟ್ಟಿನಲ್ಲಿ ಜಿಲ್ಲೆಯಲ್ಲಿ 2018ರ ಚುನಾವಣೆಯಲ್ಲಿ ಕಡಿಮೆ ಮತದಾನ ಆಗಿರುವ ಮತಗಟ್ಟೆಗಳಲ್ಲಿ ಏ.30 ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ಆಯೋಜಿಸಲಾಗಿದೆ.
ಬಿಳಿ ಬಟ್ಟೆಯ ಮೇಲೆ ರಾಜ್ಯದ ನಕ್ಷೆ ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ಎಂಬ ಬರಹ ಹಾಗೂ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ಹಾಗೂ ಚಿನ್ನೆ ಇರುವ ವಿಶೇಷ ಧ್ವಜದ ಮಾದರಿ ಸಿದ್ಧಪಡಿಸಿ ಸ್ವೀಪ್ ಕಮಿಟಿಗಳಿಗೆ ಕಳಿಸಲಾಗಿದೆ. ನಾಳೆ ಬಿಎಲ್ಒಗಳು ಧ್ವಜಾರೋಹಣ ನೆರವೇರಿಸಲಿದ್ದು, ಮತಗಟ್ಟೆ, ಗ್ರಾಪಂ ಅಧಿಕಾರಿ, ಸಿಬ್ಬಂದಿ, ಆಶಾ, ಅಂಗನವಾಡಿ, ಕಾರಕರ್ತೆಯರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಯಾವುದೇ ರಾಜಕೀಯ ಪ್ರೇರಿತ ಅಥವಾ ಸಂಬಂಧಿತ ವ್ಯಕ್ತಿಗಳು ಭಾಗವಹಿಸುವುದಕ್ಕೆ ಅವಕಾಶವಿರುವುದಿಲ್ಲ.
ಆಯೋಗದ ರಾಜ್ಯ, ಜಿಲ್ಲಾ ರಾಯಭಾರಿಗಳಾಗಿರುವ ಸೆಲೆಬ್ರಿಟಿಗಳ ನೆರವಿನೊಂದಿಗೆ ಜಾಥಾ, ರಂಗೋಲಿ, ಬೈಕ್ ಜಾಥಾ ಇತ್ಯಾದಿಗಳ ಮೂಲಕ ಮತದಾರರಲ್ಲಿ ಕಡ್ಡಾಯ ಮತದಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು ಸಖಿ, ಅಂಗವಿಕಲ, ಯುವ ಮತದಾರರು ಹಾಗೂ ಪರಂಪರೆ ಮತಗಟ್ಟೆಗಳನ್ನೂ ಸ್ಥಾಪಿಸಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ ತಿಳಿಸಿದ್ದಾರೆ.