ಬಂಡಾಪುರದ ರಾಕೇಶ ಹೆಂಗೆಂಗೋ ಕಷ್ಟಪಟ್ಟು ಸುಂಟ್ರಕ್ಕನಳ್ಳಿ ಕಾಲೇಜಿಗೋಗಿ ಡಿಗ್ರಿ ಪಾಸ್ ಮಾಡಿದ. ಅಪ್ಪ ಇಲ್ಲದ ತಬ್ಬಲಿ ಬೇರೆ. ಊರಲ್ಲಿ ಇವನ ಕಂಡ್ರೆ ಎಲ್ರಿಗೂ ಒಂಥರಾ ಅನುಕಂಪ, ನಮ್ಮೊರಲ್ಲಿ ಪಸ್ಟ್ ಡಿಗ್ರಿ ಮಾಡಿದವನೆಂಬ ಹೆಮ್ಮೆಯೂ ಇತ್ತು.
ಅಪ್ಪನ ಮುಕ್ಕಾಲು ಎಕರೆ ಭೂಮಿಯಲ್ಲಿ ಎಂತ ಮಾಡೋಕಾಗೊದಿಲ್ಲ. ಇರೋದೊಂದು ಇಪ್ಪತ್ತಡಿ ಮನೆ ಎಂತಕ್ಕೆ ಬರುತ್ತೆ ಅಂತ ಹೆಂಗೆಂಗೂ ಮಾಡಿ ಡಿಗ್ರಿ ಮುಗ್ಸಿದ್ದೀನಿ. ಎಲ್ಲಾರೂ ಒಂದ್ ಕೆಲಸ ಸಿಗುತ್ತೆ ಅಂತ ಪ್ಯಾಟೆ ಕಡೆ ಹೊಂಟ.
ಇವನಿಗೆ ಟೈರ್ ಅಂಗಡೀಲಿ ಒಂದ್ ಕೆಲ್ಸ ಸಿಕ್ಕು. ಲೆಕ್ಕ ಬರೆದ್ರೆ ಸಾಕು ಎಂಬತ್ತಿತ್ತು ಕೆಲಸ. ಹಮಾಲಿಯವ್ರಿಲ್ಲ ಅಂದ್ರೆ ಮಾತ್ರ ಟೈರ್ ತಕ್ಕೊಡೋದಷ್ಟೆ ಇವ್ನ ಕೆಲ್ಸ.
ಹೆಂಗೂ ಒಂದ್ ಸಣ್ಣ ರೂಮ್ ತಗೊಂಡು ಅದೇ ಹಳೇ ಸೀಮೆಣ್ಣೆ ಸ್ಟೌವ್ ನಲ್ಲಿ ಅನ್ನಾಡ್ಕೊತ್ತಿದ್ದ. ಹೋಟ್ಲಾಗೆ ಹತ್ ರೂಪಾಯಿ ಸಾರು ಇವನಿಗೆ ಸಾಕಾಗ್ತಿತ್ತು. ಹೆಂಗೋ ಜಮೀನು ಗುತ್ತಿಗೆಗೆ ಹಾಕಿದ್ದ ಒಂದಿಷ್ಟು ರೊಕ್ಕ ಆ ತಿಂಗಳಿಗೆ ಆಯ್ತು.
ಅವತ್ತು ಸೋಮವಾರ, ಒಂದನೇ ತಾರೀಕು. ಇವತ್ತು ಸಂಬಳ ಬರುತ್ತೆ ಅಂತ ಕುಶಿಯಾಗಿ ಕೆಲಸಕ್ಕೆ ಹೋದ. ಇವತ್ತು ಸಂಬಳ ಸಿಕ್ಕಿಲ್ಲ ಅಂದ್ರೆ ಉಪಾಸನೇ ಗತಿಯಾಗಿತ್ತು.
ಸಂಜೆ ಅಂಗ್ಡಿ ಮಾಲಿಕ್ರು ಬಂದ್ರು. ಏನೋ ರಾಕೇಶ ಹೆಂಗೈತೋ ಕೆಲಸ. ಚನ್ನಾಗಿದೀಯಾ ಅಂತ ಪ್ರೀತಿಯಿಂದ ಮಾತಾಡಿಸಿದ್ರು. ಹಾಗೇ ನಗ್ತಿದ್ದ ಸವ್ಕಾರ್ರು ಅವನ ಕೈಗೆ ಒಂದಿಷ್ಟು ನೋಟುಗಳನ್ನು ಕೊಟ್ರು. ನಿನ್ ಪಗಾರ ತಗೋ ಅಂದ್ತು.
ಯಾಕೋ, ನಾ ಕೇಳಿದ್ದಕ್ಕೆ ತುಂಬಾನೇ ಜಾಸ್ತಿ ಕೊಟ್ಟಿದ್ದಾರೆ ಅನ್ಸಿ ರಾಕೇಶ ಹಂಗೇ ನೋಟುಗಳನ್ನು ಎಣಿಸಿದ. ನಾ ಕೇಳಿದ್ದು ಒಂದೂವರೆ ಸಾವ್ರ. ಯಜಮಾನ್ರು ಮೂರು ಸಾವ್ರ ಕೊಟ್ಟಿದ್ದು ಕಂಡು ಕುಶಿಯಾದ.
ಜಾಸ್ತಿ ಐತೆ ಸರ್ ಅಂದ. ನೋಡ್ಲೇ ರಾಕೇಶ ನಿನ್ ಕೆಲ್ಸ, ಶ್ರದ್ದೆ ನೋಡಿ ನಾನೇ ಕೊಟ್ಟಿದ್ದೇನೆ ಇಟ್ಕೊ. ಇನ್ಮುಂದೆ ನಿನಗೆ ಇಷ್ಟೇ ಸಂಬ್ಳ ಅಂದ್ರು. ಶಾಕ್ ಅಸದ ರಾಕೇಶ ಕುಸಿಯಿಂದ ಕುಣಿದು, ಸವ್ಕಾರರ ಕಾಲಿಗೆ ಬಿದ್ದ.
ಅಲ್ಲಿಯವರೆಗೆ ಎಂದೂ ಅಷ್ಟು ಹಣ ಕಾಣದಿದ್ದ ರಾಕೇಶ ಸಂತೋಷದಿಂದ ರೂಮಿಗೆ ಹೋದ. ಹೊಸ ಸ್ಟವ್, ಅಕ್ಕಿ, ಪಾತ್ರೆ ಮತ್ತಿತರೆ ಸಾಮಾನು ತಂದ. ದಿನ ಹೀಗೆ ಸಾಗುತ್ತಿತ್ತು.
ಈಗ ರಾಕೇಶ ಬೈಕ್ ತಗೊಂಡ., ಬೇರೆ ದೊಡ್ಡ ಮನೆ ಬಾಡಿಗೆಗೆ ತಗೊಂಡ. ವಯಸ್ಸು ಇಪ್ಪತ್ತೇಳಾಗಿತ್ತು. ಅವನತ್ರ ಹಣ ಬಂದದ್ದು ನೋಡಿ ಇಲ್ಲಿಯವರೆಗೆ ಹತ್ತಿರ ಸೇರಿಸದಿದ್ದ ನೆಂಟ್ರೆಲ್ಲಾ ಬಂದು ಅವನಿಗೆ ಮದುವೆ ಮಾಡೋಕೆ ಹೋದ್ರು, ನನ್ ಮಗಳನ್ನು ಕೊಡ್ತೀನಿ ಅಂತ ಬಹಳ ಜನ ಬೆನ್ನತ್ತಿದ್ದರು.. ಆಗ ಒಂದು ಹುಡುಗಿಯನ್ನ ಮದುವೆಯಾದ. ಹೊಸ ಬದುಕು ಆರಂಭ ಆಯ್ತು.
ನೋಡಲು ಸುಂದರವಾಗಿದ್ದ ಹುಡುಗಿ ಎಸ್ ಎಲ್ ಸಿ ಪಾಸ್ ಆಗಿದ್ಲು ಹಳ್ಳಿ ಹುಡುಗಿ ಚಂದ ಸಂಸಾರ ಮಾಡಬಹುದು ಅಂತ ಇವನೇ ಇಷ್ಟಪಟ್ಟು ಆಕೆಯನ್ನ ಕಟ್ಟಿಕೊಂಡು ಬದುಕ ನೊಗ ಹೊತ್ತು ಮನೆ ನೋಡಿಕೊಳ್ಳುತ್ತಿದ್ದ. ಒಂದು ಮಗು ಆಯಿತು ಒಂದಿಷ್ಟು ಚಂದ ಸಂಸಾರ ಕಟ್ಟಿಕೊಂಡಿದ್ದ ರಾಕೇಶ ಇತ್ತೀಚೆಗೆ ನೆಮ್ಮದಿ ಕಳೆದುಕೊಂಡು ಹುಚ್ಚನಂತಾಗಿದ್ದ. ಕಾರಣ ಅವನ ಹೆಂಡತಿ ಕಿರಿ ಕಿರಿಯೆ ಎಂಬುದು ಅರ್ಥವಾಗಲು ಬಹಳ ಸಮಯ ಬೇಕಾಗಲಿಲ್ಲ.
ಪದೇ ಪದೇ ಇದು ತನ್ನಿ, ಅದು ತನ್ನಿ, ಸೀರೆ ಕೊಡಿಸಿ, ಬಂಗಾರ ಕೊಡಿಸಿ ಎಂದು ದುಂಬಾಲು ಬೀಳುತ್ತಿದ್ದಳು. ಅತ್ಯಂತ ತಾಳ್ಮೆಯಿಂದಲೇ ಮಾತನಾಡುತ್ತಿದ್ದ ರಾಕೇಶ ಕೊನೆಗೆ ತಾಳ್ಮೆ ಕಳೆದುಕೊಂಡು ಹುಚ್ಚನಂತಾದ. ಹಾಗೆಯೇ ಕುಡಿತದ ಚಟಕ್ಕೆ ದಾಸನಾದ. ಅವನ ಈ ವರ್ತನೆ ಕಂಡ ಸಾಹುಕಾರರು ಕೊನೆಯ ಅವಕಾಶ ಎಂಬಂತೆ ನೀನು ಸಮಯಕ್ಕೆ ಸರಿಯಾಗಿ ಬರಬೇಕು, ಮೊದಲಿನಂತೆ ಕೆಲಸ ಮಾಡಬೇಕು. ಕೆಟ್ಟಚಟಗಳನ್ನು ಇಲ್ಲಿ ಇಟ್ಟುಕೊಳ್ಳಬಾರದು ಎಂದು ವಾರ್ನಿಂಗ್ ನೀಡಿದರು.
ಮತ್ತದೆ ಬೇಸರದ ಮನಸ್ಸಿನಿಂದ ಮನೆಗೆ ಹೋದ, ಗಂಡನ ಸಮಸ್ಯೆಯನ್ನು ಅರಿತುಕೊಳ್ಳದ ಹೆಂಡತಿ ಕಿರಿಕಿರಿ ಹೆಚ್ಚಾಗಿತ್ತು. ಪದೇಪದೇ ಹಂಗಿಸುವ ಕೆಲಸ ಕಾರ್ಯ ಮಾಡುತ್ತಿದ್ದಳು. ಆಕ್ರೋಶಗೊಂಡ ರಾಕೇಶ ಹೆಂಡತಿ ಕೆನ್ನೆಗೆ ಒಂದು ಬಾರಿಸಿ ಹೊರಬಂದ.
ಆಗ ಅವನ ಅಂಗಡಿಯಿಂದ ಒಂದು ಫೋನ್ ಬಂತು ಇವತ್ತಿನ ಹಾಗೂ ನೆನ್ನೆಯ ಲೆಕ್ಕದಲ್ಲಿ ಸುಮಾರು 2000 ಕಡಿಮೆ ಇದೆಯಂತೆ. ನೀನು ನಾಳೆಯಿಂದ ಬರುವುದು ಬೇಡವಂತೆ ಎಂದು ಯಜಮಾರ್ರು ಹೇಳಿದ್ದಾರೆ ಎಂದರು.
ಕಕ್ಕಾಬಿಕ್ಕಿ ಆದ ರಾಕೇಶ ಅವನ ಅಂಗಡಿಗೆ ಹೋಗುವ ಬದಲು ಮಧ್ಯದ ಅಂಗಡಿಗೆ ಹೋದ. ಹೋಗುವ ಮುನ್ನ ಈ ಬದುಕೇ ಬೇಡವೆನಿಸಿ ಒಂದು ಬಾಟಲಿ ವಿಷವನ್ನೂ ತೆಗೆದುಕೊಂಡು ಹೋಗಿದ್ದ.
ಏಕಾಏಕಿ ಒಂದೇ ಸಾರಿ ಸಾಯೋದು ಕಷ್ಟ ಎನಿಸಿದ್ದರಿಂದ ಮೊದಲು ಒಂದು ಬಾಟಲಿ ಎಣ್ಣೆ ಹೊಡಿಯೋಣ. ಆಮೇಲೆ ಇನ್ನೊಂದು ಬಾಟಲಿಯಲ್ಲಿ ಇದನ್ನು ಹಾಕಿಕೊಂಡು ಕುಡಿಯೋಣ ಎಂದು ಲೆಕ್ಕ ಹಾಕಿದ. ಮೊದಲ ಬಾಟಲಿ ಮುಗಿಸುವ ಮುನ್ನವೇ ಅಂಗಡಿಯ ಸಾಹುಕಾರರೇ, ಇವನಿಗೆ ಫೋನ್ ಮಾಡಿ ಲೆಕ್ಕ ಸರಿ ಇದೆ ಬಾರೋ.ಆ ಕೆಟ್ಟ ಚಟ ಬಿಡು ನೆಮ್ಮದಿಯಾಗಿರು ಎಂದು ಹೇಳಿದರು. ನೀನು ಅಂಗಡಿಗೆ ಬಾ ಎಂದು ಹೇಳಿದರು ಈತ ಮಾತಾಡಲಿಲ್ಲ. ಪೋನ್ ಕಟ್ ಮಾಡಿದ.
ಅಷ್ಟರಲ್ಲಿ ಇನ್ನೊಂದು ಬಾಟಲಿಗೆ ವಿಷವನ್ನು ಮಿಕ್ಸ್ ಮಾಡಿದ್ದ. ಈಗ ಸಾಯೋದು ಬೇಡ. ಒಳ್ಳೆಯದಾಗುತ್ತೆ. ನಾನೇಕೆ ಸಾಯಬೇಕು ಎಂದು ಆ ಬಾಟಲಿಯನ್ನು ಅಲ್ಲಿಯೇ ಬಿಟ್ಟು ಮನೆಗೆ ಹೋದ. ಅಷ್ಟರಲ್ಲಿ ಸಾಹುಕಾರರೇ ಮನೆಯಲ್ಲಿದ್ದರು. ಹೆಂಡತಿಗೆ ಬುದ್ಧಿ ಹೇಳಿದ್ದರು. ನನ್ನ ನೋಡಿ ಮಗನಂತೆ ಪ್ರೀತಿಸುವ ಮಾತನಾಡಿ ನಿನ್ನ ಹೆಂಡ್ತಿಗೆ ಹೇಳಿದ್ದೇನೆ. ಎಂತದೇ ಕಿರಿಕಿರಿ ಇದ್ರೂ ನೀ ಮೋಸಮಾಡೋ ಕೆಲಸಕ್ಕೆ ಕೈಹಾಕಲಿಲ್ಲ ಅಂತ ಶಹಬ್ಬಾಸ್ ಗಿರಿ ಕೊಟ್ರು.
ಇತ್ತ ಮಧ್ಯದ ಅಂಗಡಿಗೆ ಬೆಳಗಿಂದ ಕುಡಿತದ ದಾಸನಾಗಿರುತ್ತಿದ್ದ ವ್ಯಸನಿಯೋರ್ವ ಬಂದ. ಪೂರ್ತಿ ಬಾಟಲಿ ಎಣ್ಣೆ ಬಿಟ್ಟಿರುವುದನ್ನು ಕಂಡು ಸಂತೋಷದಿಂದ ಹಿಂದೆ ಮುಂದೆ ನೋಡದೇ ಒಂದೇ ಏಟಿಗೆ ಕುಡಿದ. ಸದ್ದು ಮಾಡದೆ ಸಾವು ಕಂಡ.
ಸಾವು ಯಾವಾಗ, ಯಾರಿಗೆ, ಎಲ್ಲಿಂದ, ಹೇಗೆ ಬರುತ್ತೆ? ಯಾರಿಗೆ ಗೊತ್ತು?
ಎಸ್ಕೆ.ಗಜೇಂದ್ರಸ್ವಾಮಿ, ಲೇಖಕರು, ಪತ್ರಕರ್ತರು, ಶಿವಮೊಗ್ಗ