ಗೋವುಗಳ ರಕ್ಷಣೆಯೇ ಬಿಜೆಪಿ ಸರ್ಕಾರದ ಆದ್ಯತೆ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.


ಅವರು ಭಾನುವಾರ ಸಂಜೆ ಮಂಡೇನಕೊಪ್ಪದ ಸುರಭಿ ಗೋಶಾಲಾ ನೂತನ ಕಟ್ಟಡದ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಂದು ಗೋವುಗಳನ್ನು ಸಾಕುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಅದರಲ್ಲೂ ಬೀಡಾಡಿ ಗೋವುಗಳ ಸಂಖ್ಯೆ ಹೆಚ್ಚುತ್ತಿದೆ. ಅವುಗಳ ರಕ್ಷಣೆ ನಮ್ಮ ಕರ್ತವ್ಯವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಗೋವಿಗೆ ತನ್ನದೇ ಆದ ಸ್ಥಾನವಿದೆ. ಹಿಂದೂ ಸಮಾಜದ ಪ್ರಮುಖ ಆಲೋಚನೆಯೇ ಗೋವುಗಳ ರಕ್ಷಣೆಯಾಗಿದ್ದು, ಅದು ಈಗ ಸಾಕಾರವಾಗುತ್ತಿದೆ ಎಂದರು.


ಸುಮಾರು ೧೩ ಗೋಶಾಲೆಗಳಿದ್ದು, ಆ ಎಲ್ಲಾ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸುವುದು ನಮ್ಮ ಕೆಲಸವಾಗಿದೆ. ಸುಮಾರು ೫ ಲಕ್ಷಕ್ಕೂ ಅಧಿಕ ಗೋವುಗಳಿದ್ದು, ಕೇವಲ ೧೫೦೦ ರಷ್ಟು ಗೋವುಗಳನ್ನು ರಕ್ಷಣೆ ಮಾಡಿ ಗೋಶಾಲೆಗಳಲ್ಲಿ ಸಾಕುತ್ತಿದ್ದೇವೆ. ಗೋಶಾಲೆಗಳು ಇನ್ನೂ ಹೆಚ್ಚಾಗಬೇಕು ಎಂದರು.


ಈಗಾಗಲೇ ಶಾಸಕ ಕೆ.ಎಸ್. ಈಶ್ವರಪ್ಪ ಅವರು ಸುಮಾರು ೭೫ ಲಕ್ಷ ರೂ. ಅನುದಾನದಲ್ಲಿ ಈ ಗೋಶಾಲೆ ಅಭಿವೃದ್ಧಿಪಡಿಸಿದ್ದಾರೆ. ಇದಕ್ಕಾಗಿ ಹಲವರ ಸಹಕಾರ ಇದೆ. ಬ್ರಾಹ್ಮಣ ಸಮಾಜ ಇದನ್ನು ಅಭಿವೃದ್ಧಿಪಡಿಸುತ್ತಿರುವುದು ಸ್ವಾಗತದ ವಿಷಯವಾಗಿದೆ. ತಮ್ಮ ಶಾಸಕರ ಅನುದಾನವನ್ನು ಕೂಡ ಈ ಗೋಶಾಲೆಗೆ ನೀಡಲಾಗುವುದು. ಎಲ್ಲಾ ಸಹಕಾರ ನೀಡಲಾಗುವುದು ಎಂದರು.


ಇದೇ ಸಂದರ್ಭದಲ್ಲಿ ಪ್ರವೀಣ್, ಮಂಜುನಾಥ್, ಶಿವಯೋಗಿ ಆಲಿ, ನಾನ್ಯನಾಯಕ್, ಕಿರಣ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೆ.ಸಿ. ನಟರಾಜ್ ಭಾಗವತ್, ಪ್ರಮುಖರಾದ ವೆಂಕಟೇಶ ಮೂರ್ತಿ, ಕೇಶವಮೂರ್ತಿ, ಸೂರ್ಯನಾರಾಯಣ್, ಕುಮಾರಶಾಸ್ತ್ರಿ ಮೊದಲಾದವರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!