ಶಿವಮೊಗ್ಗ,ಏ.27: ಇನ್ನೂ ಸಂಪೂರ್ಣವಾಗಿ ಮುಗಿಯದ ತಾಲೂಕಿನ ಹೊಳಲೂರು-ಬೂದಿಗೆರೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಕಾಮಗಾರಿಯನ್ನು ಗ್ರಾಮಾಂತರ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಅಶೋಕ್ ನಾಯ್ಕ ಸದರೀ ಕಾಮಗಾರಿಯ ಸ್ಥಳ ಪರಿಶೀಲನೆ ಮತ್ತು ಪರೀಕ್ಷಾರ್ಥ ಚಾಲನೆ ನೀಡಲು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ತಂದು ಸ್ಥಳ ಭೇಟಿ ಮಾಡಲು ಯೋಜನೆ ರೂಪಿಸುತ್ತಿದ್ದಾರೆ. ಇದರ ಜೊತೆ ಅವರ ನಿಕಟವರ್ತಿ ಇಂಜಿನಿಯರ್ ಚುನಾವಣೆ ಹೊತ್ತಿನಲ್ಲಿ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಕಾರ್ಯಾಧ್ಯಕ್ಷ ಪಿ.ಆರ್. ಕಾಂತರಾಜ್ ಆರೋಪಿಸಿದರು.
ಅವರು ಇಂದು ಮಥುರಾ ಪ್ಯಾರಾಡೈಸ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಯೋಜನೆಗೆ ಚಾಲನೆ ನೀಡಲು ಶಿವಮೊಗ್ಗದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಅವರು ಶಾಸಕರಿಗೆ ಅನುಕೂಲ ಮಾಡಿಕೊಡಲು ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಸಹ ಯತ್ನಿಸುತ್ತಿದ್ದಾರೆ ಹಾಗೆಯೇ ಇದೆ ನೆಪದಲ್ಲಿ ಎಲ್ಲಿ ಬೇಕಲ್ಲಿ ಹೋಗುತ್ತಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ದೂರಿದರು.
ಚುನಾವಣಾ ನೀತಿಸಂಹಿತೆ ಜಾರಿಯಲ್ಲಿದ್ದರೂ ಸಹ ಕಾರ್ಯಪಾಲಕ ಇಂಜಿನಿಯರ್ ಅವರು ಸದರಿ ಕಾಮಗಾರಿಯು ಪ್ರಗತಿಯಲ್ಲಿದ್ದು, ಇನ್ನೂ ಪೂರ್ಣಗೊಳ್ಳದ ಕಾರಣ ಮತ್ತು ಯಾವುದೇ ಪರೀಕ್ಷಾರ್ಥ ಚಾಲನೆ ಮಾಡಿ ಕೆರೆಗೆ ನೀರು ಹರಿಸಿರುವುದಿಲ್ಲ. ಆದ್ದರಿಂದ ಸದರೀ ಕಾಮಗಾರಿಯನ್ನು ಕೈ ಬಿಡುವಂತೆ ಜಿಪಂ ಸಿಇಒ ಅವರಿಗೆ ಕೋರಿದ್ದರು.
ಆದರೂ ಸಹ ಶಾಸಕರ ಒತ್ತಡದಿಂದ ಯಾವ ರಾಜಕಾರಣಿಗಳೂ ಸ್ಥಳಕ್ಕೆ ಹೋಗಲು ಅನುಮತಿ ಇಲ್ಲದಿದ್ದರೂ ಸಹ ಸ್ಥಳ ಪರಿಶೀಲನೆಗೆ ಮತ್ತು ಪರೀಕ್ಷಾರ್ಥ ಚಾಲನೆಗೆ ನೀರಾವರಿ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಈ ಕುರಿತಂತೆ ಅವರು ಹಿರಿಯ ಅಧಿಕಾರಿಗಳಿಗೆ ಮತ್ತು ಚುನಾವಣಾ ಅಧಿಕಾರಿಗಳಿಗೂ ಕೂಡ ಪತ್ರ ಬರೆದು ಒಪ್ಪಿಗೆ ಪಡೆಯಲು ಹವಣಿಸುತ್ತಿದ್ದಾರೆ. ಇದು ನೀತಿಸಂಹಿತೆಗೆ ವಿರೋಧವಾಗಿದೆ. ಆದ್ದರಿಂದ ಯಾವುದೇ ಕಾರಣಕ್ಕೂ ಇದಕ್ಕೆ ಅನುಮತಿ ನೀಡಬಾರದೆಂದು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಾವು ಮನವಿ ಮಾಡಿದ್ದೇವೆ. ವಿಶೇಷವಾಗಿ ಈಗ ನೀತಿ ಸಂಹಿತೆ ಅವಧಿಯಲ್ಲಿ ಮಾಹಿತಿ ನೀಡದೇ ತುಮಕೂರಿಗೆ ಹೋಗಿ ಅಲ್ಲಿ ಉಳಿದುಕೊಂಡಿದ್ದಾರೆ ಎಂದರು.
ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕೂಡ ಒಂದು ಪಕ್ಷದ ಹಿತಕ್ಕಾಗಿ ಅನುಕೂಲ ಮಾಡಿಕೊಡಲು ಹೊರಟಿರುವ ಕಾರ್ಯಪಾಲಕ ಇಂಜಿನಿಯರ್ ಹೆಚ್.ಎಲ್. ಮೂಡಲಗಿರಿಯವರನ್ನು ಅಮಾನತಿನಲ್ಲಿಡಬೇಕು ಹಾಗೂ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಒಳಪಡಿಸಬೇಕು. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗುತ್ತದೆ. ಕ್ರಮ ಕೈಗೊಳ್ಳದಿದ್ದರೆ ಜೆಡಿಎಸ್ ಪಕ್ಷದ ವತಿಯಿಂದ ಉಗ್ರ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬೂದಿಗೆರೆ ಬಸವರಾಜ್, ಎಂ.ಆರ್. ನರಸಿಂಹಮೂರ್ತಿ, ರಮೇಶ್, ಶಿವಣ್ಣ ಗೌಡ, ರವಿ, ಪ್ರಸನ್ನಗೌಡ ಇನ್ನಿತರರು ಇದ್ದರು.